Advertisement
ಶ್ರೇಯಾಂಕಕ್ಕೆ ಆಧಾರ: ಜಲ ನಿರ್ವಹಣೆಯ ಬಗ್ಗೆ ಎಲ್ಲ ರಾಜ್ಯಗಳನ್ನೊಳಗೊಂಡ ಪಟ್ಟಿಯನ್ನು ನೀತಿ ಆಯೋಗ ಬಿಡುಗಡೆ ಮಾಡಿರುವುದು ಇದೇ ಮೊದಲು. ಅಂತರ್ಜಲ, ಜಲ ಸಂಪನ್ಮೂಲಗಳಿಗೆ ಮರುಪೂರಣ ವ್ಯವಸ್ಥೆ, ವ್ಯವಸಾಯ ಮಾದರಿಗಳು, ಕೃಷಿಯಲ್ಲಿ ನೀರಿನ ವೈಜ್ಞಾನಿಕ ಬಳಕೆ, ಕುಡಿಯುವ ನೀರಿನ ಲಭ್ಯತೆ, ಜಲ ಸಂರಕ್ಷಣೆಗಾಗಿ ಆಯಾ ರಾಜ್ಯ ಸರಕಾರಗಳು ರೂಪಿಸಿರುವ ನೀತಿ, ಉತ್ತಮ ಜಲ ನಿರ್ವಹಣೆಗಿರುವ ಆಡಳಿತ ವ್ಯವಸ್ಥೆಗಳನ್ನು ಕೂಲಂಕಷ ಪರಿಶೀಲಿಸಿ ಈ ಪಟ್ಟಿಯನ್ನು ನೀತಿ ಆಯೋಗ ತಯಾರಿಸಿದೆ. ಶ್ರೇಯಾಂಕ ನೀಡುವ ಮುನ್ನ ರಾಜ್ಯಗಳನ್ನು ‘ಈಶಾನ್ಯ ಮತ್ತು ಹಿಮಾಚಲ ರಾಜ್ಯಗಳು’ ಹಾಗೂ ‘ಇತರ ರಾಜ್ಯಗಳು’ ಎಂಬ ಎರಡು ಗುಂಪುಗಳನ್ನಾಗಿ ವಿಂಗಡಿಸಲಾಗಿತ್ತು. ಈಶಾನ್ಯ ಮತ್ತು ಹಿಮಾಚಲ ರಾಜ್ಯಗಳ ಪಟ್ಟಿಯಲ್ಲಿ ತ್ರಿಪುರ ಮೊದಲ ಸ್ಥಾನ ಪಡೆದಿದ್ದರೆ, ಹಿಮಾಚಲ ಪ್ರದೇಶ, ಸಿಕ್ಕಿಂ ಮತ್ತು ಅಸ್ಸಾಂ ಅನಂತರದ ಸ್ಥಾನದಲ್ಲಿವೆ. 2015-16ನೇ ಸಾಲಿನ ಜಲ ನಿರ್ವಹಣೆ ವ್ಯವಸ್ಥೆಗೆ ಹೋಲಿಸಿದರೆ, 2016-17ನೇ ಸಾಲಿನಲ್ಲಿ ಸುಧಾರಣೆ ತೋರಿರುವ ರಾಜ್ಯಗಳ ಪಟ್ಟಿಯನ್ನೂ ಇದೇ ವೇಳೆ ಬಿಡುಗಡೆ ಮಾಡಲಾಗಿದ್ದು, ಈ ಪಟ್ಟಿಯಲ್ಲಿ ರಾಜಸ್ಥಾನ ಮೊದಲ ಸ್ಥಾನ ಗಳಿಸಿದೆ.
ನೀರು ನಿರ್ವಹಣೆಯಲ್ಲಿ ಝಾರ್ಖಂಡ್, ಹರಿಯಾಣ, ಬಿಹಾರ, ಉತ್ತರ ಪ್ರದೇಶ ರಾಜ್ಯಗಳ ಸಾಧನೆ ಏನೇನೂ ತೃಪ್ತಿಕರವಾಗಿಲ್ಲ ಎಂದು ಆಯೋಗ ಹೇಳಿದೆ. ಸದ್ಯ ಭಾರತದಲ್ಲಿ ಸುಮಾರು 60 ಕೋಟಿ ಮಂದಿಗೆ ನೀರಿನ ಸಂಪರ್ಕದ ಕೊರತೆ ಇದೆ. 2030ರ ವೇಳೆಗೆ ಈಗ ಅಗತ್ಯವಿರುವ ಎರಡು ಪಟ್ಟು ಹೆಚ್ಚು ನೀರಿನ ಅಗತ್ಯ ಉಂಟಾಗುತ್ತದೆ. ಜತೆಗೆ ಸದ್ಯ ಹಿಂದೆಂದೂ ಕಾಣದ ನೀರಿನ ಕೊರತೆ ದೇಶದ ಜನರಿಗೆ ಕಾಡುತ್ತಿದೆ ಎಂದಿದೆ ಆಯೋಗ.