Advertisement

ಗುಲಬರ್ಗಾ ವಿಶ್ವವಿದ್ಯಾಲಯ ಕುಲಪತಿಯಾಗಿ ಪ್ರೊ|ದಯಾನಂದ ಅಗಸರ ನೇಮಕ

03:36 PM Jan 23, 2021 | Team Udayavani |

ಕಲಬುರಗಿ: ನಗರದ ಗುಲಬರ್ಗಾ ವಿಶ್ವವಿದ್ಯಾಲಯಕ್ಕೆ ಕೊನೆಗೂ ಕಾಯಂ ಕುಲಪತಿ ನೇಮಕವಾಗಿದ್ದು, ನೂತನ ಕುಲಪತಿಯಾಗಿ ಪ್ರೊ| ದಯಾನಂದ ಅಗಸರ ಶುಕ್ರವಾರ ಅಧಿಕಾರ ಸ್ವೀಕರಿಸಿದರು. ಕಾಯಂ ಕುಲಪತಿಯಾಗಿದ್ದ ಪ್ರೊ| ಎಸ್‌. ಆರ್‌. ನಿರಂಜನ ನಿವೃತ್ತವಾದ ನಂತರದ ದಿನದಿಂದ ಹೊಸ ಕುಲಪತಿ ನೇಮಕ ನನೆಗುದಿಗೆ ಬಂದಿತ್ತು. ಹಂಗಾಮಿ ಕುಲಪತಿಯಾಗಿ ಪ್ರಾಧ್ಯಾಪಕರನ್ನು ಒಬ್ಬರ ನಂತರ ಒಬ್ಬರನ್ನು ನೇಮಿಸಲಾಗಿತ್ತು. ಹೀಗೆ ಐದಾರು ಜನ ಪ್ರಾಧ್ಯಾಪಕರು ಹಂಗಾಮಿಯಾಗಿ ಕಾರ್ಯ ನಿರ್ವಹಿಸಿದ್ದರು. ಈ ನಡುವೆ ಕಾಯಂ ಕುಲಪತಿ ಹುದ್ದೆಗೆ ಅನೇಕರ ನಡುವೆ ಪೈಪೋಟಿ ಏರ್ಪಟಿತ್ತು. ಇದೀಗ ಇದೇ ವಿಶ್ವವಿದ್ಯಾಲಯದ ಸೂಕ್ಷ್ಮಜೀವಿಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ| ದಯಾನಂದ ಅಗಸರ ಅವರನ್ನು ನೇಮಕ ಮಾಡಲಾಗಿದೆ.

Advertisement

ಶುಕ್ರವಾರ ಸಂಜೆ ಪ್ರಭಾರಿ ಕುಲಪತಿಯಾದ ಪ್ರೊ| ಚಂದ್ರಕಾಂತ ಯಾತನೂರ ಅವರು ನೂತನ ಕುಲಪತಿ ಪ್ರೊ| ದಯಾನಂದ ಅಗಸರ ಅವರಿಗೆ ಅಧಿಕಾರ ಹಸ್ತಾಂತರಿಸಿದರು. ಪ್ರಭಾರಿ ಕುಲಸಚಿವ ಡಾ| ಕೆ.ಎಂ. ಸಂಜೀವ ಕುಮಾರ, ಪ್ರೊ ಎನ್‌.ಬಿ. ನಡುವಿನಮನಿ, ಪ್ರೊ| ಚಂದ್ರಕಾಂತ ಕೆಳಮನಿ, ಡಾ| ಎಂ.ಎಸ್‌. ಪಾಸೋಡಿ, ಡಾ| ಎಚ್‌.ಎಂ. ಜಂಗೆ, ಡಾ| ಎನ್‌. ಜಿ. ಕಣ್ಣೂರ, ಪ್ರೊ| ಲಕ್ಷ್ಮಣ ರಾಜನಾಳಕರ್‌, ಪ್ರೊ| ಎಚ್‌.ಟಿ. ಪೋತೆ ಮತ್ತಿತರರು ಶುಭಕೋರಿದರು.

ಸಮಸ್ಯೆ-ಸವಾಲು ಹಲವು: ಜಿಲ್ಲೆಯ ಆಳಂದ ತಾಲೂಕಿನ ಬೆಳಮಗಿ ಗ್ರಾಮದವರಾದ ಪ್ರೊ| ದಯಾನಂದ ಅಗಸರ ಈ ಹಿಂದೆ ಇದೇ ವಿಶ್ವವಿದ್ಯಾಲಯದ ಕುಲಸಚಿವರಾಗಿ ಕರ್ತವ್ಯ ನಿರ್ವಹಿಸಿದ್ದರು. ಈಗ ವಿಶ್ವವಿದ್ಯಾಲಯದಲ್ಲಿ ಹಲವು ಸಮಸ್ಯೆ ಮತ್ತು ಸವಾಲುಗಳ ಸರಮಾಲೆಯೇ ಇದೆ. ವಿಶ್ವವಿದ್ಯಾಲಯ
ಆರ್ಥಿಕ ಮತ್ತು ಮಾನವ ಸಂಪನ್ಮೂಲ ಕೊರತೆಯಿಂದ ಬಳಲುತ್ತಿದೆ. ಶೇ.70ಕ್ಕೂ ಹೆಚ್ಚು ಬೋಧಕ-ಬೋಧಕೇತರ ಹುದ್ದೆಗಳು ಖಾಲಿ ಇವೆ. ಅವುಗಳನ್ನು ಭರ್ತಿ ಮಾಡುವ ಮತ್ತು ಸಕಾಲಕ್ಕೆ ಪರೀಕ್ಷೆ ನಡೆಸಿ ಫಲಿತಾಂಶ ಪ್ರಕಟಿಸುವ ಮುಖ್ಯ ಸವಾಲುಗಳು ನೂತನ ಕುಲಪತಿ ಎದುರಿಗಿವೆ.

ಅಧಿಕಾರ ಸ್ವೀಕರಿಸಿದ ನಂತರ ಮಾತನಾಡಿದ ಅವರು, ಇದೇ ವಿಶ್ವವಿದ್ಯಾಲಯದಲ್ಲಿ ಈ ಹಿಂದೆ ಮೂರು ವರ್ಷ ಕುಲಸಚಿವನಾಗಿ ಕಾರ್ಯನಿರ್ವಹಿಸಿದ್ದು, ಆಡಳಿತದ ಅನುಭವ ಇದೆ. ಬೋಧಕ, ಬೋಧಕೇತರ ಸಿಬ್ಬಂದಿ ಸಹಕಾರದೊಂದಿಗೆ ವಿಶ್ವವಿದ್ಯಾಲಯವನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ಯುವ ಕನಸು ಹೊಂದಿದ್ದೇನೆ ಎಂದು ಹೇಳಿದರು. ಇದೇ ವಿವಿ ವಿದ್ಯಾರ್ಥಿ ಮತ್ತು ಪ್ರಾಧ್ಯಾಪಕನಾದ ನಾನು ಸಮಸ್ಯೆಗಳ ಶೀಘ್ರ ಪರಿಹಾರಕ್ಕೆ ಪ್ರಯತ್ನಿಸುತ್ತೇನೆ. ನ್ಯಾಕ್‌ ಸಮಿತಿಗೆ ಹೋಗಲು ಅಗತ್ಯ ಸಿಬ್ಬಂದಿ ಅವಶ್ಯಕತೆ ಇದೆ. ಹೀಗಾಗಿ ಖಾಲಿ ಹುದ್ದೆಗಳ ನೇಮಕಾತಿ ಮಾಡಿಕೊಳ್ಳಲು ಅನುಮತಿ ಕೋರಿ ಸರ್ಕಾರಕ್ಕೆ ಪತ್ರದ ಬರೆದು ಮನವಿ ಮಾಡುತ್ತೇನೆ. ಉಳಿದಂತೆ ಸಣ್ಣ-ಪುಟ್ಟ ಸಮಸ್ಯೆಗಳನ್ನು ಸ್ಥಳೀಯವಾಗಿ ಬಗೆಹರಿಸಲಾವುದು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next