ಬೆಂಗಳೂರು: ಸಚಿವ ಡಿ.ಕೆ. ಶಿವಕುಮಾರ್ ಮನೆ ಮೇಲೆ ಐಟಿ ದಾಳಿ ನಡೆದ ಹಿನ್ನೆಲೆಯಲ್ಲಿ ರೆಸಾರ್ಟ್‌ನಲ್ಲಿ ತಂಗಿರುವ ಗುಜರಾತ್ ಕಾಂಗ್ರೆಸ್ ಶಾಸಕರು ಭಯಭೀತರಾಗಿದ್ದಾರೆ. ತಮ್ಮ ಮೇಲೂ ಐಟಿ ಇಲಾಖೆ ಕಣ್ಣು ಬಿದ್ದರೆ ಕಷ್ಟ ಎಂಬ ಆತಂಕದಿಂದ ತಾವು ಗುಜರಾತ್‌ಗೆ ವಾಪಸ್ ತೆರಳುವುದಾಗಿ ಪಟ್ಟು ಹಿಡಿದಿದ್ದಾರೆ ಎಂದು ತಿಳಿದು ಬಂದಿದೆ.
ಗುಜರಾತ್ ರಾಜ್ಯಸಭೆ ಚುನಾವಣೆ ನೆಪದಲ್ಲಿ ಕೇಂದ್ರ ಸರಕಾರ ಐಟಿ ಇಲಾಖೆ ಮೂಲಕ ತಮ್ಮ ಮನೆಗಳ ಮೇಲೆಯೂ ದಾಳಿ ನಡೆಸಿದರೆ, ಎದುರಿಸುವುದು ಕಷ್ಟವಾಗಲಿದೆ. ನಮ್ಮ ರಾಜ್ಯಕ್ಕೆ ಹೋಗಲು ಬಿಟ್ಟು ಬಿಡಿ ಎಂದು ಕೆಪಿಸಿಸಿ ಅಧ್ಯಕ್ಷ ಡಾ| ಜಿ. ಪರಮೇಶ್ವರ್ ಹಾಗೂ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ಅವರ ಬಳಿ ಅಳಲು ತೋಡಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.
ಮೂವರು ಶಾಸಕರು ಆಸ್ಪತ್ರೆಗೆ: ಅನಾರೋಗ್ಯದಿಂದ ಮೂವರು ಗುಜರಾತ್ ಶಾಸಕರು ಆಸ್ಪತ್ರೆಗೆ ದಾಖಲಾಗಿದ್ದಾರೆ. ಶಾಸಕರಾದ ಪಟೇಲ್ ಜೋಯಿತಾ ಭಾಯ್, ಕಾನಾಭಾಯ್, ಪರಮಾರ್ ರಾಜೇಂದ್ರ ಸಿನ್ಹ ಬಿಜಿಎಸ್ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಶಾಸಕರ ಆತಂಕವನ್ನು ಅರಿತು ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್ ಹಾಗೂ ದಿನೇಶ್ ಗುಂಡೂರಾವ್ ಅವರ ಮನವೊಲಿಸುವ ಪ್ರಯತ್ನ ನಡೆಸಿದ್ದು, ಹೈಕಮಾಂಡ್ ಆದೇಶದಂತೆ ಚುನಾವಣೆ ನಡೆಯುವವರೆಗೂ ರಾಜ್ಯದಲ್ಲಿಯೇ ಇರುವಂತೆ ಸೂಚಿಸಿದ್ದಾರೆ.
ಗುಜರಾತ್ ಶಾಸಕರು ಸಂತೋಷವಾಗಿದ್ದಾರೆ. ಅವರು ವಾಪಸ್ ಹೋಗಲು ಬಯಸುತ್ತಿದ್ದಾರೆ ಎಂದು ಮಾಧ್ಯಮಗಳಲ್ಲಿ ಬಂದ ಸುದ್ದಿ ಸತ್ಯಕ್ಕೆ ದೂರವಾಗಿದೆ ಎಂದು ಪರಮೇಶ್ವರ್ ತಿಳಿಸಿದ್ದಾರೆ.