ಕಾರ್ಕಳ: ಕಾರ್ಕಳಕ್ಕೆ ಆಗಮಿಸುವ, ಇಲ್ಲಿನ ಮಾರ್ಗಗಳ ಮೂಲಕ ವಿವಿಧ ಕಡೆಗಳಿಗೆ ತೆರಳುವ ಪ್ರವಾಸಿಗರು ಸ್ಥಳೀಯರಲ್ಲಿ ತಲುಪಬೇಕಾದ ಊರಿನ ಮಾರ್ಗದ ಮಾಹಿತಿ ಕೇಳುವುದು ನಗರದಲ್ಲಿ ಸಾಮಾನ್ಯವಾಗಿದೆ.
ನಗರದ ಕೆಲವು ಪ್ರಮುಖ ರಸ್ತೆ ಮತ್ತು ವೃತ್ತಗಳಲ್ಲಿ ಸರಿಯಾದ ಮಾರ್ಗಸೂಚಿಗಳಿಲ್ಲ. ಕೆಲವು ಸ್ಥಳಗಳಲ್ಲಿ ಇದ್ದರೂ ಅದು ಸರಿಯಾದ ಜಾಗದಲ್ಲಿಲ್ಲದೆ ಸಮಸ್ಯೆಯಾಗುತ್ತಿದೆ. ಮಳೆಗೆ ಫಲಕಗಳ ಅಕ್ಷರಗಳು, ಚಿಹ್ನೆಗಳು ಮಾಸಿ ಹೋಗಿವೆ. ವಾಹನ ಸವಾರರು ರಸ್ತೆ ಬದಿ ವಾಹನ ನಿಲ್ಲಿಸಿ ಸ್ಥಳೀಯರಲ್ಲಿ ವಿಚಾರಿಸುವ ಸ್ಥಿತಿಯಿದೆ.
ಪುರಸಭೆ ವ್ಯಾಪ್ತಿಯಲ್ಲಿ ಉಡುಪಿ ಭಾಗದಿಂದ ಹಾಗೂ ಹೆಬ್ರಿ ಕಡೆಯಿಂದ ಬಂದು ಸೇರುವ ಜೋಡುರಸ್ತೆ ಜಂಕ್ಷನ್‌ನಲ್ಲಿ 3 ಕಡೆ ಮಾರ್ಗಸೂಚಿ ನಾಮಫಲಕವಿದ್ದರೂ ಅದು ಸಣ್ಣದಾಗಿದ್ದು, ತತ್‌ಕ್ಷಣಕ್ಕೆ ವಾಹನದಲ್ಲಿ ತೆರಳುವವರಿಗೆ ಕಾಣುತ್ತಿಲ್ಲ. ಕಾಣುವ ಜಾಗದಲ್ಲಿಯೂ ಅವುಗಳಿಲ್ಲ. ಕಮಾನು ಆಕಾರದ ಮಾರ್ಗಸೂಚಿ ಇಲ್ಲಿ ನಿರ್ಮಾಣವಾಗಬೇಕಿದೆ.
ಬಂಡಿಮಠ ಜಂಕ್ಷನ್‌ನಲ್ಲಿ ಒಂದು ರಸ್ತೆ ನೇರ ಕಾರ್ಕಳ ಪೇಟೆಗೆ ಸಂಪರ್ಕಿಸಿದರೆ ಇನ್ನೊಂದು ಬೈಪಾಸ್ ಮೂಲಕ ವಿವಿಧ ಕಡೆಗಳಿಗೆ ತೆರಳುವುದಾಗಿದೆ. ಇಲ್ಲಿ ಜಂಕ್ಷನ್ ಪಕ್ಕದ ಬೇಕರಿ ಬದಿ ಪುರಸಭೆ ವತಿಯಿಂದ ಮಾರ್ಗಸೂಚಿ ನಾಮ ಫಲಕವಿದ್ದರೂ ಮಳೆಗೆ ಅಕ್ಷರಗಳು ಮಾಸಿ ಕಾಣಿಸುತ್ತಿಲ್ಲ. ಫಲಕದಲ್ಲಿ ಮಂಗಳೂರು, ಧರ್ಮಸ್ಥಳ, ಮೂಡುಬಿದಿರೆ, ಕುದುರೆಮುಖ ಕಡೆಗಿನ ದಾರಿಯನ್ನು ಚಿಹ್ನೆ ಮೂಲಕ ತೋರಿಸಲಾಗಿದೆ. ಅವುಗಳು ಸ್ಪಷ್ಟವಾಗಿ ಗೋಚರಿಸುತ್ತಿಲ್ಲ.
ಬಂಡಿಮಠ ಡಾ| ಬಿ. ಆರ್ ಅಂಬೇಡ್ಕರ್ ಪ್ರತಿಮೆ ಜಂಕ್ಷನ್‌ನಲ್ಲಿ ಮಾರ್ಗಸೂಚಿ ನಾಮಫಲಕವೇ ಇಲ್ಲ. ಇಲ್ಲಿಂದ ಒಂದು ರಸ್ತೆ ತಾ| ಕಚೇರಿಗೂ ಇನ್ನೊಂದು ಮುಖ್ಯ ಪೇಟೆ ಸಂಪರ್ಕಿಸುತ್ತದೆ. ಪ್ರಯಾಣಿಕರು ಈ ಮೂರು ಜಂಕ್ಷನ್‌ಗಳಲ್ಲಿ ಸರಿಯಾದ ಮಾಹಿತಿ ಸಿಗದೆ ಪೇಟೆ ಬಂದಲ್ಲಿ ಕಿರಿದಾದ ಪೇಟೆಯಲ್ಲಿ ಸಿಲುಕಿಕೊಂಡು ಹೊರಬರಲು ಒದ್ದಾಡುವ ಸ್ಥಿತಿಯಿದೆ. ಒಮ್ಮೆ ಪೇಟೆ ಯೊಳಗೆ ಪ್ರವೇಶಿಸಿದರೆ ಮತ್ತೆ ಹೊರಬರಲು ತ್ರಾಸಪಡಬೇಕು. ಬೈಪಾಸ್ ರಸ್ತೆ ಹಾಗೂ ಪೇಟೆಯಿಂದ ಹೊರಟು ಆನೆಕೆರೆ ಕಡೆಯಿಂದ ಬಂದು ಸೇರುವ ಪುಲ್ಕೇರಿ ಆಸುಪಾಸಿನ ಜಂಕ್ಷನ್, ರಸ್ತೆಬದಿ ಮೂರ್‍ನಾಲ್ಕು ಕಡೆ ಮಾರ್ಗಸೂಚಿ ಫಲಕಗಳಿದ್ದು ಅವುಗಳು ಸುವ್ಯವಸ್ಥಿತವಾಗಿದೆ ಪ್ರವಾಸಿ ಕೇಂದ್ರಗಳಿಗೆ ತೆರಳುವ ಮಾರ್ಗಗಳಲ್ಲಿ ಈ ಹಿಂದೆ ಹಾಕಿರುವ ಮಾರ್ಗಸೂಚಿಗಳು ಕೆಲವೊಂದು ಕಡೆ ಮಳೆ, ಗಾಳಿಗೆ ಬಿದ್ದು ಹೋಗಿದ್ದರೆ ಇನ್ನೂ ಕೆಲವೆಡೆ ಅಕ್ಷರಗಳು ಮಾಸಿಹೋಗಿವೆ. ಇವುಗಳನ್ನು ಸರಿಪಡಿ ಸುವ ಕೆಲಸಗಳು ಆದಲ್ಲಿ ಪ್ರವಾಸಿಗರಿಗೆ ಮಾಹಿತಿಗೆ ಅನುಕೂಲವಾಗುತ್ತದೆ. ಗ್ರಾಮೀಣ ಭಾಗದ ಪಂಚಾಯತ್ ವ್ಯಾಪ್ತಿ ಗಳಲ್ಲಿ ಕೂಡ ಇಂತದ್ದೇ ಸಮಸ್ಯೆಯಿದ್ದು. ಮಾರ್ಗಸೂಚಿ ನಾಮಫಲಕಗಳ ಮರು ದುರಸ್ತಿಯ ಆವಶ್ಯಕತೆಯಿದೆ.
ಹೆದ್ದಾರಿ ಕಮಾನುಗಳ ಮಾಹಿತಿಗಳೇ ಗೋಚರಿಸುತ್ತಿಲ್ಲ
ಮಂಗಳೂರು- ಮೂಡುಬಿದಿರೆ, ಧರ್ಮಸ್ಥಳ ಭಾಗದಿಂದ ಬಂದು ಸೇರುವ ರಾಷ್ಟ್ರೀಯ ಹೆದ್ದಾರಿಯ ನವೋದಯ ವೃತ್ತದ ಬಳಿ ಕಾರ್ಕಳ ಕಡೆಗೆ ತೆರಳುವ ಮಾರ್ಗದಲ್ಲಿ ಅಳವಡಿಸಲಾದ ಕಮಾನು ಶಿಥಿಲಗೊಂಡಿದೆ.
ಇದರಲ್ಲಿ ತಲುಪಬೇಕಾದ ನಗರಗಳ ಕಿ.ಮೀ. ಅಳಿಸಿಹೋಗಿ ಸರಿಯಾದ ಮಾಹಿತಿ ಸಿಗುತ್ತಿಲ್ಲ. ನಗರ ಪ್ರವೇಶಿಸುವ ಕರಿಯಕಲ್ಲು ಪ್ರವೇಶ ದ್ವಾರದ ಕಮಾನು ಕೂಡ ನಶಿಸುತ್ತ ಬರುತ್ತಿದೆ. ಇನ್ನು ಕಾರ್ಕಳ ತಾಲೂಕಿನಲ್ಲಿ ಹಾದು ಹೋಗುವ ರಾಷ್ಟ್ರೀಯ, ರಾಜ್ಯ ಹೆದ್ದಾರಿಗಳ ಜಂಕ್ಷನ್‌ಗಳ ಹಲವೆಡೆ ಕಮಾನು ನಾಮ ಫಲಕಗಳಲ್ಲಿ ಮಾರ್ಗಸೂಚಿ ಮಾಹಿತಿಗಳು ಮಾಸಿ ಹೋಗಿವೆ. ಕೆಲವೊಂದು ಕಡೆ ಉತ್ತಮ ಸ್ಥಿತಿಯಲ್ಲಿವೆ. ಶಿಥಿಲಗೊಂಡಿರುವುದನ್ನು ದುರಸ್ತಿಗೊಳಿಸಬೇಕಿದೆ.
ಪರಿಶೀಲಿಸಿ ಕ್ರಮ
ಪುರಸಭೆ ವ್ಯಾಪ್ತಿಯ ಮಾರ್ಗಸೂಚಿ ಮಾಹಿತಿಗಳು ಅಸ್ಪಷ್ಟವಾಗಿರುವ ಬಗ್ಗೆ ಮಾಹಿತಿ ಬಂದ ಹಿನ್ನೆಲೆಯಲ್ಲಿ ಪರಿಶೀಲಿಸಿ, ಮುಂದಿನ ಕ್ರಮಗಳನ್ನು ತೆಗೆದುಕೊಳ್ಳುತ್ತೇವೆ.
-ರೂಪಾ ಟಿ. ಶೆಟ್ಟಿ, ಮುಖ್ಯಾಧಿಕಾರಿ ಪುರಸಭೆ
ಸಿದ್ಧಪಡಿಸುತ್ತೇವೆ
ಹೆದ್ದಾರಿಯ ಶಿಥಿಲ ಮಾರ್ಗಸೂಚಿಗಳನ್ನು ಪರಿಶೀಲಿಸಿ, ಅವುಗಳನ್ನು ದುರಸ್ತಿಗೊಳಿಸಿ ಸಾರ್ವಜನಿಕ ಪ್ರಯಾಣಿಕರಿಗೆ ಅನುಕೂಲ ವಾಗುವಂತೆ ಸರಿಪಡಿಸಿಕೊಡಲಾಗುವುದು.
-ಸೋಮಶೇಖರ, ಎಇಇ(ಪ್ರಭಾರ) ಲೊಕೋಪಯೋಗಿ ಇಲಾಖೆ ಕಾರ್ಕಳ
ಬಾಲಕೃಷ್ಣ ಭೀಮಗುಳಿ