Advertisement

ಸತತ ಗೆಲುವಿನೊಂದಿಗೆ ಹೊರಟ್ಟಿ ಗಿನ್ನಿಸ್‌ ದಾಖಲೆ

09:15 AM May 30, 2022 | Team Udayavani |

ಹುಬ್ಬಳ್ಳಿ: ವಿಧಾನ ಪರಿಷತ್‌ ಮಾಜಿ ಸಭಾಪತಿ ಬಸವರಾಜ ಹೊರಟ್ಟಿಯವರು 8ನೇ ಬಾರಿಯೂ ಶಿಕ್ಷಕರ ಮತಕ್ಷೇತ್ರದಿಂದ ಆರಿಸುವ ಬರುವ ಗಿನ್ನಿಸ್‌ ದಾಖಲೆ ನಿರ್ಮಿಸುವಲ್ಲಿ ಯಾವುದೇ ಸಂದೇಹವಿಲ್ಲವೆಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ ಜೋಶಿ ವಿಶ್ವಾಸ ವ್ಯಕ್ತಪಡಿಸಿದರು.

Advertisement

ಇಲ್ಲಿನ ದೇಶಪಾಂಡೆ ನಗರದ ರೋಟರಿ ಪ್ರೌಢಶಾಲೆಯಲ್ಲಿ ರವಿವಾರ ನಡೆದ ಶಿಕ್ಷಕರ ಸಮಾಲೋಚನಾ ಸಭೆಯಲ್ಲಿ ಮಾತನಾಡಿದ ಅವರು, ಹೊರಟ್ಟಿ ಮತ್ತು ನಾವು ಈ ಮೊದಲು ಎಲ್ಲ ಚುನಾವಣೆಗಳನ್ನು ವಿರೋಧವಾಗಿಯೇ ಮಾಡಿದ್ದೇವೆ. ಅದರಲ್ಲಿ ಯಾವುದೇ ಗೊಂದಲ ಬೇಡ. ಆದರೆ, ಚುನಾವಣೆ ಹೊರತಾಗಿ ನಾವೆಲ್ಲ ಹುಬ್ಬಳ್ಳಿ-ಧಾರವಾಡ ಅಭಿವೃದ್ಧಿಗೆ ಒಗ್ಗಟ್ಟಾಗಿ ಸ್ನೇಹಿತರಂತೆ ಕೆಲಸ ಮಾಡಿದ್ದೇವೆ. ಇದೀಗ ಚುನಾವಣೆ ಸಹ ಜತೆಯಾಗಿಯೇ ಎದುರಿಸುತ್ತಿದ್ದೇವೆ. ಶಿಕ್ಷಣ ಕ್ಷೇತ್ರಕ್ಕೆ ಸಂಬಂಧಿಸಿ ಅನೇಕ ಸಮಸ್ಯೆಗಳು ಎದುರಾದಾಗ ಹೊರಟ್ಟಿಯವರೇ ಮುಂಚೂಣಿಯಲ್ಲಿ ನಿಂತು ಕೆಲಸ ಮಾಡಿದ್ದಾರೆ ಎಂದರು.

ಹೊರಟ್ಟಿಯವರು ಶಿಕ್ಷಕರ ಹಕ್ಕಿಗಾಗಿ ಹಲವು ಬಾರಿ ಹೋರಾಟ ಮಾಡಿದ್ದಾರೆ. 74ರ ವಯಸ್ಸಿನಲ್ಲೂ ಇಂದಿಗೂ ಅವರು ಮೊದಲಿನ ಕಳಕಳಿಯಿಂದಲೇ ಕೆಲಸ ಮಾಡುತ್ತಿದ್ದಾರೆ. ಆ ಉತ್ಸಾಹ ಕಳೆದುಕೊಂಡಿಲ್ಲ. ಅವರ ಬಗ್ಗೆ ಯಾವುದೇ ಗೊಂದಲವಿಲ್ಲ. ಈ ಬಾರಿ ಅವರಿಗೆ ಯುದ್ಧಭೂಮಿ ಮುಕ್ತವಾಗಿದೆ. ಅವರ ಐತಿಹಾಸಿಕ ದಾಖಲೆಯ ವಿಜಯಕ್ಕೆ ಶಿಕ್ಷಕರೆಲ್ಲ ಕಾರಣವಾಗಬೇಕು. ಕೊನೆ ಕ್ಷಣದವರೆಗೂ ಶ್ರಮವಹಿಸಿ ಕೆಲಸ ಮಾಡುವ ಮೂಲಕ ಗಿನ್ನಿಸ್‌ ದಾಖಲೆ ನಿರ್ಮಿಸಿ ಅದರ ಪಾಲುದಾರರಾಗಬೇಕು ಎಂದರಲ್ಲದೇ ಶಿಕ್ಷಕರ ಪಿಂಚಣಿ ಕುರಿತು ಚುನಾವಣೆ ನಂತರ ಮುಖ್ಯಮಂತ್ರಿ ಭೇಟಿ ಮಾಡಿ ಸಮಸ್ಯೆ ಪರಿಹಾರಕ್ಕೆ ಮುಂದಾಗೋಣ ಎಂದು ಭರವಸೆ ನೀಡಿದರು.

ಕಾಂಗ್ರೆಸ್‌ ಜನರಿಗೆ ಸಂಬಂಧವಿಲ್ಲದ ಪಕ್ಷ. ಅಲ್ಲಿ ಅಕ್ಷರಸ್ಥರು ಮತ್ತು ಅನಕ್ಷರಸ್ಥರು ಯಾರೂ ಇಲ್ಲ ಎಂದು ಹೇಳಿದರು.

ವಿಧಾನ ಪರಿಷತ್‌ ಮಾಜಿ ಸಭಾಪತಿ, ಪಶ್ಚಿಮ ಶಿಕ್ಷಕರ ಮತಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಸವರಾಜ ಹೊರಟ್ಟಿ ಮಾತನಾಡಿ, ವಿರೋಧಿಗಳ ಹೇಳಿಕೆ ಬಗ್ಗೆ ಯಾವುದೇ ತಲೆಕೆಡಿಸಿಕೊಳ್ಳುವುದು ಬೇಡ. ಪ್ರತಿ ಚುನಾವಣೆಯಲ್ಲೂ ಟೀಕೆ ಮಾಡುತ್ತಾರೆ. ಪಕ್ಷದಲ್ಲಿದ್ದವರೇ ಎರಡೂ ಕಡೆ ಇದ್ದ ಹಾಗೆ ನಾಟಕ ಮಾಡುತ್ತಿದ್ದಾರೆ. ಅದನ್ನು ಸಚಿವರ ಗಮನಕ್ಕೆ ತರಲಾಗಿದೆ. ಈ ಚುನಾವಣೆಯಲ್ಲಿ ನನಗೆ ಯಾವುದೇ ಅಡೆತಡೆ ಇಲ್ಲ. ಶೇ.80 ಶಿಕ್ಷಕರು ನನ್ನ ಪರ ಮತ ಚಲಾಯಿಸಲು ತೀರ್ಮಾನಿಸಿದ್ದಾರೆ.ಶೇ 80 ಶಿಕ್ಷಕರು ನನಗೆ ಮತಹಾಕುವ ವಿಶ್ವಾಸವಿದೆ. ಬಿಜೆಪಿ ಸೇರಿರುವುದರಿಂದ ಯಾವುದೇ ಸಮಸ್ಯೆಯಿಲ್ಲ. ಪಕ್ಷದಲ್ಲೂ ಯಾವುದೇ ಭಿನ್ನಾಭಿಪ್ರಾಯ ಇಲ್ಲ. ಎರಡು ತಲೆಮಾರಿನ ಜನರು ನನಗೆ ಮತ ಚಲಾಯಿಸಿದ್ದಾರೆ. ಎಲ್ಲರೂ ಜವಾಬ್ದಾರಿ ಅರಿತು ಕೆಲಸ ಮಾಡಬೇಕು. 2004ರ ನಂತರ ನೇಮಕಾತಿ ಆದವರಿಗೆ ಪಿಂಚಣಿ ಇಲ್ಲ. ಬೇರೆ ಬೇರೆ ರಾಜ್ಯಗಳು ಅದಕ್ಕೊಂದು ಪರಿಹಾರ ಕಂಡುಕೊಂಡಿವೆ. ನಮ್ಮ ರಾಜ್ಯದಲ್ಲೂ ಏನು ಮಾಡಬಹುದೆಂದು ಚರ್ಚಿಸಿ ಸೂಕ್ತ ತೀರ್ಮಾನ ಕೈಗೊಳ್ಳಬೇಕು. ಈ ಕುರಿತು ಜೋಶಿ ಅವರು ರಾಜ್ಯ ಸರಕಾರದ ಜತೆ ಮಾತನಾಡಬೇಕು ಎಂದರು.

Advertisement

ಪ್ರಾಸ್ತಾವಿಕ ಮಾತನಾಡಿದ ವಿಶ್ವನಾಥ ಕೊರವಿ, ಪ್ರೊ| ವಿ.ಎಚ್‌.ಬೆಳಗಲಿ ಮಾತನಾಡಿದರು. ಜಗದೀಶ ಕಲ್ಯಾಣಶೆಟ್ಟರ, ರಾಜಣ್ಣ ಕೊರವಿ, ಶಿವರಾಮ ಹೆಗಡೆ, ಅಬ್ದುಲ ಮೆಣಸಗಿ ಮೊದಲಾದವರಿದ್ದರು. ವಿ.ಎಸ್‌.ಹುದ್ದಾರ ಸ್ವಾಗತಿಸಿದರು. ಆರ್‌.ಬಿ. ಕೊಣ್ಣೂರ ನಿರೂಪಿಸಿದರು. ಸಂಗಮೇಶ ಪಟ್ಟಣಶೆಟ್ಟಿ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next