ಕಾಸರಗೋಡು: ಒಂದು ಸಮಾಜದ ಔನ್ನತ್ಯಕ್ಕಾಗಿ ದುಡಿದು ಮಾರ್ಗ ದರ್ಶನ ನೀಡಿದ ಮಾರ್ಗದರ್ಶಕರನ್ನು ಗುರುತಿಸಿ ಸ್ಮರಿಸಬೇಕಾದುದು ಸಮಾಜ ಸೇವಾ ಸಂಸ್ಥೆಗಳ ಕರ್ತವ್ಯವಾಗಿದೆ. ಈ ನಿಟ್ಟಿನಲ್ಲಿ ಬ್ರಹ್ಮಶ್ರೀ ಉಡುಪಿ ಮಾಧವ ಭಟ್ ಅವರು ರಾಮ ಕ್ಷತ್ರಿಯ ಸಮಾಜದ ಕುಲಪುರೋಹಿತರಾಗಿದ್ದು ಹತ್ತು ಹಲವು ದೇವಸ್ಥಾನಗಳ ದೇವರ ಮನೆಯ ಅಭಿವೃದ್ಧಿಯಲ್ಲಿ ತೊಡಗಿಸಿಕೊಂಡು ಮಾರ್ಗದರ್ಶನ ನೀಡಿದ ಮಹಾತ್ಮರು. ಇಂತಹ ಮಹಾತ್ಮರನ್ನು ಶಾಶ್ವತವಾಗಿ ನೆನಪಿಸಿಕೊಳ್ಳುವಲ್ಲಿ ರಾಮಕ್ಷತ್ರಿಯ ಸಮಾಜ ಕಾರ್ಯೋನ್ಮುಖ ವಾಗಬೇಕಾಗಿದೆ ಎಂದು ಉಡುಪಿ ಕರಾವಳಿ ಕಾವಲು ಪಡೆಯ ಸರ್ಕಲ್ ಇನ್‌ಸ್ಪೆಕ್ಟರ್ ಪ್ರಮೋದ್ ಕುಮಾರ್ ಹೇಳಿದರು.
ಅವರು ಬೇಕಲ ಪಟ್ಟತ್ತಾನದಲ್ಲಿ ಜರಗಿದ ಉಡುಪಿ ಮಾಧವ ಭಟ್ ಅವರ ಸಂಸ್ಮರಣ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.
ಹಿರಿಯ ವೈದ್ಯ ಡಾ| ಅನಂತಪದ್ಮನಾಭ ಭಟ್ ಅವರ ಅಧ್ಯಕ್ಷತೆಯಲ್ಲಿ ಜರಗಿದ ಕಾರ್ಯಕ್ರಮದಲ್ಲಿ ರಾಮಕ್ಷತ್ರಿಯ ಸಮಾಜದ ಮುಂದಾಳು ಉಡುಪಿ ಮಾಧವ ಭಟ್ ಅವರ ಬಹುಕಾಲದ ಒಡನಾಡಿ ಮಂಕಿ ಬಾಲಕೃಷ್ಣ ರಾವ್, ರಾಮರಾಜ ಕ್ಷತ್ರಿಯ ಯಾನೆ ಕೋಟೆಯವರ ಸೇವಾ ಸಂಘ ಕಾಸರಗೋಡು ಜಿಲ್ಲಾ ಸಂಘದ ಅಧ್ಯಕ್ಷ ಬಿ.ಪಿ.ವೆಂಕಟ್ರಮಣ, ರಾಮರಾಜ ಕ್ಷತ್ರಿಯ ಭಜನಾ ಸಂಘ ತಲ್ಲಾಣಿ ಇದರ ಅಧ್ಯಕ್ಷ ವಿದ್ಯಾನಂದ ಹೂಡೆ, ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನ ಕಾಸರಗೋಡು ಇದರ ಅಧ್ಯಕ್ಷ ಶಿವರಾಮ ಕಾಸರಗೋಡು, ಪುರೋಹಿತ ಶ್ಯಾಮ್ ಭಟ್, ಸುಬ್ರಹ್ಮಣ್ಯ ಭಟ್, ಕರ್ನಾಟಕ ಲೋಕೋಪಯೋàಗಿ ಇಲಾಖೆಯ ನಿವೃತ್ತ ಕಾರ್ಯದರ್ಶಿ ಟಿ.ಸುಕುಮಾರ ಜಾಲುಮನೆ ಮೊದಲಾದವರು ಮಾಧವ ಭಟ್ ಅವರ ಸಂಸ್ಮರಣೆ ಮಾಡಿದರು. ಮಾಧವ ಭಟ್ ಅವರ ಪುತ್ರ ಎಸ್.ಎಲ್.ಭಾರದ್ವಾಜ್ ಬೇಕಲ್ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಕೆ.ಜಗದೀಶ್ ಕೂಡ್ಲು ಕಾರ್ಯಕ್ರಮ ನಿರೂಪಿಸಿದರು. ನಾಗೇಂದ್ರ ಪ್ರಸಾದ್ ಬೇಕಲ್ ವಂದಿಸಿದರು.