ಮುಧೋಳ: ಕಳೆದ ಎರಡು ವರ್ಷಗಳಿಂದ ಪ್ರತಿಯೊಬ್ಬರ ಜೀವನದಲ್ಲಿಯೂ ಕೊರೊನಾ ಮಹಾಮಾರಿ ಒಂದಿಲ್ಲ ಒಂದು ರೀತಿಯ ವಿಘ್ನತಂದೊಡ್ಡಿದೆ. ಕೊರೊನಾ ಕರಿನೆರಳಿಗೆ ಸಿಕ್ಕು ತಾಲೂಕಿನ 200ಕ್ಕೂ ಹೆಚ್ಚು ಅತಿಥಿ ಶಿಕ್ಷಕರ ಬದುಕು ದುರ್ಬರವಾಗಿದೆ.
ಕೊರೊನಾ ಹೊಡೆತದಿಂದ ಕಳೆದೆರೆಡು ವರ್ಷದಿಂದ ಎಲ್ಲ ರಂಗದ ಚಟುವಟಿಕೆಗಳು ಸ್ಥಬ್ದಗೊಂಡಿವೆ. ಎರಡು ವರ್ಷದಿಂದ ಶೈಕ್ಷಣಿಕ ಚಟುವಟಿಕೆಗಳು ಬಂದ್ ಆಗಿದ್ದರಿಂದ ಎಲ್ಲ ಶಾಲೆ ಕಾಲೇಜುಗಳು ಬಂದ್ ಆಗಿದ್ದವು. ಇದರಿಂದಾಗಿ ಪ್ರಾಥಮಿಕ ಹಾಗೂ ಪ್ರೌಢಶಾಲೆಯಲ್ಲಿ ಸರ್ಕಾರದ ವತಿಯಿಂದ ತಾತ್ಕಾಲಿಕವಾಗಿ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದ ಅತಿಥಿ ಶಿಕ್ಷಕರು ನಿರುದ್ಯೋಗಿಗಳಾಗಿದ್ದಾರೆ.
ಎರಡು ವರ್ಷಗಳಿಂದ ಸೇವೆ ಇಲ್ಲ: ಎರಡು ವರ್ಷದಿಂದ ಶಾಲೆಗಳಲ್ಲಿ ತರಗತಿಗಳು ಬಂದ್ ಆಗಿವೆ. ಸರ್ಕಾರದ ಆರ್ಥಿಕ ಸ್ಥಿತಿ ಹದಗೆಟ್ಟಿದ್ದ ಕಾರಣ ಎಲ್ಲ ಅತಿಥಿ ಶಿಕ್ಷಕರನ್ನು ಸೇವೆಯಿಂದ ಏಕಾಏಕಿ ಕೈಬಿಟ್ಟಿತು. ಇದರಿಂದ ತಾಲೂಕಿನ ವಿವಿಧ ಶಾಲೆಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದ ಅತಿಥಿಶಿಕ್ಷಕರು ತಮ್ಮ ಕೆಲಸವನ್ನು ಕಳೆದುಕೊಳ್ಳುವ ಪರಿಸ್ಥಿತಿ ನಿರ್ಮಾಣವಾಯಿತು.
ಇದರಿಂದಾಗಿ ನೂರಾರು ಅತಿಥಿ ಶಿಕ್ಷಕರ ಬದುಕು ಬೀದಿಗೆ ಬಿದ್ದಂತಾಗಿದೆ.248 ಅತಿಥಿ ಶಿಕ್ಷಕರ ಕೆಲಸಕ್ಕೆ ಕುತ್ತು: ಕೊರೊನಾ ಆಗಮನಕ್ಕೂ ಮುನ್ನ ತಾಲೂಕಿನ ಪ್ರಾಥಮಿಕ ಶಾಲೆಯಲ್ಲಿ 218 ಹಾಗೂ ಪ್ರೌಢಶಾಲೆಯಲ್ಲಿ 30ಅತಿಥಿ ಶಿಕ್ಷಕರು ಮಕ್ಕಳಿಗೆ ಪಾಠ ಹೇಳುತ್ತಿದ್ದರು. ಕೊರೊನಾ ಆಗಮನದಿಂದ ಅನಿವಾರ್ಯವಾಗಿ ಕೆಲಸಕಳೆದುಕೊಂಡ ಅತಿಥಿ ಶಿಕ್ಷಕರು ವಿವಿಧ ಕಡೆಗಳಲ್ಲಿಕೆಲಸ ಮಾಡುತ್ತಿದ್ದಾರೆ.
ಸರ್ಕಾರ ಇನ್ನಾದರೂ ಮುಂದಾಗಲಿ: ಎರಡು ವರ್ಷಗಳಿಂದ ಕೆಲಸವಿಲ್ಲದೆ ಅತಿಥಿ ಶಿಕ್ಷಕರಿಗೆ ಬೇರೆಬೇರೆ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ.ಆದರೆಇದೀಗ ಮತ್ತೆ ಶಾಲೆಗಳು ವಿವಿಧ ಹಂತಗಳಲ್ಲಿಆರಂಭವಾಗುತ್ತಿವೆ. ಇನ್ನಾದರೂ ಅತಿಥಿ ಶಿಕ್ಷಕರನ್ನುಮತ್ತೆ ಸೇವೆ ನಿಯೋಜನೆಗೊಳಿಸಿದರೆ ಅವರ ಜೀವನಕ್ಕೊಂದು ತಾತ್ಕಾಲಿಕ ನೆಲೆದೊರಕಿದಂತಾಗುತ್ತದೆ ಎಂಬುದು ಅತಿಥಿ ಶಿಕ್ಷಕರ ಮನವಿಯಾಗಿದೆ.
ಗೋವಿಂದಪ್ಪ ತಳವಾರ