Advertisement

”ಆನ್‌ಲೈನ್‌ ದಗಾ ತಡೆ”ಗೆ ದಾರಿ ಯಾವುದಯ್ನಾ?

09:35 AM Aug 04, 2020 | mahesh |

ಇತ್ತೀಚೆಗೆ ವಿಶ್ವವಿಖ್ಯಾತ ನಾಯಕರು, ಉದ್ಯಮಿಗಳ ಟ್ವೀಟರ್‌ ಖಾತೆಗಳು ಹ್ಯಾಕ್‌ ಆಗಿದ್ದವು. ಸೈಬರ್‌ ಹಗರಣದ ಪೈಕಿ ಇದೇ ದೊಡ್ಡದು ಎಂದು ಹೇಳಲಾಗಿದೆ. ಇದರ ಮೂಲಕ ಕೋಟ್ಯಂತರ ರೂ. ಹಣ ದೋಚಲು ಹ್ಯಾಕರ್‌ಗಳು ಸಜ್ಜಾಗಿದ್ದರು. ಇದ ರಿಂದ ಎಚ್ಚೆತ್ತಿರುವ ಆರ್‌ಬಿಐ, ಭಾರತೀಯರಿಗೆ ಹುಷಾರಾಗಿರುವಂತೆ ಸೂಚಿಸಿದೆ. ಮಾತ್ರವಲ್ಲ ಅದಕ್ಕಾಗಿ ಒಂದಷ್ಟು ರಕ್ಷಣಾ ವಿಧಾನಗಳನ್ನು ಪ್ರಕಟಿಸಿದೆ. ಇಲ್ಲಿದೆ ಆ ಮಾಹಿತಿ.

Advertisement

ಖಾಸಗಿ ಮಾಹಿತಿಗೆ ಕನ್ನ, ಹುಷಾರಾಗಿರಿ…
ಈಗ ಅಂತರ್ಜಾಲದಲ್ಲಿ ವ್ಯವಹಾರಗಳು ಜಾಸ್ತಿ. ಒಂದಲ್ಲ ಒಂದು ರೀತಿಯಲ್ಲಿ ನಮ್ಮ ಆರ್ಥಿಕ/ಖಾಸಗಿ ಮಾಹಿತಿಗಳು ಅಂತರ್ಜಾಲದಲ್ಲಿ ಇದ್ದೇ ಇರುತ್ತವೆ. ಅವನ್ನು ಹ್ಯಾಕರ್‌ಗಳು ಕದಿಯುವುದಕ್ಕೆ ಹೊಂಚು ಹಾಕುತ್ತಿರುತ್ತಾರೆ. ಇದರಿಂದ ಪಾರಾಗಲು ನಾವು ಗರಿಷ್ಠ ಎಚ್ಚರಿಕೆ ವಹಿಸಬೇಕು. ಇಲ್ಲವಾದರೆ ನಮ್ಮ ಖಾತೆಯಲ್ಲಿರುವ ಹಣ ಎಗರಿಹೋಗುತ್ತದೆ. ಅಷ್ಟು ಮಾತ್ರವಲ್ಲ ನಮ್ಮ ಜಿಮೇಲ್‌, ಫೇಸ್‌ಬುಕ್‌, ಯೂಟ್ಯೂಬ್‌ ಖಾತೆಗಳು ಅಶ್ಲೀಲ ಸಂದೇಶ ಕಳುಹಿಸಲು, ಭಯೋತ್ಪಾದಕ ಕೃತ್ಯವೆಸಗಲು ನಮಗೇ ಗೊತ್ತಿಲ್ಲದೇ ನೆರವಾಗಿರುತ್ತವೆ!

ಏನಿದು ಟ್ವೀಟರ್‌ ಹ್ಯಾಕ್‌ ಪ್ರಕರಣ?
ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್‌ ಒಬಾಮ, ಮಾಜಿ ಉಪಾಧ್ಯಕ್ಷ ಜೋ ಬಿಡೆನ್‌, ಮೈಕ್ರೋಸಾಫ್ಟ್ ಸಂಸ್ಥಾಪಕ ಬಿಲ್‌ ಗೇಟ್ಸ್‌, ವಿಶ್ವದ ಶ್ರೀಮಂತ ವ್ಯಕ್ತಿ ಅಮೆಜಾನ್‌ ಮುಖ್ಯಸ್ಥ ಜೆಫ್ ಬಿಜೋಸ್‌, ಹಾಥೋರ್ನ್ ಸಿಇಒ ಎಲಾನ್‌ ಮಸ್ಕ್ ಇಂತಹ ದಿಗ್ಗಜರ ಟ್ವೀಟ್‌ ಖಾತೆಗಳೆಲ್ಲ ಹ್ಯಾಕ್‌ ಆಗಿದ್ದವು. ಅನುಮಾನಗಳ ಪ್ರಕಾರ ಟ್ವೀಟರ್‌ ಸಂಸ್ಥೆಯ ಒಳಗಿನ ಉದ್ಯೋಗಿಯೊಬ್ಬರೇ ಹ್ಯಾಕ್‌ಗೆ ನೆರವಾಗಿದ್ದಾರೆ. ಕೇವಲ ಟ್ವೀಟರ್‌ ತಂಡಕ್ಕೆ ಮಾತ್ರ ಲಭ್ಯವಾಗುವ ಕೆಲವು ಸಾಧನಗಳು ಹ್ಯಾಕರ್‌ಗಳಿಗೆ ಸಿಕ್ಕಿದೆ. ಹೀಗೆ ಗಣ್ಯಾತಿಗಣ್ಯರ ಖಾತೆಗಳ ಮೂಲಕ ಜನರಿಗೆ ಕೊಂಡಿಯೊಂದನ್ನು ಕಳುಹಿಸಲಾಗಿದೆ. ಅದರಲ್ಲಿ ಬಿಟ್‌ಕಾಯಿನ್‌ ಮೇಲೆ ಹೂಡಿಕೆ ಮಾಡಿ ಎಂಬ ಸಂದೇಶವಿತ್ತು!

ಬಿಟ್‌ಕಾಯಿನ್‌ ಅಂದರೆ?: ಇದು ಡಿಜಿಟಲ್‌ ಹಣ. ಅಂದರೆ ಅಂತರ್ಜಾಲದಲ್ಲಿ ನೋಡಬಹುದಾದ ಹಣ. ಇದಕ್ಕೆ ಯಾವುದೇ ದೇಶದ ಮಾನ್ಯತೆಯಿಲ್ಲ, ಇದರ ಹಿಂದೆ ಯಾರಿದ್ದಾರೆ ಎನ್ನುವುದೂ ಗೊತ್ತಿಲ್ಲ. ಇದಕ್ಕೆ ವಿಪರೀತ ಮೌಲ್ಯವಿದೆ. ಇದರ ನಿರ್ವಹಣೆಗಾಗಿ ಕಂಪ್ಯೂಟರೀಕೃತ ವ್ಯವಸ್ಥೆಯೊಂದಿದೆ.

ಆರ್‌ಬಿಐ ಸೂಚಿಸಿದ ಕ್ರಮಗಳೇನು?
ಮೊಬೈಲ್‌, ಲ್ಯಾಪ್‌ಟಾಪ್‌ ಸ್ವಚ್ಛವಾಗಿರಲಿ
ನೀವು ಮೊಬೈಲ್‌, ಲ್ಯಾಪ್‌ಟಾಪ್‌, ಐಪ್ಯಾಡ್‌ನ‌ಂತಹ ಹೊಸ ಉಪಕರಣಗಳನ್ನು ಕೊಂಡರೆ, ನಿಮ್ಮ ಮಾಹಿತಿಗಳನ್ನು ಖಾಸಗಿಯಾಗಿ ರಕ್ಷಿಸಿಕೊಳ್ಳಿ. ಅಂದರೆ ಅಂತರ್ಜಾಲಿಗರ ನೇರಸಂಪರ್ಕಕ್ಕೆ ಸಿಗುವ ಜಿಮೇಲ್‌, ಫೇಸ್‌ಬುಕ್‌ ಇಂತಹ ಖಾತೆಗಳಲ್ಲಿ ಇಟ್ಟುಕೊಳ್ಳುವುದು ಅಪಾಯಕಾರಿ. ಬದಲಿಗೆ ಅದನ್ನು ನಿಮ್ಮ ಲ್ಯಾಪ್‌ಟಾಪ್‌ಗಳ ಖಾಸಗಿ ಡ್ರೈವ್‌ಗಳಲ್ಲಿ ಇಟ್ಟುಕೊಳ್ಳಬಹುದು. ಅದರ ಜೊತೆಗೆ ಹಳೆಯ ಮೊಬೈಲ್‌, ಲ್ಯಾಪ್‌ಟಾಪ್‌ಗ್ಳಲ್ಲಿ ಶೇಖರಿಸಿಟ್ಟ ಖಾಸಗಿ ಮಾಹಿತಿಯನ್ನು ಪೂರ್ಣ ಅಳಿಸಿ ಹಾಕಬೇಕು.

Advertisement

ಸಾರ್ವಜನಿಕ ಯುಎಸ್‌ಬಿ ಕೇಬಲ್‌ ಬಳಸಬೇಡಿ
ಬೇರೆಯವರಿಂದ ಚಾರ್ಜ್‌ ಮಾಡುವ ಕೇಬಲ್‌ಗಳನ್ನು ಪಡೆಯುವುದು ಅಥವಾ ಸಾರ್ವಜನಿಕ ಜಾಗಗಳಲ್ಲಿನ ಯುಎಸ್‌ಬಿ ಕೇಬಲ್‌ಗ‌ಳ ಮುಖಾಂತರ ಮೊಬೈಲ್‌ ಚಾರ್ಜ್‌ ಮಾಡುವುದನ್ನು ಬಹುತೇಕ ನಿಯಂತ್ರಿಸಬೇಕು. ಹ್ಯಾಕರ್‌ಗಳು ಇಂತಹ ಕೇಬಲ್‌ ಮೂಲಕ ನಮ್ಮ ಡೇಟಾ ಕದಿಯಲು ಅನುಕೂಲ ವಾಗುವಂತೆ ಕುಟಿಲ ತಂತ್ರಾಂಶವನ್ನು ಸಿದ್ಧಪಡಿಸಿಟ್ಟಿರುತ್ತಾರೆ.

ಸಾರ್ವಜನಿಕ ವೈಫೈಬಳಸುವಾಗ ಎಚ್ಚರ
ಸೈಬರ್‌ ಲೋಕದ ತಜ್ಞರು ಅಂತರ್ಜಾಲ ಮತ್ತು ಕಂಪ್ಯೂಟರ್‌ ಜಗತ್ತಿನ ಸಂಪೂರ್ಣ ಒಳಸುಳಿ ಗಳನ್ನು ತಿಳಿದಿದ್ದಾರೆ. ಅವರಿಗೆ ಗೊತ್ತಿಲ್ಲದ ತಂತ್ರಗಳಿರುವುದಿಲ್ಲ. ಆದ್ದರಿಂದ ನಾವು ಮಾಡಲೇಬೇಕಾಗಿರುವುದೇನೆಂದರೆ, ಸಾರ್ವಜನಿಕ ವೈಫೈ ವ್ಯವಸ್ಥೆ ಬಳಕೆಯಿಂದ ದೂರವಿರುವುದು. ವೈಫೈ ಉಚಿತವೆಂದೋ, ಇನ್ನಾವುದೋ ಕಾರಣದಿಂದ ನಾವು ಅದರ ಗುಪ್ತಾಕ್ಷರ ಹಾಕಿ ಬಳಸಲು ಶುರು ಮಾಡುತ್ತೇವೆ. ಸೈಬರ್‌ ಕಳ್ಳರು ಕೂಡಲೇ ನಿಮ್ಮ ಲ್ಯಾಪ್‌ ಟಾಪ್‌, ಮೊಬೈಲ್‌ನೊಳಗೆ ವೈರಸ್‌ ಮೂಲಕ ನುಸುಳಿ, ನಿಮ್ಮ ಸಂಪೂರ್ಣ ಮಾಹಿತಿ ಕದಿಯಲು ಮುಕ್ತ ಅವಕಾಶವಿದೆ. ಒಂದು ವೇಳೆ ನೀವು ಸಾರ್ವಜನಿಕ ವೈಫೈ ಬಳಸುತ್ತೀರಾದರೆ, ಒಂದು ವಿಪಿಎನ್‌ ಸೃಷ್ಟಿ ಮಾಡಿಕೊಳ್ಳಿ. ಆಗ ನೀವು ಸಾರ್ವಜನಿಕ ವೈಫೈ ಬಳಸಿದರೂ ನಿಮ್ಮ ಮಾಹಿತಿ ಸೋರಿಕೆಯಾಗುವುದಿಲ್ಲ.

ದೂರವಾಣಿ ಖದೀಮರಿಗೆ ಬಲಿಯಾಗಬೇಡಿ
ಇವರಿಗೆ ದೂರವಾಣಿ ಖದೀಮರೆನ್ನದೇ ವಿಧಿಯಿಲ್ಲ. ಇಂತಹವರು ಯಾವುದೋ ಅಪರಿಚಿತ ಸಂಖ್ಯೆಯಿಂದ ಕರೆ ಮಾಡಿ, ಗೂಗಲ್‌, ಮೈಕ್ರೋಸಾಫ್ಟ್ನಂತಹ ಪ್ರತಿಷ್ಠಿತ ಕಂಪನಿಗಳ ಹೆಸರು ಹೇಳುತ್ತಾರೆ. ನಿಮ್ಮ ಕಂಪ್ಯೂಟರ್‌ನಲ್ಲಿ ವೈರಸ್‌ ಇದೆ. ನಾವು ಹೇಳಿದಂತೆ ಮಾಡಿ ಸರಿಯಾಗುತ್ತದೆ ಎನ್ನುತ್ತಾರೆ! ಇಲ್ಲವೇ ನಿಮ್ಮ ಎಟಿಎಂ ಗುಪ್ತಾಕ್ಷರ, ಡೆಬಿಟ್‌, ಕ್ರೆಡಿಟ್‌ ಸಂಖ್ಯೆ, ಒಟಿಪಿ, ನೆಟ್‌ ಬ್ಯಾಂಕಿಂಗ್‌ ಗುಪ್ತಾಕ್ಷರ ಕೇಳಬಹುದು. ಅದನ್ನೆಲ್ಲ ದೂರವಾಣಿ ಮೂಲಕ ಕೊಡಲೇಬೇಡಿ. ಯಾವುದೇ ಬ್ಯಾಂಕ್‌ ನಿಮ್ಮ ಬಳಿ ಅಂತಹ ಮಾಹಿತಿ ಕೇಳುವುದಿಲ್ಲ. ಅನುಮಾನ ಬಂದರೆ ಬ್ಯಾಂಕನ್ನು ನೇರವಾಗಿ ಸಂಪರ್ಕಿಸಿ.

ವಿಪಿಎನ್‌ ಅಂದರೇನು?
ವರ್ಚ್ಯುವಲ್‌ ಪ್ರೈವೇಟ್‌ ನೆಟ್‌ವರ್ಕ್‌ ಎನ್ನುವುದು ಒಂದು ಸುರಕ್ಷಿತ ವ್ಯವಸ್ಥೆ. ಇದನ್ನು ಪರ್ಯಾಯ ಅಂತರ್ಜಾಲ ವ್ಯವಸ್ಥೆ ಎಂದೂ ಸರಳೀಕರಿಸಬಹುದು. ಇದು ಹತ್ತಾರು ಕಂಪ್ಯೂಟರ್‌ಗಳನ್ನು ಒಂದೇ ಅಂತರ್ಜಾಲ ವ್ಯವಸ್ಥೆಯಿಂದ ಬೆಸೆಯುತ್ತದೆ. ಇದನ್ನು ನಾವು ನಮ್ಮ ಖಾಸಗಿ ಕಂಪ್ಯೂಟರ್‌ಗಳಲ್ಲೂ ಮಾಡಿಕೊಳ್ಳಬಹುದು. ನಮಗೆ ಒಂದು ಸಂಸ್ಥೆ ಅಂತರ್ಜಾಲ ಪೂರೈಸುತ್ತಿದೆ ಎಂದುಕೊಳ್ಳೋಣ. ವಿಪಿಎನ್‌ ಇದ್ದಾಗ ಅದು ನೀಡುವ ಡೇಟಾ ನೇರವಾಗಿ ನಮ್ಮ ಕಂಪ್ಯೂಟರ್‌ ಮೂಲಕ ಬರದೇ, ವಿಪಿಎನ್‌ ಮೂಲಕ ಬರುತ್ತದೆ. ಆಗ ಕಂಪ್ಯೂಟರ್‌ನಲ್ಲಿರುವ ಮಾಹಿತಿ ಸುರಕ್ಷಿತವಾಗಿರುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next