Advertisement

ಸ್ತ್ರೀಯರ ಸ್ವಯಂ ರಕ್ಷಣೆಗೆ ಮಾರ್ಗದರ್ಶನ ನೀಡಿ

04:31 PM Sep 19, 2021 | Team Udayavani |

ತುಮಕೂರು: ಮಹಿಳೆಯರು ಮತ್ತು ಮಕ್ಕಳ ಮೇಲೆ ಯಾವುದೇ ದೌರ್ಜನ್ಯ ನಡೆಯದಂತೆ ಸೂಕ್ತ ಕ್ರಮ ಕೈಗೊಳ್ಳುವುದರ ಜೊತೆಗೆ ಅವರಿಗೆ ಸ್ವಯಂ ರಕ್ಷಣೆ ಕುರಿತು ಮಾರ್ಗದರ್ಶನ ನೀಡಬೇಕು ಎಂದು ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯೆ ಶ್ಯಾಮಲ ಎಸ್‌. ಕುಂದರ್‌ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.

Advertisement

ನಗರದ ಡೀಸಿ ಕಚೇರಿ ಸಭಾಂಗಣದಲ್ಲಿ ನಡೆದ ಮಹಿಳಾ ಕಾರ್ಯಕ್ರಮಗಳು ಹಾಗೂ ಕುಂದುಕೊರತೆಗಳ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳು ಹೆಚ್ಚುತ್ತಿದ್ದು, ಈ ದೌರ್ಜನ್ಯ ತಡೆಗೆ ಜಿಲ್ಲಾಮಟ್ಟದ ಆಂತರಿಕ ದೂರು ಸಮಿತಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸೂಚನೆ ನೀಡಿದರು. ಆಂತರಿಕ ದೂರು ಸಮಿತಿ ಸ್ಥಾಪಿಸಿ: ಹತ್ತು ಮಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಕೆಲಸ ಮಾಡುವ ಸ್ಥಳದಲ್ಲಿ ಕಡ್ಡಾಯವಾಗಿ ಆಂತರಿಕ ದೂರು ಸಮಿತಿ ಸ್ಥಾಪಿಸಿ, ದೌರ್ಜನ್ಯ ತಡೆ ಕುರಿತು ಅರಿವು ಮೂಡಿಸಬೇಕು. ಆಂತರಿಕ ದೂರು ಸಮಿತಿ ಕಾರ್ಯವೈಖರಿ ಹಾಗೂ ಜವಾಬ್ದಾರಿಗಳ ಬಗ್ಗೆ ಕಮಿಟಿ ಸದಸ್ಯರಿಗೆ ಅರಿವು ಮೂಡಿಸಬೇಕು. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಡಿ ಕಾರ್ಯ ನಿರ್ವಹಿಸುತ್ತಿರುವ ಅಂಗನವಾಡಿ, ಆಶಾ ಕಾರ್ಯಕರ್ತೆಯರಿಗೆ ಯಾವುದೇ ರೀತಿಯ ಆರೋಗ್ಯ ರಕ್ಷಣಾ ಕಾರ್ಯಕ್ರಮ ರೂಪಿಸಿಲ್ಲ ಎಂಬ ಆರೋಪಗಳು ಕಾರ್ಯಕರ್ತರಿಂದ ಕೇಳಿ ಬರುತ್ತಿದ್ದು, ಅಧಿಕಾರಿಗಳು ಆಶಾ ಕಾರ್ಯಕರ್ತೆಯರ ಆರೋಗ್ಯ ರಕ್ಷಣೆಗೆ ಕಾರ್ಯಕ್ರಮ ರೂಪಿಸಬೇಕೆಂದು ತಿಳಿಸಿದರು.

ಶಾಲಾ- ಕಾಲೇಜುಗಳ ಸುತ್ತಮುತ್ತಲಿನ ಅಂಗಡಿಗಳಲ್ಲಿ ಮಾದಕ ದ್ರವ್ಯಗಳು ದೊರೆಯುತ್ತಿ ರುವುದರಿಂದ ವಿದ್ಯಾರ್ಥಿಗಳು ಮಾದಕ ವ್ಯಸನಿಗಳಾಗುತ್ತಿದ್ದಾರೆ. ಪೊಲೀಸ್‌ ಇಲಾಖೆ ಈ ಬಗ್ಗೆ ಹೆಚ್ಚು ನಿಗಾ ವಹಿಸಿ, ಶಾಲಾ-ಕಾಲೇಜುಗಳ ಸುತ್ತಮುತ್ತ ಗಸ್ತು ಪೊಲೀಸರನ್ನು ನಿಯೋಜಿಸಬೇಕು. ಸುತ್ತ ಮುತ್ತಲಿನ ಅಂಗಡಿಗಳಲ್ಲಿ ಮಾದಕ ದ್ರವ್ಯ ಮಾರಾಟ ಮಾಡುವವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕು. ಪೊಲೀಸ್‌ ಠಾಣೆಗಳಿಗೆ ಮಹಿಳೆಯರು ಬರುವುದಕ್ಕೆ ಹೆದರುತ್ತಿರುವ ಪ್ರಸಂಗ ಇನ್ನೂ ಬಹುತೇಕ ಕಡೆ ದೂರವಾಗಿಲ್ಲ. ಆದ್ದರಿಂದ, ಮಹಿಳೆಯರಲ್ಲಿನ ಭಯ ಹೋಗಲಾಡಿಸುವ ಕುರಿತು ಮಹಿಳಾ ಪೊಲೀಸ್‌ ಅಧಿಕಾರಿಗಳಿಂದ ಅರಿವು ಮೂಡಿಸಬೇಕು ಎಂದರು.

ಇದನ್ನೂ ಓದಿ:‘ಸಿಧು ದೇಶ ವಿರೋಧಿ’ : ಅಮರೀಂದರ್ ಆರೋಪಕ್ಕೆ ‘ಗಾಂಧಿ ಕುಟುಂಬ’ದ ಮೌನವೇಕೆ ?

ಗುಣಮಟ್ಟದ ಶಿಕ್ಷಣ ಪಡೆಯಿರಿ: ಹೆಣ್ಣು ಮಕ್ಕಳು ವಿದ್ಯಾವಂತರಾದರೆ, ದೌರ್ಜನ್ಯ ಪ್ರಕರಣಗಳಿಗೆ ಕಡಿವಾಣ ಹಾಕಬಹುದಾಗಿದೆ. ಆದ್ದರಿಂದ, ಎಲ್ಲಾ ಹೆಣ್ಣು ಮಕ್ಕಳು ಉನ್ನತಮಟ್ಟದ ಶಿಕ್ಷಣ ಪಡೆಯಬೇಕು. ಹೆಣ್ಣು ಮಕ್ಕಳು 18 ವರ್ಷಕ್ಕೆ ಹಸೆಮಣೆ ತುಳಿಯದೇ, 21 ವರ್ಷದವರೆಗೂ ಗುಣಮಟ್ಟದ ಶಿಕ್ಷಣ ಪಡೆಯಬೇಕು. ಸರ್ಕಾರದಿಂದ ಮಹಿಳೆ ಮತ್ತು ಮಕ್ಕಳ ಅಭಿವೃದ್ಧಿಗಾಗಿ ರೂಪಿಸಿರುವ ಯೋಜನೆ ಸದ್ಬಳಕೆ ಮಾಡಿಕೊಳ್ಳಬೇಕು. ಅಧಿಕಾರಿಗಳು ಯೋಜನೆಗಳ ಸೌಲಭ್ಯ ಫ‌ಲಾನುಭವಿಗಳಿಗೆ ಸಮರ್ಪಕವಾಗಿ ತಲುಪಿಸಬೇಕು ಎಂದು ಸೂಚಿಸಿದರು.

Advertisement

ಜಿಲ್ಲಾಧಿಕಾರಿ ವೈ.ಎಸ್‌. ಪಾಟೀಲ್‌ ಮಾತನಾಡಿ, ಹೆಣ್ಣು ಮಕ್ಕಳ ಮತ್ತು ಮಹಿಳೆಯರ ಮೇಲಿನ ದೌರ್ಜನ್ಯ ತಡೆಗಾಗಿ ಆಂತರಿಕ ದೂರು ಸಮಿತಿ ಸದಸ್ಯೆಯರಿಗೆ ಹೆಚ್ಚಿನ ಅರಿವು ಮೂಡಿಸಲಾಗುವುದು. ಒಟ್ಟಾರೆ ಈಗಾಗಲೇ ಮಹಿಳಾ ಮತ್ತು ಮಕ್ಕಳ ಮೇಲಿನ ದೌರ್ಜನ್ಯ ತಡೆಗೆ ಕ್ರಮ ಕೈಗೊಳ್ಳಲಾಗಿದ್ದು, ಅಧಿಕಾರಿಗಳು ದೌರ್ಜನ್ಯ ಪ್ರಕರಣ ಜರುಗದಂತೆ ಕಾರ್ಯ ನಿರ್ವಹಿಸುತ್ತಿದ್ದಾರೆ. ಅಧಿಕಾರಿಗಳು ಇನ್ನೂ ಹೆಚ್ಚಿನ ಜವಾಬ್ದಾರಿಯಿಂದ ಕಾರ್ಯ ನಿರ್ವಹಿಸಲು ಸೂಚನೆ ನೀಡಲಾಗುವುದು ಎಂದರು.

ಅರಿವು ಮೂಡಿಸಿ: ಜಿಪಂ ಸಿಇಒ ಡಾ.ಕೆ. ವಿದ್ಯಾಕುಮಾರಿ ಮಾತನಾಡಿ, ಗ್ರಾಮೀಣ ಭಾಗದಲ್ಲಿ ಶೌಚಾಲಯಗಳ ಸುಸ್ಥಿರ ಬಳಕೆಗೆ ಹಲವಾರು ಅರಿವು ಮೂಡಿಸುವ ಕಾರ್ಯಕ್ರಮ ರೂಪಿಸಲಾಗಿದೆ. ಅಂಗನ ವಾಡಿ ಹಾಗೂ ಶಾಲೆಗಳಲ್ಲಿ ಸುಸಜ್ಜಿತ ಶೌಚಾಲಯಗಳ ನಿರ್ಮಾಣಕ್ಕೂ ಕಾರ್ಯಕ್ರಮ ರೂಪಿಸಲಾಗಿದೆ ಎಂದರು. ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ರಾಹುಲ್‌ ಕುಮಾರ್‌ ಶಹಪೂರವಾಡ್‌, ಡಿಡಿಪಿಐ ಸಿ.ನಂಜಯ್ಯ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕ ಶ್ರೀಧರ್‌, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ವಾಸಂತಿ ಉಪ್ಪಾರ್‌ ಮತ್ತಿತರರು ಇದ್ದರು.

ದೌರ್ಜನ್ಯ ಪ್ರಕರಣ ತಡೆಗೆ ಕ್ರಮವಹಿಸಲು ಸೂಚನೆ
ಮಹಿಳೆ ಮತ್ತು ಮಕ್ಕಳ ಮೇಲೆ ದೌರ್ಜನ್ಯ ಪ್ರಕರಣ ಹೆಚ್ಚುತ್ತಿವೆ. ಅದಕ್ಕೆ ಕಡಿವಾಣ ಹಾಕಲು ಪೊಲೀಸರು ಅಗತ್ಯ ಕ್ರಮ ಕೈಗೊಳ್ಳಬೇಕು. ಶಾಲಾ, ಕಾಲೇಜು ಬಳಿ ಮಾದಕ ವಸ್ತುಗಳ ಮಾರಾಟ ತೀವ್ರವಾಗಿದೆ. ಕಾಲೇಜುಗಳು ಬಳಿ ಇರುವ ಅಂಗಡಿಗಳಲ್ಲಿಯೇ ಹೆಚ್ಚು ಈ ಮಾದಕ ವಸ್ತುಗಳ ಮಾರಾಟ ಮಾಡುತ್ತಾರೆ ಎನ್ನುವ ಮಾಹಿತಿ ಇದೆ. ಪೊಲೀಸರು ಈ ಬಗ್ಗೆ ಹೆಚ್ಚಿನ ಆಸಕ್ತಿ ವಹಿಸಿ ಕ್ರಮ ಕೈಗೊಳ್ಳಬೇಕು ಎಂದು ಶಾಲಾ- ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯೆ ಶ್ಯಾಮಲ ಎಸ್‌.ಕುಂದರ್‌ ಸೂಚನೆ ನೀಡಿದರು.

ಗ್ರಾಮೀಣ ಭಾಗದಲ್ಲಿನ ಮಹಿಳೆಯರು ಮತ್ತು ಮಕ್ಕಳು ಶೌಚಾಲಯ ಬಳಕೆ ಮಾಡದೆ ಬಯಲು ಬಹಿರ್ದೆಸೆಯನ್ನೇ ಅವಲಂಬಿಸಿದ್ದಾರೆ.
ಇದರ ಪರಿಣಾಮ ದೌರ್ಜನ್ಯ ಪ್ರಕರಣ ಹೆಚ್ಚಳವಾಗುತ್ತಿದೆ. ಹಾಗಾಗಿ, ಶೌಚಾಯಲಗಳ ಸದ್ಬಳಕೆ ಕುರಿತು ಗ್ರಾಪಂ ಸೇರಿದಂತೆ ಸ್ಥಳೀಯ ಸಂಸ್ಥೆಗಳು ಅರಿವು ಮೂಡಿಸಬೇಕು.
– ಶ್ಯಾಮಲ ಎಸ್‌.ಕುಂದರ್‌, ರಾಷ್ಟ್ರೀಯ
ಮಹಿಳಾ ಆಯೋಗದ ಸದಸ್ಯೆ

ಜಿಲ್ಲೆಯಲ್ಲಿ ಮಹಿಳಾ ಮತ್ತು ಮಕ್ಕಳ ಮೇಲಿನ ದೌರ್ಜನ್ಯ ತಡೆಗೆ ಕ್ರಮ ಕೈಗೊಳ್ಳಲಾಗಿದೆ. ಅಧಿಕಾರಿಗಳು ದೌರ್ಜನ್ಯ ಪ್ರಕರಣ ಜರುಗದಂತೆ ಕಾರ್ಯ ನಿರ್ವಹಿಸುತ್ತಿದ್ದಾರೆ. ಈ ಕುರಿತು ಜನರಲ್ಲಿ ಜಾಗೃತಿ ಮೂಡಿಸುವ ಮೂಲಕ ಅಧಿಕಾರಿಗಳು ಇನ್ನೂ ಹೆಚ್ಚಿನ ಜವಾಬ್ದಾರಿಯಿಂದ ಕಾರ್ಯ ನಿರ್ವಹಿಸಿ.
-ವೈ.ಎಸ್‌.ಪಾಟೀಲ್‌, ಜಿಲ್ಲಾಧಿಕಾರಿ

Advertisement

Udayavani is now on Telegram. Click here to join our channel and stay updated with the latest news.

Next