ಗುಜರಾತ್ ವಿಧಾನಸಭೆಗೆ ಡಿ. 9 ಮತ್ತು 14ರಂದು ಎರಡು ಹಂತಗಳಲ್ಲಿ ನಡೆಯಲಿರುವ ಚುನಾವಣೆ ಹಲವು ಕಾರಣಗಳಿಗೆ ಮಹತ್ವ ಪಡೆದುಕೊಂಡಿದೆ. 22 ವರ್ಷಗಳಿಂದ ರಾಜ್ಯದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ಅಂತೆಯೇ ಎರಡು ದಶಕಗಳಿಂದ ಅಧಿಕಾರ ವಂಚಿತವಾಗಿರುವ ಕಾಂಗ್ರೆಸ್ ಎರಡೂ ಪಕ್ಷಗಳಿಗೆ ಈ ಚುನಾವಣೆ ಪ್ರತಿಷ್ಠೆಯ ಪಣವಾಗಿದೆ. ಗುಜರಾತ್ ಬಿಜೆಪಿಯ ಮುಖ್ಯ ಶಕ್ತಿ ಕೇಂದ್ರ. ಬಿಜೆಪಿ ನಿರ್ಣಾಯಕವಾದ ರಾಜಕೀಯ ಶಕ್ತಿಯನ್ನು ಪಡೆದುಕೊಂಡಿರುವುದು ಈ ರಾಜ್ಯದಿಂದ. ಅಂತೆಯೇ ಇದು ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ಅಧ್ಯಕ್ಷ ಅಮಿತ್ ಶಾರ ತವರು ರಾಜ್ಯ. 2014ರ ಲೋಕಸಭಾ ಚುನಾವಣೆಯಲ್ಲಿ 26ಕ್ಕೆ 26 ಸ್ಥಾನಗಳನ್ನು ಗೆದ್ದಿರುವ ಬಿಜೆಪಿಗೆ ಈ ಅಲೆಯನ್ನು ಕಾಯ್ದಿಟ್ಟುಕೊಳ್ಳುವುದು ಅನಿವಾರ್ಯ. ಗುಜರಾತ್ ಫಲಿತಾಂಶದಲ್ಲಾಗುವ ಸಣ್ಣದೊಂದು ವ್ಯತ್ಯಾಸವೂ ಬಿಜೆಪಿಯಲ್ಲಿ ಮಾತ್ರವಲ್ಲದೆ ರಾಷ್ಟ್ರ ರಾಜಕಾರಣದಲ್ಲೂ ದೊಡ್ಡ ಮಟ್ಟದ ಸಂಚಲನಕ್ಕೆ ಕಾರಣವಾಗುವ ಸಾಧ್ಯತೆಯಿರುವುದರಿಂದ ಈ ಚುನಾವಣೆ ದೇಶಾದ್ಯಂತ ಭಾರೀ ಕುತೂಹಲ ಕೆರಳಿಸಿದೆ.
ಮುಂದಿನ ವರ್ಷ ಕರ್ನಾಟಕವೂ ಸೇರಿದಂತೆ ಎಂಟು ರಾಜ್ಯಗಳಿಗೆ ನಡೆಯಲಿರುವ ವಿಧಾನಸಭೆ ಚುನಾವಣೆ ಮತ್ತು 2019ರಲ್ಲಿ ನಡೆಯುವ ಲೋಕಸಭೆ ಚುನಾವಣೆಗೆ ಗುಜರಾತ್ ಫಲಿತಾಂಶ ದಿಕ್ಸೂಚಿಯಾಗಲಿದೆ. ಈ ಹಿನ್ನೆಲೆಯಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಗುಜರಾತ್ ಚುನಾವಣೆಗೆ ಬತ್ತಳಿಕೆಯಲ್ಲಿರುವ ಎಲ್ಲ ಅಸ್ತ್ರಗಳನ್ನು ಸಾಣೆ ಹಿಡಿದು ತಯಾರಾಗಿಟ್ಟುಕೊಂಡಿವೆ. ಗುಜರಾತ್ ಚುನಾವಣೆಯ ದಿನಾಂಕ ಘೋಷಣೆಯೇ ವಿವಾದಕ್ಕೊಳಗಾಗಿತ್ತು.
ಯಥಾ ಪ್ರಕಾರ ಗುಜರಾತ್ ಚುನಾವಣೆಯೂ ಮೋದಿ ವರ್ಸಸ್ ರಾಹುಲ್ ಗಾಂಧಿ ನಡುವಿನ ಹೋರಾಟವಾಗಿ ಬದಲಾಗಿದೆ. 15 ವರ್ಷಗಳ ಬಳಿಕ ಇದೇ ಮೊದಲ ಸಲ ಬಿಜೆಪಿ ಮೋದಿಯಿಲ್ಲದೆ ಚುನಾವಣೆ ಎದುರಿಸುತ್ತಿದ್ದರೂ ಸದ್ಯಕ್ಕೆ ಪ್ರಧಾನಿ ವರ್ಚಸ್ಸೇ ಇಲ್ಲಿ ಬಿಜೆಪಿಯ ಬಲ. ಈ ವರ್ಚಸನ್ನು ಸರಿಗಟ್ಟಲು ಮುಖ್ಯಮಂತ್ರಿ ವಿಜಯ್ ರುಪಾಣಿ ಸಾಧ್ಯವಿಲ್ಲ ಎನ್ನುವುದು ಸತ್ಯ. ಆದರೆ ಇದೇ ವೇಳೆ ಗುಜರಾತಿನಲ್ಲಿ ಹಾಲಿ ಸಿಎಂನಷ್ಟು ಜನಪ್ರಿಯ ನಾಯಕರು ಬಿಜೆಪಿ ಮತ್ತು ಕಾಂಗ್ರೆಸ್‌ನಲ್ಲೂ ಇಲ್ಲ ಎನ್ನುವುದು ಕೂಡ ಅಷ್ಟೇ ಸತ್ಯ. ಕಾಂಗ್ರೆಸ್ ಅಂತೂ ಸ್ಥಳೀಯವಾಗಿ ಪ್ರಭಾವಿ ನಾಯಕರಿಲ್ಲದೆ ಕಳಾಹೀನವಾಗಿದೆ. ಹೀಗಾಗಿ ರಾಹುಲ್ ಗಾಂಧಿ ಪದೇ ಪದೆ ಆ ರಾಜ್ಯಕ್ಕೆ ಭೇಟಿ ನೀಡಿ ಚುನಾವಣೆಗೆ ಪಕ್ಷವನ್ನು ಅಣಿಗೊಳಿಸುವ ಕೆಲಸ ಮಾಡುತ್ತಿದ್ದಾರೆ.ಚುನಾವಣೆ ಹೊಸ್ತಿಲಲ್ಲಿ ಶಂಕರ್‌ಸಿನ್ಹ ವಘೇಲ ಪಕ್ಷ ಬಿಟ್ಟು ಹೋಗಿರುವುದು ಕಾಂಗ್ರೆಸ್‌ಗೆ ಬಿದ್ದಿರುವ ದೊಡ್ಡ ಹೊಡೆತ.
ಪಟೇಲ್ ಸಮುದಾಯದ ಮೀಸಲಾತಿ ಹೋರಾಟದಿಂದ ಪ್ರಸಿದ್ಧಿಗೆ ಬಂದಿರುವ ಹಾರ್ದಿಕ್ ಪಟೇಲ್, ಒಬಿಸಿಯಲ್ಲಿರುವ ಕ್ಷತ್ರಿಯ ಸಮುದಾಯದವರ ಶರಾಬಿನ ಚಟದ ವಿರುದ್ಧ ಆಂದೋಲನ ನಡೆಸಿ ಹೆಸರುಗಳಿಸಿರುವ ಅಲ್ಪೇಶ್ ಠಾಕೂರ್, ಉನಾ ದಲಿತ ದೌರ್ಜನ್ಯ ಪ್ರಕರಣದ ಬಳಿಕ ಸುದ್ದಿಯಲ್ಲಿರುವ ಜಿಗ್ನೇಶ್ ಮೇವಾನಿಯನ್ನು ಸೆಳೆಯುವ ಮೂಲಕ ಬಿಜೆಪಿಗೆ ಸೆಡ್ಡು ಹೊಡೆಯುವ ರಣತಂತ್ರವನ್ನು ಕಾಂಗ್ರೆಸ್ ರೂಪಿಸಿದೆ. 2015ರಲ್ಲಿ ನಡೆದ ಜಿಲ್ಲಾ ಪಂಚಾಯತ್ ಚುನಾವಣೆಯಲ್ಲಿ 31ರಲ್ಲಿ 23 ಸ್ಥಾನಗಳನ್ನು ಗಳಿಸಿರುವುದು ಮತ್ತು 193 ತಾಲೂಕು ಪಂಚಾಯತ್‌ಗಳ ಪೈಕಿ 113ರಲ್ಲಿ ಗೆದ್ದಿರುವುದು ಕಾಂಗ್ರೆಸ್‌ನ ಆತ್ಮವಿಶ್ವಾಸವನ್ನು ತುಸು ಹೆಚ್ಚಿಸಿದೆ. ಜತೆಗೆ ರಾಜ್ಯಸಭೆ ಚುನಾವಣೆಯಲ್ಲಿ ಅಹ್ಮದ್ ಪಟೇಲ್‌ಗೆ ದಕ್ಕಿದ ನಾಟಕೀಯ ಗೆಲುವುದು ಕೂಡ ಕಾಂಗ್ರೆಸ್‌ಗೆ ಸಂಜೀವಿನಿಯಂತೆ ಕೆಲಸ ಮಾಡಿದೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಹೆಚ್ಚಿನ ಸ್ಥಾನಗಳನ್ನು ಗಳಿಸಲು ಸಾಧ್ಯವಾಗಿರದಿದ್ದಲೂ ಶೇಕಡವಾರು ಮತಗಳಿಕೆಯಲ್ಲಿ ಗಣನೀಯ ಸುಧಾರಣೆ ಮಾಡಿಕೊಂಡಿದೆ. ಈ ಎಲ್ಲ ಅಂಶಗಳ ಜತೆಗೆ ರಾಹುಲ್ ಗಾಂಧಿಯ ಆಕ್ರಮಕಾರಿ ಪ್ರಚಾರ ಮತ್ತು ಆಡಳಿತ ವಿರೋಧಿ ಅಲೆಯ ನೆರವಿನ ಮೂಲಕ 22 ವರ್ಷದ ಬಳಿಕ ಮರಳಿ ಅಧಿಕಾರಕ್ಕೇರುವ ಮೂಲಕ ಮೋದಿಗೆ ತವರು ರಾಜ್ಯದಲ್ಲೇ ಮುಖಭಂಗ ಮಾಡಬೇಕೆಂಬ ಹಠದಲ್ಲಿದೆ ಕಾಂಗ್ರೆಸ್.
ಆದರೆ ಇದು ಎಣಿಸಿದಷ್ಟು ಸುಲಭ ಅಲ್ಲ ಎನ್ನುವುದು ಕಾಂಗ್ರೆಸ್‌ಗೆ ಕೂಡ ಚೆನ್ನಾಗಿ ಅರಿವಿದೆ. ಏಕೆಂದರೆ ಮೋದಿ ದಿಲ್ಲಿಯಲ್ಲಿದ್ದರೂ ಗುಜರಾತಿಗಳ ಹೃದಯದಲ್ಲಿ ಅವರಿಗೆ ಎಂದೆಂದೂ ಶಾಶ್ವತವಾದ ಸ್ಥಾನವಿದೆ. ಈ ಸ್ಥಾನಕ್ಕೆ ಲಗ್ಗೆ ಹಾಕುವುದು ಅಷ್ಟು ಸುಲಭವಲ್ಲ. ಜತೆಗೆ ಚುನಾವಣೆಗಳನ್ನು ಗೆಲ್ಲುವುದರಲ್ಲಿ ಸಿದ್ಧಹಸ್ತರಾಗಿರುವ ಅಮಿತ್ ಶಾ ಯಾವ ಕಾರಣಕ್ಕೂ ತವರು ರಾಜ್ಯದಲ್ಲಿ ಸೋಲಾಗಲು ಬಿಡಲಾರರು. ಹೀಗಾಗಿ ಕಾಂಗ್ರೆಸ್ ಹಿಂದಿನ ಫಲಿತಾಂಶ ಪುನರಾವರ್ತನೆಯಾದರೂ ಕಳೆದುಕೊಳ್ಳುವುದು ಏನೂ ಇಲ್ಲ. ಹತ್ತರ ಜತೆಗೆ ಇನ್ನೊಂದು ಸೋಲು ಎಂದು ನಿರ್ಲಿಪ್ತ ಭಾವದಿಂದಿರಬಹುದು. ಆದರೆ ಬಿಜೆಪಿ ಪಾಲಿಗೆ ಇದು ಗೆಲ್ಲಲೇ ಬೇಕಾದ ಯುದ್ಧ.