ಮುಂಬಯಿ : ಡಾ ಡಿವೈ ಪಾಟೀಲ್ ಸ್ಪೋರ್ಟ್ಸ್ ಅಕಾಡೆಮಿ, ನವಿ ಮುಂಬೈನಲ್ಲಿ ಶನಿವಾರ ನಡೆದ ವನಿತಾ ಪ್ರೀಮಿಯರ್ ಲೀಗ್ ನ 9ನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡ ಗುಜರಾತ್ ಜೈಂಟ್ಸ್ ವಿರುದ್ಧ 10 ವಿಕೆಟ್ ಅಂತರದ ಭರ್ಜರಿ ಜಯ ದಾಖಲಿಸಿದೆ.
ಟಾಸ್ ಗೆದ್ದ ಗುಜರಾತ್ ಜೈಂಟ್ಸ್ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು.ಖಾತೆ ತೆರೆಯುವ ಮೊದಲೇ ವಿಕೆಟ್ ಕಳೆದು ಕೊಂಡು ಆಘಾತ ಅನುಭವಿಸಿತು. 33 ರನ್ ಆಗುವಷ್ಟರಲ್ಲಿ 6 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಹರ್ಲೀನ್ ಡಿಯೋಲ್ 20 ರನ್, ವಾರೆಹಮ್ 22 ಗಳಿಸಿದ್ದು ಬಿಟ್ಟರೆ ಕೊನೆಯಲ್ಲಿ ಬಂದ ಕಿಮ್ ಗಾರ್ತ್ ಔಟಾಗದೆ 32 ರನ್ ಗಳಿಸಿ ತಂಡದ ಮೊತ್ತ ನೂರು ದಾಟಲು ನೆರವಾದರು. ತನುಜಾ ಕನ್ವರ್ 13 ರನ್ ಕೊಡುಗೆ ನೀಡಿದರು.
ಡೆಲ್ಲಿ ಪರ ಬೌಲಿಂಗ್ ನಲ್ಲಿ ಮಾರಿಜಾನ್ನೆ ಕಪ್ ಬಿಗಿ ಬೌಲಿಂಗ್ ದಾಳಿ ಸಂಘಟಿಸಿ 5 ವಿಕೆಟ್ ಕಬಳಿಸಿದರು. ಶಿಖಾ ಪಾಂಡೆ 3 ವಿಕೆಟ್ ಪಡೆದರು. ರಾಧಾ ಯಾದವ್1 ವಿಕೆಟ್ ಪಡೆದರು. ತಂಡ 9 ವಿಕೆಟ್ ನಷ್ಟಕ್ಕೆ 105 ರನ್ ಗಳಿಸಿ ಸುಲಭ ಗುರಿ ಮುಂದಿಟ್ಟಿತು.
ಗುರಿ ಬೆನ್ನಟ್ಟಿದ ಡೆಲ್ಲಿ ತಂಡ ಸ್ಪೋಟಕ ಬ್ಯಾಟಿಂಗ್ ಪ್ರದರ್ಶನ ತೋರಿ 7.1 ಓವರ್ ಗಳಲ್ಲೇ 107 ರನ್ ಗಳಿಸಿ ಜಯದ ಕೇಕೆ ಹಾಕಿತು. ಸಿಡಿದು ನಿಂತ ಶಫಾಲಿ ವರ್ಮಾ 28 ಎಸೆತಗಳಲ್ಲಿ 10 ಬೌಂಡರಿ ಮತ್ತು 5 ಅಮೋಘ ಸಿಕ್ಸರ್ ಗಳ ಮಳೆ ಸುರಿಸಿ 76 ರನ್ ಗಳ ಅಬ್ಬರ ತೋರಿದರು. ನಾಯಕಿ ಮೆಗ್ ಲ್ಯಾನಿಂಗ್ 21 ರನ್ ಸಾಥ್ ನೀಡಿದರು.