Advertisement

ಬಂಡಾಯದ ಬಿಸಿ! ಗುಜರಾತ್‌: ಬಿಜೆಪಿಯ ಐವರು ನಾಯಕರಿಂದ ಬಂಡಾಯ

12:08 AM Nov 14, 2022 | Team Udayavani |

ಅಹ್ಮದಾಬಾದ್‌: ಗುಜರಾತ್‌ನಲ್ಲಿ ಹಲವು ಶಾಸಕರನ್ನು ಕೈಬಿಟ್ಟು ಹೊಸ ಮುಖಗಳಿಗೆ ಟಿಕೆಟ್‌ ಕೊಟ್ಟಿರುವ ಬಿಜೆಪಿಗೆ ಈಗ ಬಂಡಾಯದ ಬಿಸಿ ತಟ್ಟತೊಡಗಿದೆ. ಟಿಕೆಟ್‌ ಕೈತಪ್ಪಿದ್ದರಿಂದ ಆಕ್ರೋಶ ಗೊಂಡಿರುವ ಅನೇಕ ನಾಯಕರು ಹಾಗೂ ಅವರ ಬೆಂಬಲಿಗರು ಭಾರೀ ಪ್ರತಿಭಟನೆ ನಡೆಸುತ್ತಿದ್ದಾರೆ.

Advertisement

ಬಂಡಾಯ ಶಾಸಕರ ಮನವೊಲಿಸುವುದೇ ಆಡಳಿತಾರೂಢ ಬಿಜೆಪಿಗೆ ಅತೀದೊಡ್ಡ ಸವಾಲಾಗಿ ಪರಿಣಮಿಸಿದೆ. ಹಾಲಿ ಶಾಸಕ ಸೇರಿದಂತೆ ಒಟ್ಟು ಐವರು ಈಗಾಗಲೇ ಪಕ್ಷದ ವಿರುದ್ಧ ಬಂಡಾಯ ವೆದ್ದಿದ್ದು, ಸ್ವತಂತ್ರವಾಗಿ ಕಣಕ್ಕಿಳಿಯುವುದಾಗಿ ಘೋಷಿಸಿದ್ದಾರೆ. ಇನ್ನು ಪಕ್ಷದ ಪ್ರಬಲ ಬುಡಕಟ್ಟು ನಾಯಕ ಹರ್ಷದ್‌ ವಸಾವ ಅವರು ಶುಕ್ರವಾರವೇ ನಾಂದೋಡ್‌ ಕ್ಷೇತ್ರದಿಂದ ಪಕ್ಷೇತರರಾಗಿ ನಾಮಪತ್ರ ಸಲ್ಲಿಸಿದ್ದಾರೆ. ಈ ಕ್ಷೇತ್ರದಲ್ಲಿ ಬಿಜೆಪಿ ಡಾ| ದರ್ಶನ ದೇಶಮುಖ್‌ರನ್ನು ಕಣಕ್ಕಿಳಿಸಿದೆ. ವಡೋದರಾ ಜಿಲ್ಲೆಯಲ್ಲಿ ಒಬ್ಬ ಹಾಲಿ ಶಾಸಕರ ಮತ್ತು ಇಬ್ಬರು ಮಾಜಿ ಶಾಸಕರು ಪಕ್ಷದ ವಿರುದ್ಧ ತಿರುಗಿಬಿದ್ದಿದ್ದಾರೆ. ಬೆಂಬಲಿಗರ ಜತೆ ಸಮಾಲೋಚನೆ ನಡೆಸಿ ಸ್ವತಂತ್ರವಾಗಿ ಸ್ಪರ್ಧಿಸುವ ಬಗ್ಗೆ ನಿರ್ಧರಿಸಲಿದ್ದೇವೆ ಎಂದು ಇವರು ಹೇಳಿದ್ದಾರೆ.

ಬಂಡಾಯದಿಂದ ಆಗುವ ಹಾನಿಯನ್ನು ಮನಗಂಡಿರುವ ಬಿಜೆಪಿ, ಬಂಡಾಯ ನಾಯಕರನ್ನು ಸಮಾಧಾನಿಸಲು ಪ್ರಧಾನ ಕಾರ್ಯ ದರ್ಶಿ ಭಾರ್ಗವ ಭಟ್‌ ಮತ್ತು ಸಚಿವ ಹರ್ಷ ಸಾಂಘ್ವಿ ಅವರನ್ನು ಕಳುಹಿಸಿಕೊಟ್ಟಿದೆ. ಬಿಜೆಪಿ ಒಂದು ಕುಟುಂಬವಿದ್ದಂತೆ. ಈ ಕುಟುಂಬದಲ್ಲಿ ಎಲ್ಲರೂ ಒಗ್ಗಟ್ಟಾಗಿದ್ದೇವೆ. ಎಲ್ಲರೂ ಪಕ್ಷದ ಗೆಲುವಿಗಾಗಿ ಶ್ರಮಿಸಲಿದ್ದೇವೆ ಎಂದು ಸಾಂಘ್ವಿ ಹೇಳಿದ್ದಾರೆ. ಒಟ್ಟು 182 ಕ್ಷೇತ್ರಗಳ ಪೈಕಿ 166 ಸ್ಥಾನಗಳಿಗೆ ಬಿಜೆಪಿ ಈಗಾಗಲೇ ಅಭ್ಯರ್ಥಿಗಳ ಹೆಸರು ಘೋಷಿಸಿದೆ.

ಈ ನಡುವೆ ಗುಜರಾತ್‌ನ ಆಪ್‌ ಸಿಎಂ ಅಭ್ಯರ್ಥಿ ಇಸುದನ್‌ ಗಾಧ್ವಿ ಅವರು ಜಾಮ್‌ ಕಂಭಾಲಿಯಾ ಕ್ಷೇತ್ರದಲ್ಲಿ ಕಣಕ್ಕಿಳಿಯಲಿದ್ದಾರೆ ಎಂದು ಕೇಜ್ರಿವಾಲ್‌ ಘೋಷಿಸಿದ್ದಾರೆ.

ರೈಲು ನಿಲ್ಲಿಸದಿದ್ದರೆ ಮತ ಹಾಕಲ್ಲ!: ಇಡೀ ಗುಜರಾತ್‌ ಚುನಾವಣೆಗೆ ಸಜ್ಜಾಗಿದ್ದರೆ, ಇಲ್ಲಿನ ಅಂಚೇಲಿ ಮತ್ತು ನವಸಾರಿ ಕ್ಷೇತ್ರದ 17 ಗ್ರಾಮಗಳ ಜನರು ಮಾತ್ರ ಚುನಾವಣೆ ಬಹಿಷ್ಕರಿಸುವುದಾಗಿ ಬೆದರಿಕೆ ಹಾಕಿದ್ದಾರೆ. ಕೊರೊನಾದ ಬಳಿಕ ರೈಲುಗಳು ಇಲ್ಲಿ ನಿಲ್ಲುವುದೇ ಇಲ್ಲ. ಹೀಗಾಗಿ ಪ್ರಯಾಣಿಕರಿಗೆ ತೊಂದರೆಯಾಗಿದೆ. ಖಾಸಗಿ ವಾಹನದಲ್ಲಿ ಸಂಚರಿಸಬೇಕೆಂದರೆ ದಿನಕ್ಕೆ 300ರೂ. ವೆಚ್ಚ ಮಾಡಬೇಕು. ಹಾಗಾಗಿ ಇಲ್ಲಿ ರೈಲು ನಿಲುಗಡೆ ಆಗುವವರೆಗೂ ನಾವು ಮತ ಚಲಾಯಿಸುವುದಿಲ್ಲ. ಯಾವ ಪಕ್ಷಗಳೂ ನಮ್ಮ ಹಳ್ಳಿಗಳಿಗೆ ಮತ ಕೇಳಿಕೊಂಡು ಬರಬಾರದು ಎನ್ನುವುದು ಗ್ರಾಮಸ್ಥರ ವಾದ.

Advertisement

ಬಿಜೆಪಿ ಮಹತ್ವದ ಸಭೆ
ಹೊಸದಿಲ್ಲಿಯ ಬಿಜೆಪಿ ಪ್ರಧಾನ ಕಚೇರಿಯಲ್ಲಿ ರವಿವಾರ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್‌.ಸಂತೋಷ್‌ ನೇತೃತ್ವದಲ್ಲಿ ಮಹತ್ವದ ಸಭೆ ನಡೆದಿದೆ. ಗುಜರಾತ್‌ ಚುನಾವಣೆ, ದಿಲ್ಲಿ ಎಂಸಿಡಿ ಚುನಾವಣೆ ಮತ್ತು 2024ರ ಲೋಕಸಭೆ ಚುನಾವಣೆ ಕುರಿತು ಇಲ್ಲಿ ಗಂಭೀರ ಚರ್ಚೆ ನಡೆಸಲಾಗಿದೆ. ಎಲ್ಲ ಮೋರ್ಚಾಗಳ ಮುಖ್ಯಸ್ಥರು ಈ ಸಭೆಯಲ್ಲಿ ಪಾಲ್ಗೊಂಡಿದ್ದರು ಎಂದು ಮೂಲಗಳು ತಿಳಿಸಿವೆ.

Advertisement

Udayavani is now on Telegram. Click here to join our channel and stay updated with the latest news.

Next