ನವದೆಹಲಿ: 2002ರಲ್ಲಿನ ಗೋಧ್ರೋತ್ತೋರ ಗಲಭೆ ವೇಳೆ ಧ್ವಂಸವಾದ ಮಂದಿರ, ಮಸೀದಿಗಳ ಮರು ನಿರ್ಮಾಣ ಮಾಡುವಂತೆ ಗುಜರಾತ್ ಹೈಕೋರ್ಟ್ ನೀಡಿದ್ದ ಆದೇಶವನ್ನು ಸುಪ್ರೀಂಕೋರ್ಟ್ ಮಂಗಳವಾರ ತಿರಸ್ಕರಿಸಿದೆ.
ಗೋಧ್ರಾ ರೈಲು ದುರಂತದ ಘಟನೆ ಬಳಿಕ 2002ರಲ್ಲಿ ನಡೆದ ಗಲಭೆ ವೇಳೆ ಸುಮಾರು 500 ಧಾರ್ಮಿಕ ಕೇಂದ್ರಗಳಿಗೆ(ಮಂದಿರ, ಮಸೀದಿ) ಹಾನಿಯಾಗಿತ್ತು. ಈ ಧಾರ್ಮಿಕ ಕೇಂದ್ರಗಳಿಗೆ ಗುಜರಾತ್ ಸರ್ಕಾರ ಪರಿಹಾರ ಕೊಡಬೇಕೆಂದು ಹೈಕೋರ್ಟ್ ಆದೇಶ ನೀಡಿತ್ತು.
ಆದರೆ ಗುಜರಾತ್ ಸರ್ಕಾರ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್ ಮೆಟ್ಟಿಲೇರಿತ್ತು. ಮಂಗಳವಾರ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ಹಾಗೂ ಜಸ್ಟೀಸ್ ಪಿ ಸಿ ಪಂತ್ ನೇತೃತ್ವದ ಪೀಠ, 2002ರಲ್ಲಿ ಹಾನಿಗೊಳಗಾದ ಎಲ್ಲಾ ಧಾರ್ಮಿಕ ಕೇಂದ್ರಗಳಿಗೆ ಪರಿಹಾರ ನೀಡಬೇಕೆಂಬ ಗುಜರಾತ್ ಹೈಕೋರ್ಟ್ ತೀರ್ಪನ್ನು ವಜಾಗೊಳಿಸಿದೆ.
ಆದರೆ ಗಲಭೆ ವೇಳೆ ಹಾನಿಗೊಳಗಾದ ನಿವಾಸಿಗಳಿಗೆ ಮತ್ತು ವಾಣಿಜ್ಯ ಆಸ್ತಿಗಳಿಗೆ ಸರ್ಕಾರ ನೀಡುವ 50 ಸಾವಿರ ರೂಪಾಯಿ ಪರಿಹಾರವನ್ನು ಕೊಡಬೇಕು. ಅದೇ ರೀತಿ ಈ ಪರಿಹಾರ ಧಾರ್ಮಿಕ ಆಸ್ತಿ ಹಾನಿಗೊಂಡಿದ್ದರು ಅನ್ವಯವಾಗುತ್ತದೆ ಎಂದು ಪೀಠ ಸ್ಪಷ್ಟಪಡಿಸಿದೆ.
ಅಲ್ಲದೇ ಸಾರ್ವಜನಿಕರ ತೆರಿಗೆ ಹಣವನ್ನು ಧಾರ್ಮಿಕ ಕೇಂದ್ರಗಳ ಪುನರ್ ನಿರ್ಮಾಣಕ್ಕೆ ವಿನಿಯೋಗಿಸುವುದು ಸರಿಯಲ್ಲ ಎಂದು ಬಿಜೆಪಿ ನೇತೃತ್ವದ ಗುಜರಾತ್ ಸರ್ಕಾರದ ಪರಿವಾಗಿ ಅಡಿಷನಲ್ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ವಾದ ಮಂಡಿಸಿದ್ದರು.
2002ರ ಫೆಬ್ರುವರಿ, ಮಾರ್ಚ್ ವೇಳೆ ಗುಜರಾತ್ ನಲ್ಲಿ ಭುಗಿಲೆದ್ದ ಹಿಂಸಾಚಾರದಲ್ಲಿ ಸುಮಾರು 800 ಮುಸ್ಲಿಮರು ಹಾಗೂ 250 ಹಿಂದೂಗಳು ಬಲಿಯಾಗಿದ್ದರು. ಇದು ಸ್ವಾತಂತ್ರ್ಯ ನಂತರ ದೇಶದಲ್ಲಿ ನಡೆದ ಅತ್ಯಂತ ಭೀಕರ ಕೋಮು ಗಲಭೆಯಾಗಿತ್ತು. ಗೋಧ್ರಾ ರೈಲ್ವೆ ನಿಲ್ದಾಣದಲ್ಲಿ ರೈಲ್ವೆ ಬೋಗಿಯೊಳಗಿದ್ದ 57 ಹಿಂದೂ ಕರಸೇವಕರನ್ನು ಜೀವಂತವಾಗಿ ಸುಟ್ಟು ಹಾಕಿದ ಘಟನೆ ನಂತರ ಗುಜರಾತ್ ಕೋಮುದಳ್ಳುರಿಯಿಂದ ಹೊತ್ತಿ ಉರಿದಿತ್ತು.