ಅಹಮದಾಬಾದ್: ಗುಜರಾತ್‌ನ ಅಹಮದಾಬಾದ್‌ನಲ್ಲಿ 2 ದಿನಗಳ ಹಿಂದೆ ಕೋಮು ಗಲಭೆ ಉಂಟಾಗಿ ಇಬ್ಬರು ಅಸುನೀಗಿದ್ದರು. ಆ ಗದ್ದಲ ಮುಕ್ತಾಯವಾಗುತ್ತಿರುವಂತೆಯೇ ಪಟಾಣ್ ಜಿಲ್ಲೆಯ ವಡವಾಲಿ ಗ್ರಾಮದಲ್ಲಿ ಇಬ್ಬರು ವಿದ್ಯಾರ್ಥಿಗಳ ಜಗಳ ಕೋಮು ಹಿಂಸಾಚಾರಕ್ಕೆ ತಿರುಗಿದೆ. ಈ ಘಟನೆಯಲ್ಲಿ ಒಬ್ಬ ಅಸುನೀಗಿ, 12ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಉದ್ರಿಕ್ತ ಗುಂಪು ಚದುರಿಸಲು ಪೊಲೀಸರು ಗಾಳಿಯಲ್ಲಿ ಏಳು ಸುತ್ತು ಗುಂಡು ಹಾರಿಸಿದ್ದಾರೆ. ಗ್ರಾಮದ ಶಾಲೆಯಲ್ಲಿ 10ನೇ ತರಗತಿ ಪರೀಕ್ಷೆ ಮುಗಿಸಿ, ಮೆಟ್ಟಿಲು ಇಳಿದು ಬರುತ್ತಿದ್ದ ಇಬ್ಬರು ವಿದ್ಯಾರ್ಥಿಗಳ ಪೈಕಿ ಒಬ್ಬ ಕಾಲು ಜಾರಿ ಬಿದ್ದಿದ್ದಾನೆ. ಇದೇ ವಿಷಯಕ್ಕೆ ಇಬ್ಬರೂ ಹೊಡೆದಾಡಿದ್ದಾರೆ. ಅಲ್ಲೇ ಇಕ್ಕ ಹತ್ತಾರು ವಿದ್ಯಾರ್ಥಿಗಳೂ ಸ್ಥಳದಲ್ಲಿ ಸೇರಿ ಕಿತ್ತಾಡಿಕೊಂಡಿದ್ದಾರೆ. ಮರು ದಿನ ಈ ವಿಷಯ ಕಾಡ್ಗಿಚ್ಚಿನಂತೆ ಹಬ್ಬಿದ್ದು, ವಡಾವಲಿ ಗ್ರಾಮಕ್ಕೆ ನುಗ್ಗಿದ ಸುಮಾರು 5000 ಮಂದಿ ಇದ್ದ ಗುಂಪು, ಅಲ್ಲಿನ ಮತ್ತೂಂದು ಗುಂಪಿನ ಮನೆಗಳಿಗೆ ನುಗ್ಗಿ ಕೈಗೆ ಸಿಕ್ಕವರ ಮೇಲೆ ಹಲ್ಲೆ ನಡೆಸಿದೆ. ಗ್ರಾಮದ 20 ಮನೆಗಳನ್ನೂ ತಡಕಾಡಿದ ಗುಂಪು, ಮನೆಯಲ್ಲಿನ ವಸ್ತುಗಳು ಹಾಗೂ ವಾಹನಗಳನ್ನು ಧ್ವಂಸಗೊಳಿಸಿದೆ.