Advertisement

ಮಣ್ಣಿಗೆ ಹೋದವರೇ ಹೆಣವಾದರು

01:22 PM May 19, 2019 | Team Udayavani |

ಗುಳೇದಗುಡ್ಡ: ಒಂದು-ಒಂದೂವರೆ ಗಂಟೆಯ ಪ್ರಯಾಣ. ಆ ಪ್ರಯಾಣ ಮುಗಿದು ಬಿಟ್ಟಿದ್ದರೆ ಎಲ್ಲರೂ ಊರು ತಲುಪಿ, ಗ್ರಾಮದ ಜಾತ್ರೆಯಲ್ಲಿ ಪಾಲ್ಗೊಳ್ಳುತ್ತಿದ್ದರು. ಆದರೆ ಆ ದೇವರ ಲಿಖೀತವೇ ಬೇರೆಯಾಗಿತ್ತು. ಮಣ್ಣು ಕೊಟ್ಟು ಬರುವವರಿ‌ಗೆ ಆ ದೇವರು ಮಣ್ಣು ಕೊಡುವಂತಹ ಸ್ಥಿತಿ ತಂದೊಡ್ಡಿದ.

Advertisement

ಮುದ್ದೇಬಿಹಾಳ ತಾಲೂಕು ಕಂದಗನೂರ ಗ್ರಾಮಕ್ಕೆ ಸಂಬಂಧಿಕರು ತೀರಿ ಹೋಗಿದ್ದಾರೆಂದು ಹೋದ ಸಮೀಪದ ಹಳದೂರ ಗ್ರಾಮದ ಸಾಧನಿ ಕುಟುಂಬದ ಇಬ್ಬರು, ರಕ್ಕಸಗಿ ಕುಟುಂಬದ ಒಬ್ಬರು ಮೃತಪಟ್ಟಿದ್ದು, ಮೃತರ ಮನೆಗಳ ಮುಂದೆ ಸೂತಕದ ಛಾಯೆ ಆವರಿಸಿದೆ. ಅಂತ್ಯಕ್ರಿಯೆಗೆ ಸಾಧನಿಯವರ ಕುಟುಂಬ, ಸಂಬಂಧಿಕರು, ಗ್ರಾಮಸ್ಥರು ತೆರಳಿದ್ದರು.

ಮಕ್ಕಳ ಅಳುವಿನ ಆಕ್ರಂದನ, ತಂದೆಯನ್ನು ನೆನೆದು ಬಿಕ್ಕಿ ಬಿಕ್ಕಿ ಅಳುತ್ತಿದ್ದ ಮಕ್ಕಳನ್ನು ನೋಡಿ ಸಮಾಧಾನ ಪಡಿಸಲು ಬಂದವರ ಕಣ್ಣುಗಳು ಸಹ ಒದ್ದೆಯಾಗಿದವು. ಸಾಧನಿಯವರ ಮನೆಯಲ್ಲಿ ಮಕ್ಕಳಷ್ಟೇ ಇದ್ದು, ಆ ಮಕ್ಕಳ ಅಳು ನೋಡಲಾಗುತ್ತಿಲ್ಲ.

ಗ್ರಾಮದಲ್ಲಿ ಜಾತ್ರೆ: ಹಳದೂರ ಗ್ರಾಮದಲ್ಲಿ ಕಳೆದ ಒಂಬತ್ತು ದಿನಗಳಿಂದ ದುರ್ಗಾದೇವಿ ಹಾಗೂ ದ್ಯಾಮವ್ವ ದೇವಿ ಜಾತ್ರೆ ನಡೆಯುತ್ತಿದ್ದು, ಇಂದು ನಡೆದ ರಸ್ತೆ ಅಪಘಾತ ಜಾತ್ರೆಯ ಖುಷಿಯಲ್ಲಿದ್ದ ಗ್ರಾಮಸ್ಥರಿಗೆ ಆಘಾತ ನೀಡಿದೆ.

ಅಪಘಾತದಲ್ಲಿ ಮೃತರಾದವರಿಗೆ ಸರಕಾರದಿಂದ ಪರಿಹಾರ ನೀಡಬೇಕೆಂದು ಮಾಜಿಮುಖ್ಯಮಂತ್ರಿ ಸಿದ್ದರಾಮಯ್ಯನವರು ಮುಖ್ಯಮಂತ್ರಿ ಕುಮಾರಸ್ವಾಮಿಯವರಿಗೆ ಮನವಿ ಮಾಡಿದ್ದಾರೆ. ಗಾಯಾಳುಗಳಿಗೆ ಚಿಕಿತ್ಸೆ ನೀಡಬೇಕೆಂದು ಜಿಲ್ಲಾಧಿಕಾರಿಗಳಿಗೆ ಸೂಚಿಸಿದ್ದಾರೆ.

Advertisement

ಗಾಯಾಳುಗಳು ಬಾಗಲಕೋಟೆ ಜಿಲ್ಲಾಸ್ಪತ್ರೆಗೆ ರವಾನೆ
ಮುದ್ದೇಬಿಹಾಳ:
ಚಿರ್ಚನಕಲ್ ಕ್ರಾಸ್‌ನಲ್ಲಿ ಗೂಡ್ಸ್‌ ಮಿನಿ ವಾಹನವೊಂದು ಎದುರಿಗೆ ಬಂದ ಟಿಪ್ಪರ್‌ ತಪ್ಪಿಸಲು ಹೋಗಿ ಪಲ್ಟಿಯಾಗಿ ಐವರು ಮೃತಪಟ್ಟು, 29 ಜನರು ಗಾಯಗೊಂಡ ಘಟನೆ ಶನಿವಾರ ನಡೆದಿದೆ.

ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿ ಬಿ.ಎಸ್‌.ನೇಮಗೌಡ, ಡಿವೈಎಸ್ಪಿ ಮಹೇಶ್ವರಗೌಡ, ತಹಸೀಲ್ದಾರ್‌ ವಿನಯ್‌ಕುಮಾರ ಪಾಟೀಲ, ಪಿಎಸ್‌ಐಗಳಾದ ಸಂಜಯ್‌ ತಿಪರಡ್ಡಿ, ಗೋವಿಂದಗೌಡ ಪಾಟೀಲ ಅವರು ಸರ್ಕಾರಿ ಆಸ್ಪತ್ರೆಗೆ ಆಗಮಿಸಿ ಗಾಯಾಗಳುಗಳಿಗೆ ಸಾಂತ್ವನ ಹೇಳಿದರು.

ಸೂಕ್ತ ಚಿಕಿತ್ಸೆ: ತಾಲೂಕು ಆರೋಗ್ಯಾಧಿಕಾರಿ ಡಾ| ಸತೀಶ ತಿವಾರಿ, ಸರ್ಕಾರಿ ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಡಾ|ಅನಿಲ್ ಶೇಗುಣಸಿ ಸೇರಿದಂತೆ ಆಸ್ಪತ್ರೆಯ ವೈದ್ಯರು ಮತ್ತು ಸಿಬ್ಬಂದಿ ಗಾಯಾಗಳುಗಳಿಗೆ ಸೂಕ್ತ ಚಿಕಿತ್ಸೆ ನೀಡಿದ‌ರು.

ನಡಹಳ್ಳಿ ಭೇಟಿ-ಆರೋಗ್ಯ ವಿಚಾರಣೆ: ವಿಷಯ ತಿಳಿದು ಆಸ್ಪತ್ರೆಗೆ ಭೇಟಿ ನೀಡಿದ ಸ್ಥಳೀಯ ಶಾಸಕ ಎ.ಎಸ್‌.ಪಾಟೀಲ ನಡಹಳ್ಳಿ ಗಾಯಾಳುಗಳ ಆರೋಗ್ಯ ವಿಚಾರಿಸಿದರು. ಮೃತರ ಬಂಧುಗಳಿಗೆ ಸಾಂತ್ವನ ಹೇಳಿದರು. ಗಂಭೀರವಾಗಿ ಗಾಯಗೊಂಡವರನ್ನು ಹೆಚ್ಚಿನ ಚಿಕಿತ್ಸೆಗೆ ಬಾಗಲಕೋಟ ಜಿಲ್ಲಾಸ್ಪತ್ರೆಗೆ ಕಳುಹಿಸಲು ನೆರವಾದರು. ಗಾಯಾಳುಗಳಿಗೆ ತುರ್ತು ಚಿಕಿತ್ಸೆ ನೀಡಲು ಆಸ್ಪತ್ರೆ ವೈದ್ಯರಿಗೆ ಸೂಚಿಸಿದರು. ಮೃತರು ಮತ್ತು ಗಾಯಾಳುಗಳು ಬಡ ಕುಟುಂಬಕ್ಕೆ ಸೇರಿದವರಾಗಿದ್ದು ಸರ್ಕಾರ ಕೂಡಲೇ ಮೃತ ಕುಟುಂಬದವರಿಗೆ ಮತ್ತು ಗಾಯಾಗಳುಗಳಿಗೆ ಮುಖ್ಯಮಂತ್ರಿಗಳ ಪರಿಹಾರ ನಿಧಿಯಡಿ ಸೂಕ್ತ ಪರಿಹಾರ ದೊರಕಿಸಿಕೊಡಬೇಕೆಂದು ಆಗ್ರಹಿಸಿದರು.

ಆರೋಗ್ಯ ವಿಚಾರಿಸಿದ ನಾಡಗೌಡ: ಮಾಜಿ ಶಾಸಕ ಸಿ.ಎಸ್‌.ನಾಡಗೌಡ ಅಪ್ಪಾಜಿ ಆಸ್ಪತ್ರೆಗೆ ಆಗಮಿಸಿ ಘಟನೆಯ ಮಾಹಿತಿ ಪಡೆದು ಗಾಯಾಳುಗಳ ಆರೋಗ್ಯ ವಿಚಾರಿಸಿದರು. ಮೃತರ ಕುಟುಂಬದವರಿಗೆ ಸಾಂತ್ವನ ಹೇಳಿದ ಅವರು, ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಶಿವಾನಂದ ಪಾಟೀಲ ಅವರೊಂದಿಗೆ ಮಾತನಾಡಿ ಸೂಕ್ತ ಪರಿಹಾರ ದೊರಕಿಸಿಕೊಡಲು ಮನವಿ ಮಾಡಿದ್ದಾಗಿ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next