Advertisement

ಗುಳೇದಗುಡ್ಡ ಗ್ರಂಥಾಲಯಕ್ಕಿಲ್ಲ ಸ್ವಂತ ಸೂರು

12:43 PM Oct 22, 2019 | Suhan S |

ಗುಳೇದಗುಡ್ಡ: ಪಟ್ಟಣದಲ್ಲಿ ಗ್ರಂಥಾಲಯ ಸ್ಥಾಪನೆಗೊಂಡು ಸುಮಾರು 38 ವರ್ಷ ಕಳೆದರೂ ಗ್ರಂಥಾಲಯಕ್ಕೆ ಇನ್ನೂ ಸ್ವಂತ ಸೂರಿಲ್ಲ. ಪಟ್ಟಣದ ಬನ್ನಿಕಟ್ಟಿ ಹತ್ತಿರದ ಪುರಸಭೆ ಕಟ್ಟಡದಲ್ಲಿ 1980ರಲ್ಲಿ ಈ ಸಾರ್ವಜನಿಕ ಗ್ರಂಥಾಲಯ ಆರಂಭವಾಗಿದ್ದು, ಅಂದಿನಿಂದ ಇಂದಿನವರೆಗೂ ಇದಕ್ಕೆ ಸ್ವಂತ ಜಾಗ ಇಲ್ಲ. ಇಲ್ಲಿ ಸುಮಾರು 10-15 ಜನರು ಮಾತ್ರ ಕುಳಿತುಕೊಳ್ಳುವಷ್ಟು ವ್ಯವಸ್ಥೆಯಿದೆ. ಕನಿಷ್ಠ 30-40 ಜನರು ಕುಳಿತುಕೊಳ್ಳುವಷ್ಟು ಜಾಗದ ಅವಶ್ಯಕತೆಯಿದೆ.

Advertisement

ಗ್ರಂಥಾಲಯ ಪಕ್ಕದಲ್ಲೇ ಪುರಸಭೆ 2008ರಲ್ಲಿ ಒಂದು ಕೊಠಡಿ ನಿರ್ಮಿಸಿ ಕೊಟ್ಟಿದೆ. ಆದರೆ, ಆ ಕೊಠಡಿಯಲ್ಲಿ ಗ್ರಂಥಾಲಯದಲ್ಲಿನ ಪುಸ್ತಕಗಳನ್ನಿರಿಸಿ ಪುಸ್ತಕ ವಿಭಾಗ ಮಾಡಲಾಗಿದೆ. ಅಲ್ಲಿ ಪುಸ್ತಕಗಳೇ ಇರುವುದರಿಂದ ಅಲ್ಲಿಯೂ ಜನರಿಗೆ ಕುಳಿತುಕೊಳ್ಳಲು ಜಾಗವಿಲ್ಲ. ಮಳೆ ಬಂದ್ರೆ ಸೋರುತ್ತದೆ: ಮಳೆ ಬಂದರೆ ಮಾತ್ರ ಕಟ್ಟಡ ಸೋರುತ್ತದೆ. ಕಟ್ಟಡ ರಿಪೇರಿ ಮಾಡಿಸುವಂತೆ ಹಲವು ಬಾರಿ ಮನವಿ ಮಾಡಿದರೂ ಪುರಸಭೆ ಗಮನ ಹರಿಸುತ್ತಿಲ್ಲ.

ಎಷ್ಟು ಪುಸ್ತಕಗಳಿವೆ?: ಪಟ್ಟಣದ ಸಾರ್ವಜನಿಕ ಗ್ರಂಥಾಲಯದಲ್ಲಿ 2178 ಸದಸ್ಯರಿದ್ದು, ಸುಮಾರು 24248 ಪುಸ್ತಕಗಳಿವೆ. 10 ದಿನಪತ್ರಿಕೆಗಳು, 4 ವಾರಪತ್ರಿಕೆಗಳು, 5 ಮಾಸ ಪತ್ರಿಕೆಗಳು ಬರುತ್ತವೆ. ವರ್ಷಕ್ಕೆ 2 ಸಾವಿರ ಪುಸ್ತಕ: ಪಟ್ಟಣದ ಸಾರ್ವಜನಿಕ ಗ್ರಂಥಾಲಯಕ್ಕೆ ಗ್ರಂಥಾಲಯ ಇಲಾಖೆ ಪ್ರತಿವರ್ಷ ಓದುಗರಿಗೆ ಅನುಕೂಲ ವಾಗಲೆಂದು 1-2 ಸಾವಿರ ಪುಸ್ತಕಗಳನ್ನು ಒದಗಿಸುತ್ತಿದೆ.

ಪಠ್ಯಪುಸ್ತಕಗಳೂ ಬೇಕು: ಗ್ರಂಥಾಲಯದಲ್ಲಿ ಪಠ್ಯಪುಸ್ತಕ ಒದಗಿಸಿದರೆ ಕಾಲೇಜು ವಿದ್ಯಾರ್ಥಿಗಳ ಶಿಕ್ಷಣಕ್ಕೆ ಅನುಕೂಲವಾಗಲಿದೆ. ಮಕ್ಕಳು, ಮಹಿಳಾ ಓದುಗರ ವಿಭಾಗ ಮಾಡಿದರೆ ಇನ್ನೂ ಅನುಕೂಲ. ಅಲ್ಲದೇ ಕುಡಿಯುವ ನೀರಿನ ವ್ಯವಸ್ಥೆ ಮತ್ತಿತರ ಸೌಲಭ್ಯ ಒದಗಿಸಬೇಕಿದೆ.

 

Advertisement

-ಮಲ್ಲಿಕಾರ್ಜುನ ಕಲಕೇರಿ

Advertisement

Udayavani is now on Telegram. Click here to join our channel and stay updated with the latest news.

Next