ಅಹಮದಾಬಾದ್: ಇದೇ ಮೊದಲ ಬಾರಿಗೆ, ಗುಜರಾತ್‌ನ ಸುಮಾರು ಒಂದು ಸಾವಿರ ಕಾರ್ಪೊರೇಟ್ ಸಂಸ್ಥೆಗಳು ಚುನಾವಣಾ ಆಯೋಗದೊಂದಿಗೆ ವಿನೂತನವಾದ ಒಪ್ಪಂದವೊಂದನ್ನು ಮಾಡಿಕೊಂಡಿವೆ.
ಅದರಂತೆ, ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಯಾರು ಹಕ್ಕು ಚಲಾಯಿಸುವುದಿಲ್ಲವೋ, ಅಂಥ ಉದ್ಯೋಗಿಗಳ ಹೆಸರನ್ನು ಕಂಪನಿಗಳು ತಮ್ಮ ವೆಬ್‌ಸೈಟ್‌ಗಳು ಅಥವಾ ಕಚೇರಿಯ ನೋಟಿಸ್ ಬೋರ್ಡ್‌ನಲ್ಲಿ ಪ್ರಕಟಿಸಲಿವೆ!
ಈ ಕುರಿತು ಮಾಹಿತಿ ನೀಡಿರುವ ಗುಜರಾತ್ ಮುಖ್ಯ ಚುನಾವಣಾ ಅಧಿಕಾರಿ(ಸಿಇಒ) ಪಿ. ಭಾರತಿ, ಈವರೆಗೆ ನಾವು 233 ಒಪ್ಪಂದಗಳಿಗೆ ಸಹಿ ಹಾಕಿದ್ದೇವೆ. 1,017 ಕೈಗಾರಿಕಾ ಘಟಕಗಳಲ್ಲಿ ಕಾರ್ಯನಿರ್ವಹಿಸುವ ಎಲ್ಲ ಸಿಬ್ಬಂದಿಯೂ ಚುನಾವಣಾ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವಂತೆ ಮಾಡುವುದು ನಮ್ಮ ಉದ್ದೇಶವಾಗಿದೆ ಎಂದಿದ್ದಾರೆ. ಜತೆಗೆ, ಇನ್ನೂ ಅನೇಕ ಸಂಸ್ಥೆಗಳೊಂದಿಗೆ ಇಂಥ ಒಪ್ಪಂದ ಮಾಡಿಕೊಳ್ಳಲಾಗುವುದು. ಚುನಾವಣಾ ದಿನದವರೆಗೂ ಈ ಪ್ರಕ್ರಿಯೆ ಮುಂದುವರಿಯಲಿದೆ ಎಂದೂ ತಿಳಿಸಿದ್ದಾರೆ.
ಗುಜರಾತ್‌ನಲ್ಲಿ 100 ಅಥವಾ ಹೆಚ್ಚು ಕಾರ್ಮಿಕರನ್ನು ಹೊಂದಿರುವ ಕೈಗಾರಿಕೆಗಳನ್ನು ಗುರುತಿಸಿ, ಇಲ್ಲಿನ ಮಾನವ ಸಂಪನ್ಮೂಲ ಅಧಿಕಾರಿಗಳನ್ನೇ ನೋಡಲ್ ಅಧಿಕಾರಿಗಳನ್ನಾಗಿ ನೇಮಕ ಮಾಡಲಾಯಿತು. ಮತ ಚಲಾಯಿಸಲೆಂದು ರಜೆ ಪಡೆದರೂ, ಹಕ್ಕು ಚಲಾಯಿಸದೇ ಇರುವ ಮತದಾರರ ಪಟ್ಟಿಯನ್ನು ಇವರು ಸಿದ್ಧಪಡಿಸುತ್ತಾರೆ. ನಂತರ ಕಂಪನಿಯ ವೆಬ್‌ಸೈಟ್ ಅಥವಾ ನೋಟಿಸ್ ಬೋರ್ಡ್‌ನಲ್ಲಿ ಪ್ರಕಟಿಸುತ್ತಾರೆ ಎಂದೂ ಭಾರತಿ ಅವರು ತಿಳಿಸಿದ್ದಾರೆ.