Advertisement

Hubli; ಸರಕಾರ ಮಾಡಿರುವ ಸ್ಥಿರಾಸ್ತಿಗಳ ಮಾರ್ಗಸೂಚಿ ದರ ಹೆಚ್ಚಳ ಸರಿಯಾಗಿದೆ; ಕೃಷ್ಣ ಬೈರೇಗೌಡ

02:02 PM Sep 14, 2023 | Team Udayavani |

ಹುಬ್ಬಳ್ಳಿ: ಸರಕಾರ ಮಾಡಿರುವ ಸ್ಥಿರಾಸ್ತಿಗಳ ಮಾರ್ಗಸೂಚಿ ದರ ಹೆಚ್ಚಳ ಸರಿಯಾಗಿದ್ದು, ಮಾರುಕಟ್ಟೆ ಮೌಲ್ಯಕ್ಕೆ ಹೋಲಿಸಿದರೆ ಶೇ.1000 ದಿಂದ 2000 ವ್ಯತ್ಯಾಸವಿದೆ‌. ಸರಕಾರ ಕೈಗೊಂಡಿರುವ ಕ್ರಮದಿಂದ ಬ್ಲಾಕ್ ಮನಿ ತಪ್ಪಲಿದೆ. ಮಾರಾಟ ಮಾಡುವವರಿಗೆ ಅನ್ಯಾಯವಾಗುವುದಿಲ್ಲ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದರು.

Advertisement

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ ಐದು ವರ್ಷಗಳಿಂದ ಇದು ಹೆಚ್ಚಳವಾಗಿರಲಿಲ್ಲ. ಹೆಚ್ಚಳದಿಂದ ಸರಕಾರಕ್ಕೆ ಆದಾಯ ಎನ್ನುವುದಕ್ಕಿಂತ ಮಿಗಿಲಾಗಿ ಆಗುತ್ತಿದ್ದ ಶೋಷಣೆ ತಡೆಯುವುದಾಗಿದೆ. ಮಾರುಕಟ್ಟೆ ದರ ಮೌಲ್ಯಕ್ಕೆ ಹೋಲಿಸಿದರೆ ಸರಕಾರದ ಮಾರ್ಗಸೂಚಿದರ ಸಾಕಷ್ಟು ಕಡಿಮೆಯಿತ್ತು. ಕಡಿಮೆಯಿದ್ದರೆ ಕೊಳ್ಳುವವರಿಗೆ ಅನುಕೂಲವಾಗಲಿದೆ ಎಂಬುದು ಸರಿಯಾದರೂ ಮಾರುಕಟ್ಟೆ ದರಕ್ಕೆ ಮಾರಾಟ ಮಾಡಿ ಉಳಿದ ಹಣವನ್ನು ನಗದು ರೀತಿಯಲ್ಲಿ ಪಡೆಯುತ್ತಿದ್ದಾರೆ. ಇದು ಎಲ್ಲರಿಗೂ ಗೊತ್ತಿರುವ ವಿಚಾರ ಎಂದರು.

ರೈತರ ಭೂಮಿ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಸ್ವಾಧಿನಪಡಿಸಿಕೊಂಡಾಗ ಅವರಿಗೆ ಪರಿಹಾರ ನಿಗದಿ ಮಾಡುವುದು ಸರಕಾರದ ಮಾರ್ಗಸೂಚಿ ದರದ ಪ್ರಕಾರ. ಆಗ ರೈತರಿಗೆ ಅನ್ಯಾಯವಾಗುತ್ತದೆ‌. ಇನ್ನೂ ಕೆಲವರು ಇದೇ ಮಾರ್ಗ ಸೂಚಿದರದಂತೆ ಆಸ್ತಿ ಖರೀದಿಸಿ ಮಾರುಕಟ್ಟೆ ದರಕ್ಕೆ ಮಾರಾಟ ಮಾಡುತ್ತಾರೆ. ಇದರಿಂದ ಮಾರಾಟ ಮಾಡುವವರಿಗೆ ಅನ್ಯಾವಾಗುತ್ತದೆ. ಈಗಿರುವ ಮಾರುಕಟ್ಟೆ ದರಕ್ಕೆ ಮಾರ್ಗಸೂಚಿ ದರ ಸಾಧ್ಯವಿಲ್ಲ. ಕನಿಷ್ಠ ಪಕ್ಷ ಒಂದಿಷ್ಟು ವ್ಯತ್ಯಾಸ ಕಡಿಮೆ ಮಾಡಬಹುದಾಗಿದೆ‌. ಈ ಎಲ್ಲಾ ಅಂಶಗಳನ್ನು ನೋಡಿದಾಗ ಸರಕಾರ ಕೈಗೊಂಡಿರುವ ನಿರ್ಧಾರ ಸರಿಯಿದೆ. ಒಂದು ವೇಳೆ ಮಾರುಕಟ್ಟೆ ದರಕ್ಕಿಂತ ಹೆಚ್ಚಾಗಿದ್ದರೆ ಕಡಿಮೆ ಮಾಡಲು ಸೂಚಿಸಿದ್ದೇನೆ ಎಂದರು.

ಕೇಂದ್ರ ಸರ್ಕಾರದ ಮಾನದಂಡಗಳ ಪ್ರಕಾರ ರಾಜ್ಯದಲ್ಲಿ ಬರಗಾಲ ಘೋಷಣೆ ಅಸಾಧ್ಯವಾಗಿದೆ. ಆದರಿಂದ ಮಾನದಂಡಗಳ ಬದಲಾಯಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಳೆದ ಒಂದು ತಿಂಗಳ ಹಿಂದೆ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ. ಅಷ್ಟಾದರೂ ರಾಜ್ಯದಲ್ಲಿ 195 ತಾಲೂಕುಗಳ ಸಮೀಕ್ಷೆ ಮಾಡಿ ಬರ ಘೋಷಿಸಬಹುದು. ಅದರಲ್ಲಿ 162 ತೀವ್ರ ಬರಗಾಲ ತಾಲೂಕು, 34 ಸಾಧಾರಣ ಬರ ಪೀಡಿತ ತಾಲೂಕುಗಳಾಗಿದ್ದು, ಕೇಂದ್ರ ಸರ್ಕಾರದ ಮಾನದಂಡ ಪ್ರಕಾರ ಘೋಷಣೆ ಅಸಾಧ್ಯವಾದರೂ ಸಹ ವರದಿ ನೀಡಲಾಗಿದೆ. ಕೇಂದ್ರ ಸರ್ಕಾರ ಇವುಗಳನ್ನು ಮಾಡಬೇಕು ಎಂಬುದು ನಮ್ಮ ಆಗ್ರಹವಾಗಿದೆ. ಅಷ್ಟೇ ಅಲ್ಲದೆ ತಿಂಗಳ ಕೊನೆಯಲ್ಲಿ ಮತ್ತೆ ಸರ್ವೇ ಪ್ರಕ್ರಿಯೆ ಮತ್ತೆ ಆರಂಭಿಸಿ ಉಳಿದ ತಾಲೂಕುಗಳನ್ನು ಸೇರಿಸಲಾಗುವುದು ಎಂದು ಕಂದಾಯ ಸಚಿವ ಕೃಷ್ಣಬೈರೇಗೌಡ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next