Advertisement

ಕಡ್ಡಾಯ ವರ್ಗಕ್ಕೆ ಮಾರ್ಗಸೂಚಿ​​​​​​​

06:00 AM Jan 04, 2018 | |

ಬೆಂಗಳೂರು: ಶಿಕ್ಷಕರ ಹಾಗೂ ಶಿಕ್ಷಕರ ಸಂಘದ ತೀವ್ರ ವಿರೋಧದ ನಡುವೆಯೂ “ಎ’ ವಲಯದಲ್ಲಿ ಸತತ ಹತ್ತು ವರ್ಷದಿಂದ ಸೇವೆ ಸಲ್ಲಿಸುತ್ತಿರುವ ಶಿಕ್ಷಕರನ್ನು ಕಡ್ಡಾಯವಾಗಿ ವರ್ಗಾವಣೆ ಮಾಡುವ ಅಂತಿಮ ಮಾರ್ಗಸೂಚಿಯನ್ನು ರಾಜ್ಯ ಸರ್ಕಾರ ಹೊರಡಿಸಿದೆ.

Advertisement

ಸಾರ್ವಜನಿಕ ಶಿಕ್ಷಣ ಇಲಾಖೆಯ ಈ ನಿಯಮವು ನಗರ ಪ್ರದೇಶದ ಶಿಕ್ಷಕ ವೃಂದಕ್ಕೆ ನುಂಗಲಾರದ ತುತ್ತಾಗಿದೆ. ಸರ್ಕಾರಿ ಶಾಲಾ ಶಿಕ್ಷಕರಾಗಿ ಸತತ ಹತ್ತು ವರ್ಷ ಮಹಾನಗರ, ನಗರ ಅಥವಾ ಜಿಲ್ಲಾ ಕೇಂದ್ರಗಳಲ್ಲಿ ಕೆಲಸ ಮಾಡಿದವರು ಇನ್ಮುಂದೆ ಗ್ರಾಮೀಣ ಪ್ರದೇಶದ ಶಾಲೆಗಳಿಗೆ ತೆರಳುವುದನ್ನು ಕಡ್ಡಾಯಗೊಳಿಸಿದೆ.

ಕರ್ನಾಟಕ ರಾಜ್ಯ ಸಿವಿಲ್‌ ಸೇವೆಗಳ(ಶಿಕ್ಷಕರ ವರ್ಗಾವಣೆ ನಿಯಂತ್ರಣ) ಅಧಿನಿಯಮ-2017ರ ಪ್ರಕಾರ ಕಡ್ಡಾಯ ವರ್ಗಾವಣೆ ಪ್ರಮಾಣ ಶೇ.5ರಷ್ಟಿರುತ್ತದೆ. ನಗರ ಪ್ರದೇಶದಿಂದ ಗ್ರಾಮೀಣ ಪ್ರದೇಶಕ್ಕೆ ಕಡ್ಡಾಯ ವರ್ಗಾವಣೆ ಹೊಂದಿರುವ ಶಿಕ್ಷಕರ ನಗರ ಪರಿಹಾರ ಭತ್ಯೆ ಹಾಗೂ ಮನೆ ಬಾಡಿಗೆ ಭತ್ಯೆ ಕಡಿತಗೊಳಿಸಲಾಗುತ್ತದೆ. ಹಾಗೆಯೇ ಗ್ರಾಮೀಣ ಪ್ರದೇಶದಿಂದ ನಗರ ಪ್ರದೇಶಕ್ಕೆ ಬರುವ ಶಿಕ್ಷಕರಿಗೆ ಮನೆ ಬಾಡಿಗೆ ಭತ್ಯೆ ಜತೆಗೆ ನಗರ ಪರಿಹಾರ ಭತ್ಯೆ ನೀಡಲಾಗುತ್ತದೆ. ಹೀಗಾಗಿ ವರ್ಗಾವಣೆ ಹೊಂದುವ ಶಿಕ್ಷಕರ ವೇತನದಲ್ಲಿ ಸ್ವಲ್ಪ ವ್ಯತ್ಯಾಸವಾಗಲಿದೆ.

ಯಾವುದೇ ತಾಲೂಕಿನಲ್ಲಿ ಒಟ್ಟು ಮಂಜೂರಾದ ಆಯಾ ವೃಂದದ ಹುದ್ದೆಗಳ ಶೇ.20ಕ್ಕಿಂತಲೂ ಹೆಚ್ಚಿನ ಹುದ್ದೆ ಖಾಲಿ ಇದ್ದರೇ, ಅಂತಹ ತಾಲೂಕು ಘಟಕದಿಂದ ಅಥವಾ ತಾಲೂಕು ಘಟಕಗಳಿಗೆ ವರ್ಗಾವಣೆ ಇರುವುದಿಲ್ಲ. “ಎ’ ವಲಯದ ಯಾವ ತಾಲೂಕಿನಲ್ಲೂ ಶೇ.20ರಷ್ಟು ಹುದ್ದೆ ಖಾಲಿ ಇರುವ ಸಾಧ್ಯತೆ ಇಲ್ಲ. ಶಿಕ್ಷಕರ ಮಾಹಿತಿಯನ್ನು ಆನ್‌ಲೈನ್‌ ಮೂಲಕ ಪಡೆದುಕೊಳ್ಳಲಾಗುತ್ತಿದ್ದು, ಕ್ರೂಢೀಕರಣ ಪ್ರಕ್ರಿಯೆ ನಡೆಯುತ್ತಿದೆ. ವಾರಾಂತ್ಯದಲ್ಲಿ ಈ ಬಗ್ಗೆ ಸ್ಪಷ್ಟ  ಮಾಹಿತಿ ಲಭ್ಯವಾಗಲಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ವರ್ಗಾವಣೆ ನಿಯಮ 21(3)ರ ಪ್ರಕಾರ ಐಚ್ಛಿಕ ವರ್ಗಾವಣೆ ನಡೆಸುವ ಮೊದಲು, ನಿರ್ದಿಷ್ಟ ಹುದ್ದೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಶಿಕ್ಷಕರು ಗರಿಷ್ಠ 5 ವರ್ಷದ ಸೇವಾವಧಿ ಪೂರೈಸಿದ್ದಲ್ಲಿ ಅಥವಾ 3 ವರ್ಷಗಳ ಸೇವಾವಧಿ ಪೂರೈಸಿ ನಿರ್ವಹಣೆ ಚೆನ್ನಾಗಿದ್ದರೆ, ಆದ್ಯತೆ ಮೇರೆಗೆ ಶೇ.20ರ ಪ್ರಮಾಣಕ್ಕಿಂತ ಅಧಿಕ ಸಂಖ್ಯೆಯಲ್ಲಿ ಖಾಲಿ ಹುದ್ದೆ ಲಭ್ಯವಿರುವ ತಾಲೂಕಿಗೆ ಕಡ್ಡಾಯ ವರ್ಗಾವಣೆ ಮಾಡಲಾಗುತ್ತದೆ. ನಿಯಮ 21(4)ರಂತೆ ನಿರ್ದಿಷ್ಟ ಹುದ್ದೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಶಿಕ್ಷಕರು ಈಗಾಗಲೇ ಎ ವಲಯದಲ್ಲಿ ಸತತ 10 ವರ್ಷಗಳ ಗರಿಷ್ಠ ಸೇವಾವಧಿ ಪೂರೈಸಿದ್ದಲ್ಲಿ ಕೋರಿಕೆ ವರ್ಗಾವಣೆಯ ನಂತರ ಅಂತಹ ಶಿಕ್ಷಕರಿಗೆ ಕಡ್ಡಾಯ ವರ್ಗಾವಣೆ ನೀಡಿ “ಸಿ’ ವಲಯಕ್ಕೆ ಕಳುಹಿಸಲಾಗುತ್ತದೆ.

Advertisement

ಕಡ್ಡಾಯ ವರ್ಗಾವಣೆ ಹೇಗೆ?
ಜೇಷ್ಠತಾ ಘಟಕದ ಯಾವುದೇ ವೃಂದದಲ್ಲಿ ಸಲ್ಲಿಸಿದ ನಿರಂತರ ಸೇವೆ 10 ವರ್ಷವಾಗಿದ್ದರೆ ಅಂತಹ ಶಿಕ್ಷಕರನ್ನು ವರ್ಗಾವಣೆ ಮಾಡಲಾಗುತ್ತದೆ. ಉದಾ: ಶಿಕ್ಷಕನೊಬ್ಬ “ಎ’ ವಲಯದ ಶಾಲೆಯಲ್ಲಿ 2004ರ ಏ.1ರಿಂದ 2009ರ ಮಾ.31ರ ವೆರೆಗ ಶಿಕ್ಷಕನಾಗಿ ಸೇವೆ ಸಲ್ಲಿಸಿ, 2009ರ ಏ.1ರಿಂದ 2013ರ ಮಾ.30ರ ವರೆಗೆ ಬಡ್ತಿ ಹೊಂದಿ ಅದೇ ಘಟಕದಲ್ಲಿದ್ದರೂ, ವರ್ಗಾವಣೆ ಮಾಡಲಾಗುತ್ತದೆ. ರಜೆ ಮತ್ತು ಕರ್ತವ್ಯದ ಅವಧಿಯನ್ನೂ ಪರಿಗಣಿಸಲಾಗುತ್ತದೆ.

ವೇತನ ವ್ಯತ್ಯಾಸ:
ಎ ವಲಯದ ಶಿಕ್ಷಕರಿಗೆ ವೇತನದ ಜತೆಗೆ ನಗರ ಪರಿಹಾರ ಭತ್ಯೆ 400 ರೂ. ಹಾಗೂ ಮನೆ ಬಾಡಿ ಭತ್ಯೆ ಮೂಲ ವೇತನದಲ್ಲಿ ಶೇ.30ರಷ್ಟ ನೀಡಲಾಗುತ್ತದೆ. ಸಿ ವಲಯದ ಶಿಕ್ಷಕರಿಗೆ ವೇತನದ ಜತೆಗೆ ಶೇ.10ರಷ್ಟು ಮನೆ ಬಾಡಿ ಭತ್ಯೆ ನೀಡಲಾಗುತ್ತದೆ. ಉದಾ: ಎ ವಲಯದ ಶಿಕ್ಷಕರೊಬ್ಬರು ಮೂಲ ವೇತನ 17,600 ರೂ. ಪಡೆಯುತ್ತಿದ್ದರೆ, ಇದಕ್ಕೆ ಶೇ.30ರಷ್ಟು  (ಸುಮಾರು 5 ಸಾವಿರ) ಹೆಚ್ಚುವರಿಯಾಗಿ ನೀಡುತ್ತಾರೆ. ಸಿ ವಲಯದಲ್ಲಿ ಶಿಕ್ಷಕರ ಮನೆ ಭತ್ಯೆ ಶೇ.10ರಷ್ಟಿರುವುದರಿಂದ ವೇತನದಲ್ಲಿ ವ್ಯತ್ಯಾಸವಾಗಲಿದೆ.

ಸಿಆರ್‌ಪಿಗಳಿಗೆ ಪರೀಕ್ಷೆ :
ಶಿಕ್ಷಕರಾಗಿ ಕನಿಷ್ಠ 10 ವರ್ಷ ಸೇವೆ ಸಲ್ಲಿಸಿದವರು ಶಿಕ್ಷಕ ವೃಂದದ ಸಿಆರ್‌ಪಿ, ಬಿಆರ್‌ಪಿ(ಶಿಕ್ಷಣ ಸಂಯೋಜಕ)ಯಾಗಲು ಅರ್ಹತೆ ಪಡೆದಿರುತ್ತಾರೆ. ಈ ಹಿಂದೆ ಇದಕ್ಕೆ ಯಾವುದೇ ನಿಯಮ ಇರಲಿಲ್ಲ. ಈಗ ಪರೀಕ್ಷೆಯ ಮೂಲಕ ಸಿಆರ್‌ಪಿ, ಬಿಆರ್‌ಪಿ ನೇಮಕ ಮಾಡಲಾಗುತ್ತದೆ. ಪರೀಕ್ಷೆಯಲ್ಲಿ ಕನಿಷ್ಠ ಶೇ.60ರಷ್ಟು ಅಂಕ ಪಡೆದವರು ಮಾತ್ರ ಅರ್ಹರಾಗಿರುತ್ತಾರೆ ಎಂದು ನಿಯಮದಲ್ಲಿ ಸ್ಪಷ್ಟಪಡಿಸಲಾಗಿದೆ.

ಅನೇಕ ವರ್ಷಗಳಿಂದ ಗ್ರಾಮೀಣ ಪ್ರದೇಶದಲ್ಲಿ ಸೇವೆ ಸಲ್ಲಿಸುತ್ತಿರುವ ಶಿಕ್ಷಕರಿಗೆ ನಗರ ಪ್ರದೇಶಕ್ಕೆ ಬರಬೇಕೆಂಬ ಆಸೆ ಇದ್ದೇ ಇರುತ್ತದೆ. ಹೀಗಾಗಿ ಎ ವಲಯದಲ್ಲಿ ಸತತ ಹತ್ತು ವರ್ಷಕ್ಕೂ ಹೆಚ್ಚುಕಾಲ ಇದ್ದವರಿಗೆ ಕಡ್ಡಾಯ ವರ್ಗಾವಣೆ ನೀಡಲಾಗುತ್ತದೆ. ಇದರಲ್ಲಿ ಎಲ್ಲರಿಗೂ ಸಮಾನ ಅವಕಾಶ ಸಿಗಲಿದೆ.
-ಫಿಲೋಮಿನಾ ಲೋಬೋ, ನಿರ್ದೇಶಕಿ, ಪ್ರೌಢ ಶಿಕ್ಷಣ

– ರಾಜು ಖಾರ್ವಿ ಕೊಡೇರಿ

Advertisement

Udayavani is now on Telegram. Click here to join our channel and stay updated with the latest news.

Next