Advertisement
ಸರ್ಕಾರಿ ನೌಕರ ಸೇವೆಯಲ್ಲಿರುವಾಗ ಎಸಗಿದ ದುರ್ನಡತೆಗೆ ಸಂಬಂಧಿಸಿ ಆತ ನಿವೃತ್ತಿ ಹೊಂದುವವರೆಗೆ ಯಾವುದೇ ಕ್ರಮ ವಹಿಸುತ್ತಿಲ್ಲ. ಅಥವಾ ನಿವೃತ್ತಿಯ ನಿಕಟಪೂರ್ವದ ಕೆಲವೇ ದಿನಗಳಲ್ಲಿ ಶಿಸ್ತು ಕ್ರಮ ಆರಂಭಿಸುತ್ತಿರುವ ಪ್ರಕರಣಗಳು ಹೆಚ್ಚಾಗಿ ಕಂಡು ಬರುತ್ತಿವೆ. ಇದರಿಂದ ತಪ್ಪಿತಸ್ಥ ಸರ್ಕಾರಿ ನೌಕರನ ವಿರುದ್ಧ ಪರಿಣಾಮಕಾರಿಯಾಗಿ ಶಿಸ್ತು ಕ್ರಮ ಕೈಗೊಳ್ಳಲು ಆಗುತ್ತಿಲ್ಲ. ಇದರಿಂದ ನೌಕರನು ಶಿಸ್ತು ಕ್ರಮದಿಂದ ರಕ್ಷಿಸಲ್ಪಡುತ್ತಿದ್ದು ಇದು ಸರ್ಕಾರದ ಹಿತಾಸಕ್ತಿಗೆ ಮಾರಕವಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.
Related Articles
Advertisement
ನಿವೃತ್ತಿ ಹೊಂದಲಿರುವ ಸರ್ಕಾರಿ ನೌಕರರ ವಿರುದ್ಧ ಅವರು ಸೇವೆಯಲ್ಲಿರುವಾಗ ಎಸಗಿದ ದುರ್ನಡತೆಗಾಗಿ ಸೂಕ್ತ ಸಮಯದಲ್ಲಿ ಅಂದರೆ ಅಂಥ ನೌಕರ ಸೇವೆಯಿಂದ ನಿವೃತ್ತಿ ಹೊಂದುವ ಸಾಕಷ್ಟು ಪೂರ್ವದಲ್ಲಿಯೇ ಶಿಸ್ತುಕ್ರಮ ಆರಂಭಿಸಬೇಕು. ಇಲ್ಲದಿದ್ದರೆ ನಿವೃತ್ತಿ ನಂತರ ಕರ್ನಾಟಕ ನಾಗರಿಕ ಸೇವಾ (ವರ್ಗೀಕರಣ, ನಿಯಂತ್ರಣ ಹಾಗೂ ಮೇಲ್ಮನವಿ) ನಿಯಮಗಳು 1957ರಡಿಯಲ್ಲಿ ಕೈಗೊಳ್ಳಲು ಅವಕಾಶವಿಲ್ಲ. ಆದರೆ ಅಂಥ ಶಿಸ್ತು ಕ್ರಮಗಳನ್ನು ಕರ್ನಾಟಕ ನಾಗರಿಕ ಸೇವಾ ನಿಯಮ 214ರ ಅಡಿ ಮಾತ್ರ ಕೈಗೊಳ್ಳಲು ಅವಕಾಶವಿದೆ. ಆದರೆ ಸರ್ಕಾರಿ ನೌಕರನು ನಿವೃತ್ತಿಯಾದ ಬಳಿಕ ಅವನ ಮೇಲೆ ಹೂಡಲಾಗಿದ್ದ ಇಲಾಖಾ ವಿಚಾರಣೆಗಳಲ್ಲಿ ಸರ್ಕಾರಕ್ಕೆ “ಆತನಿಂದ ಆರ್ಥಿಕ ಹಾನಿಯಾಗಿಲ್ಲ’ ಎಂಬ ಕಾರಣದ ಮೇಲೆ ಹಿಂದಕ್ಕೆ ಪಡೆಯುವ ಪ್ರಸ್ತಾವನೆಗಳೇ ಹೆಚ್ಚಾಗಿ ಸರ್ಕಾರಕ್ಕೆ ಬರುತ್ತಿವೆ. ಇದು ಸರಿಯಲ್ಲ. ಅಲ್ಲದೇ ಸರ್ಕಾರಿ ನೌಕರ ನಿವೃತ್ತಿ ಹೊಂದುವ ಕೆಲವೇ ದಿನಗಳ ಮೊದಲು ಶಿಸ್ತು ಕ್ರಮದ ಪ್ರಸ್ತಾವನೆಗಳನ್ನು ಸಲ್ಲಿಸಲಾಗುತ್ತಿರುವುದು ಸಹ ಸರಿಯಲ್ಲ ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಕೆಲವು ಸಂದರ್ಭದಲ್ಲಿ ದುರ್ನಡತೆಯು ಸರ್ಕಾರಿ ನೌಕರ ನಿವೃತ್ತಿ ಹೊಂದಿದ ನಾಲ್ಕು ವರ್ಷಕ್ಕೂ ಹಿಂದಿನ ಅವಧಿಗೆ ಸಂಬಂಧಿಸಿದ್ದು ಎಂಬ ಕಾರಣಕ್ಕಾಗಿ ಆತನ ವಿರುದ್ಧ ಕರ್ನಾಟಕ ನಾಗರಿಕ ಸೇವಾ ನಿಯಮ 214 (ಬಿ) ಅಡಿಯಲ್ಲಿಯೂ ಶಿಸ್ತು ಕ್ರಮ ಜರುಗಿಸಲು ಸಾಧ್ಯವಿಲ್ಲ ಎಂಬ ನಿಲುವಿಗೆ ಬರಲಾಗುತ್ತಿದೆ. ಆದ್ದರಿಂದ ಸರ್ಕಾರಿ ನೌಕರರ ದುರ್ನಡತೆಗೆ ಸಂಬಂಧಿಸಿದ ಪ್ರಕರಣಗಳಲ್ಲಿನ ಶಿಸ್ತು ಕ್ರಮದ ಪ್ರಸ್ತಾವನೆಗಳನ್ನು ಸಂಬಂಧಿಸಿದ ನೌಕರ ವಯೋನಿವೃತ್ತಿ ಹೊಂದುವ ಕನಿಷ್ಟ 30 ದಿನಗಳ ಮೊದಲೇ ಕರಡು ದೋಷಾರೋಪಣೆ ಪಟ್ಟಿ ಮತ್ತು ಇನ್ನಿತರ ಪೂರಕ ದಾಖಲೆ ಪತ್ರಗಳನ್ನು ಶಿಸ್ತು ಪ್ರಾಧಿಕಾರಿಗೆ ಸಲ್ಲಿಸಬೇಕು ಎಂದು ಸೂಚಿಸಲಾಗಿದೆ.
ನಿವೃತ್ತಿ ಹೊಂದಲಿರುವ ಸರ್ಕಾರಿ ನೌಕರರ ವಿರುದ್ಧ ಸಕಾಲದಲ್ಲಿ ಇಲಾಖೆ ವಿಚಾರಣೆ ಆರಂಭಿಸಿ ದೋಷಾರೋಪಣೆ ಪಟ್ಟಿ ಮತ್ತು ಇನ್ನಿತರ ಪೂರಕ ದಾಖಲೆ ಪತ್ರಗಳನ್ನು ಶಿಸ್ತು ಪ್ರಾಧಿಕಾರಕ್ಕೆ ಸಲ್ಲಿಸಬೇಕು. ಶಿಸ್ತು ಪ್ರಾಧಿಕಾರಿಗಳು ನಿವೃತ್ತಿ ಅಂಚಿನಲ್ಲಿರುವವರ ಪ್ರಕರಣಗಳನ್ನು ಶೀಘ್ರ ವಿಚಾರಣೆ ಮಾಡಿ ಶಿಸ್ತು ಕ್ರಮಕ್ಕೆ ಪ್ರಸ್ತಾವನೆ ಸಲ್ಲಿಸಬೇಕು.
-ಪಿ. ಹೇಮಲತಾ, ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಕಾರ್ಯದರ್ಶಿ
-ಎಚ್.ಕೆ. ನಟರಾಜ