ನವದೆಹಲಿ:ಗುಜರಾತ್ ನ ಗೋಧ್ರಾ ರೈಲಿಗೆ ಬೆಂಕಿ ಹಚ್ಚಿದ ಪ್ರಕರಣದ ಆರೋಪಿಯೊಬ್ಬನಿಗೆ ಸುಪ್ರೀಂಕೋರ್ಟ್ ಗುರುವಾರ (ಡಿಸೆಂಬರ್ 15) ಜಾಮೀನು ನೀಡಿದ್ದು, ಇದರೊಂದಿಗೆ ಘಟನೆ ನಡೆದು 17 ವರ್ಷಗಳ ಬಳಿಕ ಆರೋಪಿಗೆ ಬೇಲ್ ಸಿಕ್ಕಂತಾಗಿದೆ ಎಂದು ವರದಿ ತಿಳಿಸಿದೆ.
ಇದನ್ನೂ ಓದಿ:ಕಾಸರಗೋಡು: ವಿಮಾನ ನಿಲ್ದಾಣದಲ್ಲಿ 75 ಲಕ್ಷ ರೂ. ಮೌಲ್ಯದ ಚಿನ್ನ ವಶಕ್ಕೆ
2002ರಲ್ಲಿ ಗೋಧ್ರಾ ರೈಲಿಗೆ ಬೆಂಕಿ ಹಚ್ಚಿದ್ದ ಘಟನೆಯಿಂದಾಗಿ ಗುಜರಾತ್ ನಲ್ಲಿ ಕೋಮು ದಳ್ಳುರಿಗೆ ಕಾರಣವಾಗಿತ್ತು. “ಕಳೆದ 17 ವರ್ಷಗಳಿಂದ ಆರೋಪಿ ಫಾರೂಕ್ ಜೈಲು ಶಿಕ್ಷೆ ಅನುಭವಿಸುತ್ತಿದ್ದು, ರೈಲಿಗೆ ಕಲ್ಲು ಎಸೆದ ಆರೋಪ ಈತನ ಮೇಲಿರುವುದಾಗಿ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಮತ್ತು ಜಸ್ಟೀಸ್ ಪಿಎಸ್ ನರಸಿಂಹ ಅವರನ್ನೊಳಗೊಂಡ ಪೀಠ ತಿಳಿಸಿದೆ.
ಸೆಷನ್ಸ್ ಕೋರ್ಟ್ ವಿಧಿಸಿರುವ ನಿಯಮ ಮತ್ತು ಷರತ್ತುಗಳ ಅನ್ವಯ ಆರೋಪಿ ಫಾರೂಕ್ ಗೆ ಜಾಮೀನು ನೀಡಲಾಗಿದೆ. ರಾಜ್ಯ ಸರ್ಕಾರ ಅಂದು ಕೋರ್ಟ್ ಗೆ ಸಲ್ಲಿರುವ ಪ್ರಮಾಣಪತ್ರದಲ್ಲಿ, ಆರೋಪಿ ಅಂದು ಜನರ ಗುಂಪಿಗೆ ಪ್ರಚೋದನೆ ನೀಡಿದ್ದು, ರೈಲಿನ ಬೋಗಿಗಳತ್ತ ಕಲ್ಲು ತೂರಾಟ ನಡಸಿದ ಪರಿಣಾಮ ಪ್ರಯಾಣಿಕರು ಗಾಯಗೊಂಡಿದ್ದರು ಎಂದು ತಿಳಿಸಿತ್ತು.
2004ರಿಂದ ಬಂಧನದಲ್ಲಿರುವ ಆರೋಪಿ ಫಾರೂಖ್ ತನಗೆ ಜಾಮೀನು ಮಂಜೂರು ಮಾಡಬೇಕೆಂದು ಸುಪ್ರೀಂಕೋರ್ಟ್ ಮೊರೆ ಹೋಗಿದ್ದ. ಅಲ್ಲದೇ ತನ್ನನ್ನು ದೋಷಿ ಎಂದು ನೀಡಿರುವ ತೀರ್ಪಿನ ವಿರುದ್ಧ ಫಾರೂಕ್ ಮೇಲ್ಮನವಿ ಸಲ್ಲಿಸಿದ್ದು, ವಿಚಾರಣೆಗೆ ಬಾಕಿ ಇದೆ.