ಕುಂದಾಪುರ: ವಿದ್ಯಾರ್ಥಿ ಜೀವನದಲ್ಲಿ ಮೋಜು ಎಂಬುದಿಲ್ಲ. ಮೋಜಿನ ಕಡೆಗೆ ಗಮನಹರಿಸಿದರೆ ಜೀವನಪೂರ್ತಿ ಕಷ್ಟಪಡಬೇಕಾದೀತು. ವಿದ್ಯಾರ್ಥಿಗಳು ಜಗತ್ತಿಗೆ ಸ್ವಯಂ ಬೆಳಕಾಗುವ ಜ್ಯೋತಿಗಳಾಗಿ ರೂಪುಗೊಳ್ಳಬೇಕು ಎಂದು ಕಾರ್ಕಳ ಬೈಲೂರು ಮಠ ಶ್ರೀ ರಾಮಕೃಷ್ಣ ಆಶ್ರಮದ ಶ್ರೀ ವಿನಾಯಕಾನಂದಜೀ ಮಹಾರಾಜ್ ಹೇಳಿದರು.
ಇಲ್ಲಿನ ಜೂನಿಯರ್ ಕಾಲೇಜಿನ ರೋಟರಿ ಲಕ್ಷ್ಮೀ ನರಸಿಂಹ ಕಲಾಮಂದಿರದಲ್ಲಿ ಗಿಳಿಯಾರು ಕುಶಲ ಹೆಗ್ಡೆ ಸ್ಮಾರಕ ಚಾರಿಟೆಬಲ್ ಟ್ರಸ್ಟ್‌ನಿಂದ ವಿದ್ಯಾರ್ಥಿಗಳಿಗೆ ಸಹಾಯಧನ ವಿತರಣೆ ಹಾಗೂ ಮಾರ್ಗದರ್ಶನ ಕಾರ್ಯಕ್ರಮ ಉದ್ಘಾಟಿಸಿ ಆಶೀರ್ವಚನ ನೀಡಿದರು.
ವಿದ್ಯಾರ್ಥಿಗಳು ಆತ್ಮವಿಶ್ವಾಸ ಬೆಳೆಸಿಕೊಳ್ಳಬೇಕು. ಆಗ ನಮ್ಮನ್ನು ನಾವು ಜಯಿಸಲು ಸಾಧ್ಯ. ಪರಿಸ್ಥಿತಿ ನಮ್ಮ ಕೈವಶದಲ್ಲಿರಬೇಕು. ನಾವು ಪರಿಸ್ಥಿತಿಯ ಕೈಗೊಂಬೆಗಳಾಗಬಾರದು. ನೈತಿಕತೆ ಬಿಟ್ಟು ಭೌತಿಕ ಭೋಗದ ಕಡೆಗೆ ಗಮನ ಹರಿಯಬಾರದು. ದೈಹಿಕ, ನೈತಿಕ, ಬೌದ್ಧಿಕ, ಭಾವನಾತ್ಮಕ ಹಾಗೂ ಧಾರ್ಮಿಕ ಬೆಳವಣಿಗೆಯನ್ನು ವಿದ್ಯಾರ್ಥಿ ಜೀವನದಲ್ಲಿ ಅಳವಡಿಸಿಕೊಂಡಾಗ ಯಶಸ್ಸು ಎಂದರು.
ಪದವಿಪೂರ್ವ, ಪದವಿ, ಸ್ನಾತಕೋತ್ತರ ಪದವಿ ಕಾಲೇಜಿನ ವಿದ್ಯಾರ್ಥಿಗಳು, ಎಂಜಿನಿಯರಿಂಗ್, ವೈದ್ಯಕೀಯ ಶಿಕ್ಷಣದ ಸುಮಾರು 250 ಅರ್ಹ ವಿದ್ಯಾರ್ಥಿಗಳಿಗೆ 7 ಲಕ್ಷ ರೂ. ಸಹಾಯಧನ ನೀಡಲಾಯಿತು.
ಪ್ರತಿಭಾವಂತ ವಿದ್ಯಾರ್ಥಿಗಳಾದ ರಾಜ್ಯಮಟ್ಟದಲ್ಲಿ ರ್‍ಯಾಂಕ್‌ಗಳನ್ನು ಪಡೆದ ಭಂಡಾರ್‌ಕಾರ್ಸ್ ಪದವಿ ಕಾಲೇಜಿನ ಮಹಾಲಕ್ಷ್ಮೀ ಉಪ್ಪಿನಕುದ್ರು, ಮಮತಾ ನಾವುಂದ, ಸುಕನ್ಯಾ ಬೀಜಾಡಿ, ಆರ್.ಎನ್. ಶೆಟ್ಟಿ ಪ.ಪೂ. ಕಾಲೇಜಿನ ಅಂಕಿತಾ ಶೆಟ್ಟಿ ಬೇಲೂ¤ರು, ವೆಂಕಟರಮಣ ಪ.ಪೂ.ಕಾಲೇಜಿನ ಉಮಾ ಹಸ್ನಾ, ವೆಂಕಟ್ರಮಣ ಪ್ರೌಢಶಾಲೆಯ ಸಂಜನಾ ಕೋಟತಟ್ಟು, ತಾಲೂಕಿಗೆ ರ್‍ಯಾಂಕ್ ಪಡೆದ ವೆಂಕಟರಮಣ ಕಾಲೇಜಿನ ಅಂಜಲಿ ಶೇಟ್, ಕಿರಣ್ ಅವರನ್ನು ಸಮ್ಮಾನಿಸಲಾಯಿತು.
ಅಧ್ಯಕ್ಷತೆಯನ್ನು ಗಿಳಿಯಾರು ಕುಶಲ ಹೆಗ್ಡೆ ದತ್ತಿನಿಧಿಯ ಅಧ್ಯಕ್ಷ ಬಿ.ಪ್ರಕಾಶ್ಚಂದ್ರ ಶೆಟ್ಟಿ ವಹಿಸಿದ್ದರು.
ಉದ್ಯಮಿಗಳಾದ ಸೊಲೊಮನ್ ಸೋನ್ಸ್, ಜಯಕರ ಶೆಟ್ಟಿ, ಅರುಣ್ ಕುಮಾರ್ ಶೆಟ್ಟಿ, ಉದಯ ಹೆಗ್ಡೆ, ಕಿಶೋರ್ ಹೆಗ್ಡೆ, ಸ್ವರೂಪ್ ಹೆಗ್ಡೆ ಉಪಸ್ಥಿತರಿದ್ದರು.
ಪತ್ರಕರ್ತ ಯು.ಎಸ್. ಶೆಣೈ ಸ್ವಾಗತಿಸಿ, ನಿರ್ವಹಿಸಿದರು.