Advertisement

“ರೈಲು ಮಾರ್ಗದ ಭರವಸೆ ಚುನಾವಣ ಗಿಮಿಕ್‌’

09:14 PM Apr 07, 2019 | sudhir |

ಮಡಿಕೇರಿ: ಕೊಡಗಿಗೆ ರೈಲು – ಚತುಷ್ಪಥ ರಸ್ತೆ ಯೋಜನೆಯ ಹೇಳಿಕೆಗಳು ಕೇವಲ ಬಿಜೆಪಿಯ ಚುನಾವಣಾ ಗಿಮಿಕ್‌ ಹೊರತು ಬೇರೇನೂ ಅಲ್ಲವೆಂದು ಕಾಂಗ್ರೆಸ್‌ -ಜೆಡಿಎಸ್‌ ಮೈತ್ರಿ ಪಕ್ಷದ ಪ್ರಮುಖರು ಟೀಕಿಸಿದ್ದಾರೆ.

Advertisement

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಾಂಗ್ರೆಸ್‌ ವಕ್ತಾರ ಟಿ.ಸುರೇಶ್‌ ಕೊಡಗಿಗೆ ರೈಲು ಸಂಪರ್ಕ ಕಲ್ಪಿಸುವುದಾಗಿ ಕಳೆದ 5 ವರ್ಷಗಳಿಂದ ಹೇಳುತ್ತಾ ಬಂದಿರುವ ಸಂಸದ ಪ್ರತಾಪ್‌ಸಿಂಹ ಅವರು ಇದೀಗ ಚುನಾವಣೆಯ ಸಮಯದಲ್ಲೂ ರೈಲು ಮಾರ್ಗದ ಬಗ್ಗೆ ಮಾತನಾಡುತ್ತಿದ್ದಾರೆ. ಮೈಸೂರು-ಮಡಿಕೇರಿ ಚತುಷ್ಪಥ ರಸ್ತೆಗೆ ಅನುದಾನ ಬಿಡುಗಡೆಯಗಿದ್ದು, ಚುನಾವಣೆಯ ಬಳಿಕ ಕಾಮಗಾರಿ ಆರಂಭಿಸುವುದಾಗಿ ಹೇಳುತ್ತಿದ್ದಾರೆ.

ಕಳೆದ 5 ವರ್ಷಗಳ ತಮ್ಮ ಅಧಿಕಾರ ವಧಿಯಲ್ಲಿ ಕೊಡಗಿಗೆ ಏನನ್ನೂ ಮಾಡದ ಸಂಸದ ಪ್ರತಾಪ್‌ಸಿಂಹ ಅವರು, ಕೊಡಗಿನ ಜನರ ಪ್ರತಿನಿಧಿಯಾಗಲು ಅರ್ಹರೇ ಎಂಬುದನ್ನು ಮತದಾರರೇ ತೀರ್ಮಾನ ಮಾಡಬೇಕಿದೆ ಎಂದು ಹೇಳಿದರು.

ಕಳೆದ ಅವಧಿಯಲ್ಲಿ ಕೊಡಗಿಗೆ ತಾನು ಏನೂ ಮಾಡಿಲ್ಲ. ಇಲ್ಲಿನ ಶಾಸಕರು ಎಲ್ಲವನ್ನೂ ಮಾಡಿದ್ದಾರೆ. ಇನ್ನೊಂದು ಬಾರಿ ಅವಕಾಶ ನೀಡಿ ಎಂದು ಸ್ವತಃ ಪ್ರತಾಪ್‌ಸಿಂಹ ಅವರೇ ತಮ್ಮ ಚುನಾವಣಾ ಪ್ರಚಾರ ಸಭೆಗಳಲ್ಲಿ ಹೇಳಿಕೊಳ್ಳುತ್ತಿದ್ದು, ಇಂತಹವರು ಕೊಡಗಿನ ಜನಪ್ರತಿನಿಧಿಯಾಗಿರುವುದು ಇಲ್ಲಿನವರ ದೌರ್ಭಾಗ್ಯ ಎಂದು ಟೀಕಿಸಿದರು.

ದೇಶದಲ್ಲಿ ಶಾಂತಿ ಸಾಮರಸ್ಯ ಉಳಿಯ ಬೇಕಾದರೆ ಬಿಜೆಪಿಗೆ ಅಧಿಕಾರ ನೀಡಬೇಕು ಎಂದು ಸಂಸದರು ಹೇಳಿದ್ದಾರೆ. ಆದರೆ ಹನುಮ ಜಯಂತಿ ಸಂದರ್ಭ ತಮ್ಮ ವಾಹನವನ್ನು ಪೊಲೀಸ್‌ ಬ್ಯಾರಿಕೇಡ್‌ಗೆ ಡಿಕ್ಕಿಪಡಿಸಿ ಕಾನೂನು ಭಂಗ ಮಾಡಿದ ಪ್ರತಾಪ್‌ಸಿಂಹ ಅವರಿಂದ ಕಾನೂನು ಸುವ್ಯವಸ್ಥೆ ಕಾಪಾಡಲು ಸಾಧ್ಯವೇ ಎಂದು ಸುರೇಶ್‌ ಪ್ರಶ್ನಿಸಿದರು. ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಹಿಂದಿನಿಂದಲೂ ಮುಸ್ಲಿಂ, ಕ್ರೆçಸ್ತರು ಮತ್ತು ಬಹುಜನರ ಅಭಿವೃದ್ಧಿಯಲ್ಲಿ ತೊಡಗಿಸಿಕೊಂಡ ಪಕ್ಷಗಳಾಗಿವೆ ಎಂದು ಸುರೇಶ್‌ ಹೇಳಿದರು.

Advertisement

ಜೆಡಿಎಸ್‌ ರಾಜ್ಯ ಉಪಾಧ್ಯಕ್ಷ ಷರೀಫ್ ಮಾತನಾಡಿ, ಕಸ್ತೂರಿರಂಗನ್‌ ವರದಿಯನ್ನು ಜಾರಿ ಮಾಡಲು ಬಿಡುವುದಿಲ್ಲ ಎಂದು ಭರವಸೆ ನೀಡಿದ್ದ ಬಿಜೆಪಿಯವರು ಇದೀಗ ವರದಿ ಜಾರಿಗೆ ಮುಂದಾಗಿದ್ದು, ಕೊಡಗಿನ ತೋಟಗಾರಿಕಾ ಬೆಳೆಗಳ ನಾಶಕ್ಕೆ ಈ ವರದಿ ಕಾರಣವಾಗಲಿದೆ ಎಂದು ಅಭಿಪ್ರಾಯಪಟ್ಟರು. ಕೊಡಗಿಗೆ ರೈಲು ಮಾರ್ಗ ಕಲ್ಪಿಸುವುದಾಗಿ ಕಳೆದ 5 ವರ್ಷಗಳಿಂದ ರೈಲು ಬಿಟ್ಟ ಪ್ರತಾಪ್‌ಸಿಂಹ ಅವರು ಈಗಲೂ ಅದನ್ನೇ ಮಾಡುತ್ತಿದ್ದಾರೆ. ಗ್ರಾಮಗಳಿಗೆ ಪ್ರಧಾನಮಂತ್ರಿ ಗ್ರಾಮ ಸಡಕ್‌ ಯೋಜನೆಯಡಿ ರಸ್ತೆ ನಿರ್ಮಿಸುವುದಾಗಿ ಹೇಳಿದ್ದರೂ, ಇನ್ನೂ ಕಾರ್ಯರೂಪಕ್ಕೆ ಬಂದಿಲ್ಲ.

ಬೆಳೆಹಾನಿಗೆ ಪರಿಹಾರ ಕೊಡಿಸುವ ಭರವಸೆಯನ್ನು ಈಡೇರಿಸಿಲ್ಲ ಎಂದು ಆರೋಪಿಸಿದರು.

ಕಾಂಗ್ರೆಸ್‌ ಸಾಮಾಜಿಕ ಜಾಲತಾಣ ಘಟಕದ ಸಂಚಾಲಕ ಸೂರಜ್‌, ಜಿಲ್ಲಾ ಕಾಂಗ್ರೆಸ್‌ ಮಹಿಳಾ ಘಟಕದ ಅಧ್ಯಕ್ಷೆ ಸುರಯ್ಯ ಆಬ್ರಾರ್‌ ಉಪಸ್ಥಿತರಿದ್ದರು. ಹಳದಿ ರೋಗದಿಂದ ಸಂಕಷ್ಟಕ್ಕೆ ಈಡಾದ ರೈತರ ನೆರವಿಗೆ ಬರುವುದಾಗಿ ಘೋಸಿದ್ದ ಪ್ರತಾಪ್‌ಸಿಂಹ ತಮ್ಮ ಅಧಿಕಾರವಧಿಯಲ್ಲಿ ಒಮ್ಮೆಯೂ ಅಡಿಕೆ ಬೆಳೆಯುವ ಪ್ರದೇಶಕ್ಕೆ ಭೇಟಿ ನೀಡಿ ಬೆಳೆಗಾರರ ಸಂಕಷ್ಟವನ್ನು ಆಲಿಸಲಿಲ್ಲ. ಇದೀಗ ಚುನಾವಣೆ ಸಂದರ್ಭದಲ್ಲಿ ಮತ್ತೆ ಬಂದು ನಾಟಕವಾಡುತ್ತಿದ್ದಾರೆ ಎಂದು ದೂರಿದರು.

ಸರ್ಜಿಕಲ್‌ ಸ್ಟ್ರೈಕ್
ಜೆಡಿಎಸ್‌ ಜಿಲ್ಲಾ ವಕ್ತಾರ ಕುಸಮ್‌ ಕಾರ್ಯಪ್ಪ ಮಾತನಾಡಿ, ಭಾರತೀಯ ಯೋಧರು ಸರ್ಜಿಕಲ್‌ ಸ್ಟ್ರೈಕ್ ಮಾಡಿ ಪಾಕಿಸ್ಥಾನದ ಉಗ್ರರನ್ನು ಸದೆ ಬಡಿದಿದ್ದು, ಇದೀಗ ಬಿಜೆಪಿ ಅದನ್ನು ಚುನಾವಣೆಗಾಗಿ ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ಆರೋಪಿಸಿದರಲ್ಲದೆ, ಈ ಕ್ಷೇತ್ರದಲ್ಲಿ ಜೆಡಿಎಸ್‌-ಕಾಂಗ್ರೆಸ್‌ ಮೈತ್ರಿ ಅಭ್ಯರ್ಥಿ ಗೆಲುವು ನಿಶ್ಚಿತ ಎಂದು ಶ್ವಾಸ ವ್ಯಕ್ತಪಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next