ಬೆಂಗಳೂರು: ಮಹಾರಾಜ ಟ್ರೋಫಿ ಟಿ20 ಟೂರ್ನಿಯ ಶನಿವಾರದ ಪಂದ್ಯದಲ್ಲಿ ಮೈಸೂರು ವಾರಿಯರ್ ವಿರುದ್ಧ ಗುಲ್ಬರ್ಗ ಮಿಸ್ಟಿಕ್ಸ್ ತಂಡ 5 ವಿಕೆಟ್‌ಗಳ ಜಯ ಗಳಿಸಿದೆ. ಇದು ಗುಲ್ಬರ್ಗ ಸಾಧಿಸಿದ 4ನೇ ಜಯವಾಗಿದ್ದು, ಅಂಕಪಟ್ಟಿಯಲ್ಲಿ 2ನೇ ಸ್ಥಾನಕ್ಕೇರಿದೆ.
ಮೈಸೂರು 9 ವಿಕೆಟಿಗೆ 154 ರನ್ ಗಳಿಸಿದರೆ, ಗುಲ್ಬರ್ಗ 18.5 ಓವರ್‌ಗಳಲ್ಲಿ 5 ವಿಕೆಟಿಗೆ 157 ರನ್ ಬಾರಿಸಿತು.
ಮೈಸೂರು ವಾರಿಯರ್ನ ಅಗ್ರ ಕ್ರಮಾಂಕದ ಬ್ಯಾಟರ್‌ಗಳೆಲ್ಲ ಪೆವಿಲಿಯನ್ ಪರೇಡ್ ನಡೆಸಿದರು. ಇ.ಜೆ. ಜಾಸ್ಪರ್ (2), ಎಸ್.ಯು. ಕಾರ್ತಿಕ್ (24), ನಾಯಕ ಕರುಣ್ ನಾಯರ್ (0), ಸಮಿತ್ ದ್ರಾವಿಡ್ (12), ಹರ್ಷಿಲ್ ಧರ್ಮಾಣಿ (16), ಸುಮಿತ್ ಕುಮಾರ್ (9) ವಿಫಲರಾದರು. ಕೆಳ ಕ್ರಮಾಂಕದ ಜೆ. ಸುಚಿತ್ 25, ಮನೋಜ್ ಭಾಂಡಗೆ 14 ಎಸೆತಗಳಲ್ಲಿ 38 ರನ್ ಸಿಡಿಸಿದ ಪರಿಣಾಮ ಸ್ಕೋರ್ 150ರ ಗಡಿ ದಾಟಿತು. ಗುಲ್ಬರ್ಗ ಬೌಲರ್ ಅಭಿಷೇಕ್ ಪ್ರಭಾಕರ್ 21 ರನ್‌ಗೆ 5 ವಿಕೆಟ್ ಪಡೆದು ಪಂದ್ಯಶ್ರೇಷ್ಠರೆನಿಸಿದರು.
ಗುಲ್ಬರ್ಗಕ್ಕೆ ಆರಂಭಿಕರಾದ ಲವನೀತ್ ಸಿಸೋಡಿಯಾ (23)-ನಾಯಕ ದೇವದತ್ ಪಡಿಕ್ಕಲ್ (24) 41 ರನ್ ಜತೆಯಾಟ ನೀಡಿದರು. ಸ್ಮರಣ್ 52, ರಿತೇಶ್ ಭಟ್ಕಳ್ 22, ಪ್ರವೀಣ್ ದುಬೆ ಅಜೇಯ 17 ರನ್ ಗಳಿಸಿ ತಂಡದ ಗೆಲುವನ್ನು ಸಾರಿದರು.
ಮಂಗಳೂರು ವಿರುದ್ಧವೂ ಜಯ:
ಗುಲ್ಬರ್ಗ ತಂಡ ಶುಕ್ರವಾರ ರಾತ್ರಿಯ ಪಂದ್ಯದಲ್ಲಿ ಮಂಗಳೂರು ಡ್ರ್ಯಾಗನ್ಸ್ ವಿರುದ್ಧವೂ ಜಯ ಸಾಧಿಸಿತ್ತು. ಈ ಅಂತರ ಕೂಡ 5 ವಿಕೆಟ್ ಆಗಿತ್ತು. ಮಂಗಳೂರು 7 ವಿಕೆಟಿಗೆ 150 ರನ್ ಮಾಡಿದರೆ, ಗುಲ್ಬರ್ಗ 19.3 ಓವರ್‌ಗಳಲ್ಲಿ 5 ವಿಕೆಟಿಗೆ 152 ರನ್ ಗಳಿಸಿತು. ಅಜೇಯ 47 ರನ್ ಮಾಡಿದ ಪ್ರವೀಣ್ ದುಬೆ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.