ಬೆಂಗಳೂರು: ಸುದೀರ್ಘ ವಿರಾಮದ ನಂತರ “ನಮ್ಮ ಮೆಟ್ರೋ’ ಎರಡನೇ ಹಂತದ ನಿರ್ಮಾಣ ಕಾಮಗಾರಿಗೆ ಮರುಚಾಲನೆ ದೊರೆತಿದ್ದು, ಮೊದಲ ದಿನ ಶೇ. 20ರಿಂದ
30ರಷ್ಟು ಕಾರ್ಮಿಕರು ಕೆಲಸಕ್ಕೆ ಹಾಜರಾದರು. ಮೆಟ್ರೋ ಯೋಜನೆಯಲ್ಲಿ ಸುಮಾರು 8 ಸಾವಿರ ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ. ಈ ಪೈಕಿ ಗುರುವಾರ ಅಂದಾಜು ಸಾವಿರ ಕಾರ್ಮಿಕರು ಸುರಂಗ ಮತ್ತು ಎತ್ತರಿಸಿದ ಮಾರ್ಗಗಳ ನಿರ್ಮಾಣ ಕಾರ್ಯದಲ್ಲಿ ತೊಡಗಿಕೊಂಡರು.
ಸರ್ಕಾರದ ಮಾರ್ಗಸೂಚಿಯಂತೆ ಸಾಮಾಜಿಕ ಅಂತರ ಕಾಯ್ದುಕೊಳ್ಳಲಾಗಿತ್ತು. ಮೆಟ್ರೋ ಕಾರ್ಮಿಕರಾರೂ ನಗರ ತೊರೆದಿಲ್ಲ. ಹಾಗಾಗಿ ಕರೆತರುವ ಪ್ರಶ್ನೆ ಇಲ್ಲ. ಟನಲ್ ಬೋರಿಂಗ್ ಮಷಿನ್ (ಟಿಬಿಎಂ)ಗಳ ಜೋಡಣೆ, ಕಾಂಕ್ರೀಟ್, ವಯಾಡಕ್ಟ್ ಅಳವಡಿಕೆ, ಪೈಲಿಂಗ್ ಸೇರಿದಂತೆ ವಿವಿಧ ಪ್ರಕಾರದ ಕೆಲಸಗಳಿಗೆ ಮರುಚಾಲನೆ ದೊರೆಯಿತು.
ವಿಸ್ತರಿಸಿದ ಮಾರ್ಗಗಳಾದ ತುಮಕೂರು ರಸ್ತೆ, ಕೆಂಗೇರಿ ಮತ್ತು ಕನಕಪುರ ರಸ್ತೆ ಸೇರಿದಂತೆ ಶಿವಾಜಿನಗರ, ಪಾಟರಿ ಟೌನ್, ಕಂಟೋನ್‌ಮೆಂಟ್‌ನಲ್ಲಿ ಕಾಮಗಾರಿ ಆರಂಭಗೊಂಡಿದೆ. ಕಾಮಗಾರಿ ನಡೆಯುವ ಪ್ರದೇಶದಿಂದ ಹತ್ತಿರದಲ್ಲಿದ್ದ ಕಾರ್ಮಿಕರು ಕೆಲಸಕ್ಕೆ ಬರುತ್ತಿದ್ದಾರೆ ಎಂದು ಬಿಎಂಆರ್‌ಸಿಎಲ್‌ನ ಎಂಜಿನಿಯರ್ ಒಬ್ಬರು ಮಾಹಿತಿ ನೀಡಿದರು.
ಸರ್ಕಾರದ ಮಾರ್ಗಸೂಚಿ ಪ್ರಕಾರ ಹೊರವಲಯದಿಂದ ಕಾರ್ಮಿಕರನ್ನು ಕರೆ ತರುವಂತಿಲ್ಲ. ಆದರೆ, ಕಾಮಗಾರಿ ನಡೆಯುವ ಜಾಗದಿಂದ ಕನಿಷ್ಠ 2ರಿಂದ ಗರಿಷ್ಠ 10 ಕಿ.ಮೀ. ದೂರದಲ್ಲಿ ಕಾರ್ಮಿಕರ ಕ್ಯಾಂಪ್‌ಗ್ಳು ಇರಬೇಕು ಎಂದು ಮೆಟ್ರೋ ನಿಯಮ ಹೇಳುತ್ತದೆ. ಈ ಬಗ್ಗೆ ಕೇಂದ್ರ ಸರ್ಕಾರಕ್ಕೂ ಸ್ಪಷ್ಟೀಕರಣ ನೀಡಿ, ಅನುಮತಿ ಪಡೆಯಲಾಗಿದೆ. ಅದರಂತೆ ಎಲ್ಲ ಎಂಟು ಸಾವಿರ ಕಾರ್ಮಿಕರು ನಗರದ ಬನ್ನೇರುಘಟ್ಟ, ಕೊತ್ತನೂರು, ನೈಸ್ ರಸ್ತೆ, ಬೊಮ್ಮಸಂದ್ರ ಕಡೆಗಳಲ್ಲೆಲ್ಲಾ ಹರಿದುಹಂಚಿ ಹೋಗಿದ್ದಾರೆ. ಈ ಪೈಕಿ 300-400 ಜನ ಇರುವ ಕ್ಯಾಂಪ್‌ಗ್ಳು 20ಕ್ಕೂ ಅಧಿಕ ಇವೆ.
ಕಾರ್ಮಿಕರನ್ನು ಕರೆತರಲು ಗುತ್ತಿಗೆದಾರರು ಬಿಎಂಟಿಸಿ ಬಸ್‌ಗಳ ನೆರವು ಪಡೆಯುತ್ತಿದ್ದಾರೆ. ಒಂದು ಬಸ್‌ನಲ್ಲಿ ಗರಿಷ್ಠ 16 ಜನ ಮಾತ್ರ ಸಂಚರಿಸಲು ಅವಕಾಶ ಇದೆ. ಹಾಗಾಗಿ,
ಹೆಚ್ಚು ಬಸ್‌ಗಳು ಬೇಕಾಗುತ್ತವೆ. ಒಪ್ಪಂದದ ಆಧಾರದಲ್ಲಿ ಪಡೆಯುವ ಬಸ್ ಸೇವೆಗಳ ದರ ನಿಗದಿ ಬಗ್ಗೆ ಗುತ್ತಿಗೆದಾರರು ಮಾತುಕತೆ ನಡೆಸಿದ್ದಾರೆ ಎಂದು ಎಂಜಿನಿಯರ್ ತಿಳಿಸಿದರು.