Advertisement

ಮೂಲ ಸೌಕರ್ಯ ವಂಚಿತ ಗುಲ್ವಾಡಿಯ ಅಬ್ಬಿಗುಡ್ಡಿ ನಿವಾಸಿಗಳು

06:15 AM May 19, 2018 | |

ಬಸ್ರೂರು: ಸರಕಾರಗಳು ಅವೆಷ್ಟೋ ಬಂದು ಹೋಗಿವೆ. ಆದರೆ ಗುಲ್ವಾಡಿ ಗ್ರಾಂ.ಪಂ ವ್ಯಾಪ್ತಿಯ ಒಂದನೇ ವಾರ್ಡಿನ ಅಬ್ಬಿಗುಡ್ಡಿ ಪ್ರದೇಶದ ನಿವಾಸಿಗಳ ಸಮಸ್ಯೆ ಇನ್ನೂ ಬಗೆ ಹರಿದಿಲ್ಲ. 

Advertisement

ಈ ವ್ಯಾಪ್ತಿಯಲ್ಲಿ 30 ಮನೆಗಳಿದ್ದು, ಇಲ್ಲಿನವರು ಹಲವು ಸಮಯದಿಂದ ನೀರು, ರಸ್ತೆ, ಬೀದಿದೀಪ ಇತ್ಯಾದಿ ಮೂಲ ಸೌಕರ್ಯಗಳಿಲ್ಲದೇ ಪರಿತಪಿಸು ವಂತಾಗಿದೆ.
  
2 ದಿನಕ್ಕೊಮ್ಮೆ ನೀರು
ಗುಲ್ವಾಡಿ ಗ್ರಾ.ಪಂ.ನಲ್ಲಿ 5,346 ಜನಸಂಖ್ಯೆ ಹೊಂದಿದ್ದು, 776 ಕುಟುಂಬಗಳಿವೆ. ಅಬ್ಬಿಗುಡ್ಡಿ ಪ್ರದೇಶವು ಎತ್ತರದ ಪ್ರದೇಶದಲ್ಲಿವಾಗಿದ್ದು, ಇಲ್ಲಿನ ನಿವಾಸಿಗಳಿಗೆ ಫೆಬ್ರವರಿ ತಿಂಗಳಿನಿಂದ ಕುಡಿಯುವ ನೀರಿನ ಸಮಸ್ಯೆಯಿದೆ. ಎರಡು ದಿನಕ್ಕೊಮ್ಮೆ ನೀರು ಸರಬರಾಜು ಮಾಡಲಾಗುತ್ತಿದ್ದು, ಇದು ನಿತ್ಯದ ಬಳಕೆಗೆ ಸಾಲುತ್ತಿಲ್ಲ. ಇನ್ನು ಅಬ್ಬಿಗುಡ್ಡಿಯಲ್ಲಿ ಎರಡು ಬಾವಿ, ಎರಡು ನೀರಿನ ಟ್ಯಾಂಕ್‌ ಹಾಗೂ ಎರಡು ಬೋರ್‌ವೆಲ್‌ಗ‌ಳಿದ್ದರೂ ನೀರು ಲಭ್ಯತೆ ಇಲ್ಲ.
  
ಮಣ್ಣಿನ ರಸ್ತೆಯಲ್ಲಿ ಸರ್ಕಸ್‌ 
ಗುಲ್ವಾಡಿ ಕ್ರಾಸ್‌ನಿಂದ ಅಬ್ಬಿಗುಡ್ಡಿಯ ಮೂಲಕ ಕೊಲ್ಲೂರಿಗೆ ಹೋಗುವ ಮಾವಿನ ಕಟ್ಟೆ ಮುಖ್ಯ ರಸ್ತೆಯವರೆಗೆ ಕಾಂಕ್ರೀಟ್‌ ಹಾಕಲಾಗಿದೆ. ಆದರೆ ಅಬ್ಬಿಗುಡ್ಡಿಯಿಂದ ಸ್ಥಳೀಯರಾದ ಸುಬ್ಬಣ್ಣ ಶೆಟ್ಟಿಯವರ ಮನೆಯವರೆಗೆ ಮಣ್ಣಿನ ರಸ್ತೆಯಾಗಿದ್ದು, ಸಂಚಾರ ಕಷ್ಟಕರವಾಗಿದೆ. ಪ್ರತಿ ಬಾರಿಯೂ ಸ್ಥಳೀಯರೇ ಹೊಂಡ ತುಂಬಿಸಿ, ಇಲ್ಲಿನ ರಸ್ತೆ ದುರಸ್ತಿ ಮಾಡುತ್ತಾರೆ. 

ಬೀದಿ ದೀಪಗಳಿಲ್ಲ
ತೀರಾ ಗ್ರಾಮೀಣ ಪ್ರದೇಶವಾದ್ದರಿಂದ ಅಬ್ಬಿಗುಡ್ಡೆ ಇದು ತೀರಾ ಗ್ರಾಮೀಣ ಪ್ರದೇಶವಾಗಿದ್ದು ರಾತ್ರಿ ಬೀದಿದೀಪಗಳಿಲ್ಲದೆ ನಡೆಯುವುದು ಕಷ್ಟಕರ. ಆದರೆ ಇಲ್ಲಿ ರಾತ್ರಿ ಬೀದಿ ದೀಪವೂ ಉರಿಯುತ್ತಿಲ್ಲ. ಈ ಎಲ್ಲ ಮೂಲ ಸೌಕರ್ಯದಿಂದ ವಂಚಿತರಾಗಿರುವ ಅಬ್ಬಿಗುಡ್ಡಿ ನಿವಾಸಿ ಗರು ಗ್ರಾಮ ಪಂಚಾಯತ್‌ ವಿರುದ್ಧ ಪ್ರತಿಭಟಿಸಿದರೂ ಯಾವುದೇ ಪ್ರಯೋಜನವಾಗಿಲ್ಲ.

ಎಲ್ಲ ಕಡೆಗೂ ಬೀದಿ ದೀಪ
ಅಬ್ಬಿಗುಡ್ಡಿ ಹಾಗೂ ಇತರೆ ಪ್ರದೇಶದ ನೀರಿಗೆ ಗುಲ್ವಾಡಿ ವೆಂಟೆಡ್‌ ಡ್ಯಾಮ್‌ ಹತ್ತಿರ 7 ಲಕ್ಷ ರೂ. ವೆಚ್ಚದಲ್ಲಿ ಹೊಸ ಬಾವಿ ತೆಗೆಯಲಾಗಿದ್ದು, ಒಂದು ತಿಂಗಳಿನಲ್ಲಿ ಈ ಬಾವಿಯ ಕಾಮಗಾರಿ ಮುಗಿಯಲಿದೆ. ಅಬ್ಬಿಗುಡ್ಡಿ ಸೇರಿದಂತೆ ಕುಡಿಯುವ ನೀರಿನ ಸಮಸ್ಯೆ ಇರುವಲ್ಲಿಗೆ ಟ್ಯಾಂಕ್‌ ಮೂಲಕ ಪ್ರತಿದಿನ ಮನೆಯೊಂದಕ್ಕೆ 250 ಲೀ. ನೀರನ್ನು ಪೂರೈಸಲಾಗುತ್ತಿದೆ. ಎರಡು ಸೋಲಾರ್‌ ದೀಪ ಉರಿಯುತ್ತಿದ್ದು ಮುಂದಿನ ಕ್ರಿಯಾ ಯೋಜನೆಯಡಿ ಎಲ್ಲ ಕಡೆಗೂ ಬೀದಿ ದೀಪ ಅಳವಡಿಸಲಾಗುವುದು. 
– ಚಂದ್ರಕಾಂತ್‌, ಗುಲ್ವಾಡಿ ಪಿಡಿಒ

ಕಾಮಗಾರಿಯಾಗುವುದೆಂಬ ನಂಬಿಕೆ ಇಲ್ಲ
ಚುನಾವಣೆ ಬಂದಾಗ ಎಲ್ಲ ಅಗತ್ಯ ಕೆಲಸಗಳನ್ನು ಮಾಡುತ್ತೇವೆ ಎನ್ನುತ್ತಾರೆಯೇ ಹೊರತು ಅಬ್ಬಿಗುಡ್ಡಿಯಲ್ಲಿ ಯಾವುದೇ ಅಭಿವೃದ್ಧಿ ಕೆಲಸಗಳನ್ನು ಮಾಡಲಿಲ್ಲ. ಮುಂದಿನ ದಿನಗಳಲ್ಲಿ ದಾರಿ ದೀಪ, ರಸ್ತೆ ಮತ್ತು ಕುಡಿಯುವ ನೀರು ಸೇರಿದಂತೆ ಯಾವುದೇ ಕಾಮಗಾರಿ ನಡೆಯುತ್ತದೆ ಎನ್ನುವ ನಂಬಿಕೆ ನಮಗಿಲ್ಲ.                               
– ಶ್ರೀನಿವಾಸ, ಗ್ರಾಮಸ್ಥರು  

Advertisement

– ದಯಾನಂದ ಬಳ್ಕೂರು

Advertisement

Udayavani is now on Telegram. Click here to join our channel and stay updated with the latest news.

Next