Advertisement

ಮನತಣಿಸುವ ಗುಲ್ಮೊಹರ್‌

02:04 PM May 20, 2019 | pallavi |

ಗಜೇಂದ್ರಗಡ: ಬಿರುಬಿಸಿಲಲ್ಲೂ ನಿಗಿನಿಗಿ ಕೆಂಡದಂತೆ ಕಂಡು ಬರುವ ‘ಗುಲ್ಮೊಹರ್‌’ ಮರಗಳು ಪಟ್ಟಣದ ಸೌಂದರ್ಯವನ್ನು ಇಮ್ಮಡಿಗೊಳಿಸಿವೆ.

Advertisement

ಪಟ್ಟಣದ ಡೊಳ್ಳಿನವರ ಓಣಿ, ವಾಣಿಪೇಟೆ ಸೇರಿದಂತೆ ವಿವಿಧೆಡೆಗಳಲ್ಲಿ ಕಂಡು ಬರುವ ಈ ಗುಲ್ಮೊಹರ್‌ ಮರಗಳು ಕೆಂಬಣ್ಣದ ಹೂ ಬಿಟ್ಟು ಜನರನ್ನು ಆಕರ್ಷಿಸುತ್ತಿವೆ.

ಸಾಮಾನ್ಯವಾಗಿ ಮೇ ತಿಂಗಳಲ್ಲಿ ಗೊಂಚಲು ಗೊಂಚಲಾಗಿ ಕೆಂಬಣ್ಣದಂತೆ ಕಂಡು ಬರುವ ಈ ಹೂಗಳು ನೋಡುಗರ ಮನ ತಣಿಸುತ್ತಿವೆ. ಮುಂಗಾರು ಆರಂಭಕ್ಕೂ ಮುನ್ನವೇ ಅರಳಿ ಮನಸೆಳೆಯುವ ಈ ಹೂಗಳು ಮುಂಗಾರು ಮಳೆ ಬರುವಿಕೆಗೆ ಸ್ವಾಗತ ಕೋರುವಂತೆ ಭಾಸವಾಗುತ್ತಿವೆ.

ಈ ಮರಗಳಲ್ಲಿ ಎಲೆಗಳಿಗಿಂತ ಹೂಗಳೇ ಇಡೀ ಮರವನ್ನು ಆವರಿಸಿರುತ್ತವೆ. ಕೆಂಪು ಬಣ್ಣದ ಹೂಗಳು ಇಡೀ ಮರವನ್ನು ತುಂಬಿಕೊಂಡಿರುತ್ತವೆ. ಎಲೆಗಳು ಅಲ್ಲಲ್ಲಿ ಕಂಡು ಬರುತ್ತವೆ. ಇನ್ನೇನು ಬೇಸಿಗೆ ಮುಗಿಯಿತು, ಮಳೆ ಬರುವ ಸಮಯ ಎನ್ನುವ ಸಮಯದಲ್ಲಿ ಈ ಹೂಗಳು ಇಡಿ ಗಿಡವನ್ನೆಲ್ಲಾ ಆವರಿಸಿ ಸೌಂದರ್ಯ ಹೆಚ್ಚಿಸಿಕೊಳ್ಳುತ್ತವೆ.

ಗುಲ್ಮೊಹರ್‌ ಮರದ ವೈಜ್ಞಾನಿಕ ಹೆಸರು ಡೆಲೋನಿಕ್ಸ್‌ ರೆಜಿಯಾ ರಾಫ್‌. ಡೆಲೋನಿಕ್ಸ್‌ ಎಂದರೆ ಸ್ಪಷ್ಟವಾದ ಇಕ್ಕಳ ಅಥವಾ ಉಗುರು ಹೊಂದಿದ ಎಂದರ್ಥ. ಇದು ಹೂವಿನ ಎಸಳಿನ ಆಕಾರ ಸೂಚಿಸುತ್ತದೆ. ಮಕ್ಕಳು ಇದನ್ನು ಬಳಸಿ ‘ಕೋಳಿ ಪಂದ್ಯ’ ಎಂಬ ಆಟವಾಡುತ್ತಾರೆ. ಹಿಂದಿಯಲ್ಲಿ ಈ ಮರವನ್ನು ‘ಗುಲ್ಮೊಹರ್‌’ ಎಂದು ಕರೆಯುತ್ತಾರೆ. ಗುಲ್ ಎಂದರೆ ಗುಲಾಬಿ ಅಥವಾ ಹೂವು. ಮೋರ್‌ ಅಂದರೆ ನವಿಲು. ನವಿಲು ಗುಲಾಬಿ ಗುಲ್ಮೊಹರ್‌ ಎಂದಾಗಿದೆ. ಇದಕ್ಕೆ ಮೇ ಪ್ಲಾವರ್‌ ಎಂತಲೂ ಕರೆಯುತ್ತಾರೆ.

Advertisement

ಉತ್ತರ ಕರ್ನಾಟಕದಲ್ಲಿ ವಿಶೇಷವಾಗಿ ಮಳೆ-ಬೆಳೆ ಚೆನ್ನಾಗಿ ಬರಲೆಂದು ವಾರ ಹಿಡಿಯುವ ಸಂಪ್ರದಾಯ ಕಂಡು ಬರುತ್ತದೆ. ಹೆಣ್ಣು ದೇವರುಗಳಿಗೆ ‘ಐದು ಮಂಗಳವಾರ’ ವಾರ ಹಿಡಿಯುತ್ತಾರೆ. ಈ ಸಂದರ್ಭದಲ್ಲಿ ವಿಶೇಷವಾಗಿ ಮಕ್ಕಳು ದೇವರುಗಳಿಗೆ ನೀರು ಹಾಕಿ ಈ ‘ಗುಲ್ಮೊಹರ್‌’ ಹೂಗಳನ್ನೇ ದೇವಿಗೆ ಅರ್ಪಿಸಿ ಬರುತ್ತಾರೆ. ಅಷ್ಟೇ ಅಲ್ಲ ಈ ಹೂಗಳನ್ನು ಕೊಡ, ತಂಬಿಗೆಗಳಲ್ಲಿ ಹಾಕಿಕೊಂಡು ಮನೆಗೆ ಬರುವುದು ಈ ಭಾಗದಲ್ಲಿ ಕಂಡು ಬರುತ್ತದೆ.

ಲೋಕೋಪಯೋಗಿ ಇಲಾಖೆಯವರು ವಿಶೇಷವಾಗಿ ರೋಣ ರಸ್ತೆ, ಗದಗ ರಸ್ತೆ, ಕುಷ್ಟಗಿ ರಸ್ತೆಗಳ ಎಡ ಬಲದಂಚಿನಲ್ಲಿ ಈ ಗುಲ್ ಮೊಹರ್‌ ಗಿಡಗಳನ್ನು ಹೆಚ್ಚಾಗಿ ಬೆಳೆಸಿದ್ದಾರೆ. ಹೀಗಾಗಿ ಈ ಮಾರ್ಗವಾಗಿ ಹೋಗುವ ಪ್ರಯಾಣಿಕರಿಗೆ ಈ ಹೂಗಳು ಕಣ್ಣಿಗೆ ತಂಪು ನೀಡುತ್ತವೆ. ಪ್ರಯಾಣಕ್ಕೆ ಆಹ್ಲಾದಕರ ವಾತಾವರಣ ಕಲ್ಪಿಸುತ್ತವೆ.

Advertisement

Udayavani is now on Telegram. Click here to join our channel and stay updated with the latest news.

Next