Advertisement

ತೈಲಚಿತ್ರದ ಆಕೃತಿಗಳ ಚಲನೆ: ಗುಲ್‌-ಎ-ಬಕಾವಲಿ

02:44 PM Sep 02, 2017 | Team Udayavani |

ಕೆಲವು ಕಥೆಗಳಿಗೆ ಸಾವಿರುವುದಿಲ್ಲ; ಕಾಲ- ದೇಶ- ಭಾಷೆಗಳ ಹಂಗೂ ಅವುಗಳಿಗೆ ಇರುವುದಿಲ್ಲ. ಒಂದೇ ಚೌಕಟ್ಟು ಮತ್ತು ಕಲೆಯ ಮಾದರಿಗೇ ಅವು ಸೀಮಿತಗೊಳ್ಳುವುದೂ ಇಲ್ಲ. ಬೇರೆ ಬೇರೆ ಪ್ರಕಾರಗಳಲ್ಲಿ ಒಗ್ಗಿಕೊಳ್ಳುತ್ತಲೇ ಆಯಾಕಾಲದ ಸಂವೇದನೆಗಳಿಗೆ ತಕ್ಕಂತೆ ವಿನ್ಯಾಸ ಬದಲಿಸಿಕೊಳ್ಳುತ್ತಲೇ ಇರುತ್ತವೆ; ಹೊರ ರೂಪುರೇಷೆ ಬದಲಾದರೂ ಅದರ ಅಳದ ಕಥಾಹಂದರ ಮಾತ್ರ ಅದೇ ಆಗಿರುತ್ತದೆ.

Advertisement

ಗುಲ್‌- ಎ ಬಕಾವಲಿ- ಇದೇ ಬಗೆಯ ಕಥೆ. ಮೂಲ ಪರ್ಶಿಯನ್‌; ಆದರೆ, ಈ ಕಥೆಯ ಕತೃìವಿನ ಬಗೆಗೂ ಮಾಹಿತಿ ಇಲ್ಲ. ಇದು ನಮ್ಮ ಜನಪದ ಮಾದರಿಗಳ ಕಥೆಗಳ ರೀತಿಯಂಥದ್ದು. ಬಹುತೇಕ ಜನಪದ ಕಥೆಗಳಲ್ಲಿರುವ ಒಂದು ಮಾಂತ್ರಿಕ ಲೋಕ ಈ ಕಥೆಯಲ್ಲೂ ಅಡಕಗೊಂಡಿದೆ. ಇದು ಯಾವ ದೇಶದ ಜನಪದ ಕಥೆಯೂ ಆಗಬಹುದಾದದ್ದರಿಂದ ಇದು ಹಲವು ಭಾಷೆಗಳಲ್ಲಿ ಚಲನಚಿತ್ರಗಳಾಗಿ ರೂಪು ತಳೆದಿದೆ. ಗುಬ್ಬಿ ಕಂಪನಿ ಈ ಕಥೆಯನ್ನು ನಾಟಕ ರೂಪಕ್ಕೆ ಅಳವಡಿಸಿಕೊಂಡು ಆಡಿದೆ; ತೀರಾ ಈಚೆಗೆ ಪ್ರಭುದೇವ ಇದೇ “ಗುಲ್‌-ಎ-ಬಕಾವಲಿ’ ಹೆಸರಿನ ಚಿತ್ರದಲ್ಲಿ ಕಾಣಿಸಿಕೊಂಡರು. ಸಾವು ಗೆದ್ದಿರುವ ಕಥೆ ಇದು.

ನಿರ್ದೇಶಕ ಎಂ.ಎಸ್‌. ಸತ್ಯು ಅವರಿಗೆ ಇದೇ ಕಥೆಯನ್ನು ಮತ್ತೆ ನಾಟಕವಾಗಿ ಕಟ್ಟಬೇಕು ಅನಿಸಿದ್ದರ ಪರಿಣಾಮ ಇದು. ಈಚೆಗೆ ಕನ್ನಡ ಭಾರತಿ ಹಾಗೂ ಎಡಿಎ ಸಹಯೋಗದಲ್ಲಿ, ಎಡಿಎ ರಂಗಮಂದಿರದಲ್ಲಿ ಈ ನಾಟಕ ರೂಪು ತಳೆಯಿತು. ಸುಧೀರ ಅತ್ತಾವರ್‌ ಈ ಕಥೆಯನ್ನು ರಂಗರೂಪಕ್ಕಿಳಿಸಿದ್ದರು. ಇದು ಮಾಂತ್ರಿಕ ಅಂಶಗಳನ್ನು ಪ್ರಧಾನವಾಗಿರಿಸಿಕೊಂಡಿರುವ ಕಥೆಯಾದ್ದರಿಂದ ಇದನ್ನು ಆಯಾ ದಶಕಗಳ ಮನಸ್ಥಿತಿ ಮತ್ತು ಚಿತ್ರಕ ಶಕ್ತಿಗಳಿಗನುಗುಣವಾಗಿ ಚಿತ್ರಿಸಿಕೊಂಡದ್ದೇನೋ ಸರಿ. ಆದರೆ, ಸತ್ಯು ಅವರು ವಾಸ್ತವದ ಹೊಸ ಸಂವೇದನೆಗಳನ್ನು ಕಟ್ಟಿಕೊಡುವ ಬಗೆಯಲ್ಲಿ ಗುರುತಿಸಿಕೊಂಡಿದ್ದರೂ ಈ ಪ್ರಯೋಗದಲ್ಲಿ ಅವರು ಅದೇ ಹಳೇ ಮಾಂತ್ರಿಕ ಲೋಕವನ್ನು ಕಥೆಯಲ್ಲಿ ಉಳಿಸಿಕೊಂಡಿದ್ದಾರೆ. ಇದನ್ನು ನಿರೂಪಿಸುವ ಸಂದರ್ಭಗಳಲ್ಲಿ ಕೆಲವೆಡೆ ಮಾತ್ರ ಇಂದಿನ ರಾಜಕೀಯದ ಢೋಲಾಯಮಾನದ ಸ್ಥಿತಿಗಳನ್ನು ಮೃದುವಾಗಿ ತಾಕಿದ್ದು ಬಿಟ್ಟರೆ, ಕಥೆಯ ಒಳಹೂರಣದಲ್ಲೇನೂ ಬದಲಾವಣೆಗಳನ್ನು ಮಾಡಿಕೊಂಡಿದ್ದು ಕಂಡುಬರಲಿಲ್ಲ. ಹಾಗಾಗಿ, ಹೆಚ್ಚಿನ ನಿರೀಕ್ಷೆಗಳನ್ನು ಇಟ್ಟುಕೊಳ್ಳದೆ ನೋಡುವಂತೆ, ಈ ಪ್ರಯೋಗ ಆರಂಭದಿಂದಲೇ ಅಣಿಮಾಡಿತು. ಜೊತೆಗೆ ಪಾತ್ರಗಳ ಮಾತುಕತೆಗಳ ಹೊರತಾಗಿ ಸನ್ನಿವೇಶಗಳನ್ನು ಬೆಸೆಯಬೇಕಾದ ಸಂದರ್ಭಗಳಲ್ಲೆಲ್ಲ ಹಾಡು ಕುಣಿತ ಬಳಸಿಕೊಂಡರು. ಆರಂಭದಲ್ಲಿ ಇದು ಸರಿಕಂಡಿತು; ಆದರೆ, ನಾಟಕದ ಉದ್ದಕ್ಕೂ ಹಾಡು ಕುಣಿತ ಬಳಸಿಕೊಂಡದ್ದು ಏಕತಾನ ಅನಿಸಲಿಕ್ಕೆ ಆರಂಭಿಸಿತು. ನಾಟಕ ಕಟ್ಟುವಿಕೆಯ ಹಂತಗಳಲ್ಲಿ ಈ ಏಕತಾನ ತೊರೆದು ಬೇರೆ ಮಾದರಿಗಳ ಬಗ್ಗೆ ಯೋಚಿಸಿದ್ದರೆ ಹೊಸ ಜೀವ ಕಳೆ ದಕ್ಕುತ್ತಿತ್ತು.

ಏನೇಯಾದರೂ ಈ ನಾಟಕ ಗಮನ ಸೆಳೆದದ್ದು, ಪ್ರತಿಯೊಬ್ಬರ ಪೋಷಾಕು ಹಾಗೂ ಬೆಳಕಿನಿಂದ; ತೈಲವರ್ಣದ ಚಿತ್ರದ ಆಕೃತಿಗಳು ರಂಗದ ಮೇಲೆ ಕೊನೆಯವರೆಗೂ ಕದಲುತ್ತಾ ಪೇಟಿಂಗ್‌ಗಳನ್ನು ನೋಡಿದ ಅನುಭವ ನೀಡುತ್ತಿತ್ತು. ಆರಂಭದಲ್ಲಿ ಹಿತ ಎನಿಸಿದ ಸಂಗೀತ ಕ್ರಮೇಣ ಒಂದೇ ಜಾಡು ಹಿಡಿದ ಪರಿಣಾಮವಾಗಿ ಆಸಕ್ತಿ ಕುಗ್ಗಿಸಿತು. ನಂದಿನಿ ಮೆಹ್ತಾರ ನೃತ್ಯ ಸಂಯೋಜನೆಯಲ್ಲಿ ವೈವಿಧ್ಯಗಳಿದ್ದವು. 

ಎಂ.ಎಸ್‌. ಸತ್ಯು ಅವರ ನಿರ್ದೇಶಕನ ಕಾಣ್ಕೆ ಪಗಡೆಯಾಟದ ದೃಶ್ಯಗಳನ್ನು ಕಟ್ಟಿದ ರೀತಿಯಲ್ಲಿ ಕಂಡಿತು. ಇಲ್ಲಿ “ಬಕಾವಲಿ’ ಎಂಬುದು ಹೂವಿನ ಹೆಸರೂ ಹೌದು ಹಾಗೂ ದೇವಕನ್ಯೆಯ ಹೆಸರೂ ಹೌದು. ಈ ದೃಶ್ಯಗಳನ್ನು ಅವರು ಕಟ್ಟಿದ್ದು ಮತ್ತೆ ಪೇಟಿಂಗ್‌ ಅನ್ನು ನೆನಪಿಸಿತು.

Advertisement

 ಎನ್‌.ಸಿ. ಮಹೇಶ್‌

Advertisement

Udayavani is now on Telegram. Click here to join our channel and stay updated with the latest news.

Next