ಬೀದರ: ಹುದ್ದೆ ಕಾಯಮಾತಿ ಜತೆಗೆ ಸೇವಾ ಭದ್ರತೆ ನೀಡುವಂತೆ ಆಗ್ರಹಿಸಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಅತಿಥಿ ಉಪನ್ಯಾಸಕರು ತರಗತಿ ಬಹಿಷ್ಕರಿಸಿ ನಗರದಲ್ಲಿ ಶುಕ್ರವಾರ ಪ್ರತಿಭಟನಾ ರ್ಯಾಲಿ ನಡೆಸಿದರು.
ಜಿಲ್ಲಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಅತಿಥಿ ಉಪನ್ಯಾಸಕರ ಸಂಘದ ಜಿಲ್ಲಾಧ್ಯಕ್ಷ ಅನೀಲಕುಮಾರ ಸಿಂಧೆ ಮತ್ತು ಉಪನ್ಯಾಸಕ ಚಂದ್ರಕಾಂತ ನಾರಾಯಣಪೂರ ನೇತೃತ್ವದಲ್ಲಿ ನಗರದ ಅಂಬೇಡ್ಕರ್ ವೃತ್ತದಲ್ಲಿ ಜಮಾಯಿಸಿದ ಉಪನ್ಯಾಸಕರು, ಅಲ್ಲಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ರ್ಯಾಲಿ ನಡೆಸಿದರು.
ಬಳಿಕ ಉನ್ನತ ಶಿಕ್ಷಣ ಸಚಿವರಿಗೆ ಬರೆದ ಮನವಿ ಪತ್ರ ಡಿಸಿ ಕಚೇರಿ ಅಧಿಕಾರಿಗೆ ಸಲ್ಲಿಸಿದರು. ಸುಮಾರು ವರ್ಷಗಳಿಂದ ಕನಿಷ್ಟ ಮಾಸಿಕ ಗೌರವ ಭತ್ಯೆ ಪಡೆದು ಸೇವೆ ಸಲ್ಲಿಸುತ್ತಿರುವ ಅತಿಥಿ ಉಪನ್ಯಾಸಕರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಿ ಕರ್ನಾಟಕ ನಾಗರಿಕ ಸೇವೆಯಲ್ಲಿ ಸೇವಾ ವಿಲೀನಗೊಳಿಸಿ ಸೇವಾ ಭದ್ರತೆ ಕಲ್ಪಿಸಬೇಕು. ಹಿಂದೆ 1982, 1992, 1996 ಮತ್ತು 2003ರಲ್ಲಿ ಸರ್ಕಾರಿ ಕಾಲೇಜುಗಳಲ್ಲಿ ಹಂಗಾಮಿಯಾಗಿ ಕರ್ತವ್ಯ ನಿರ್ವಹಿಸಿದವರಿಗೆ ಕಾಯಂ ಮಾಡಿರುವ ನಿದರ್ಶನಗಳಿವೆ. ಅದೇ ಮಾದರಿಯಲ್ಲಿ ಅತಿಥಿ ಉಪನ್ಯಸಕರ ಬಗ್ಗೆಯೂ ಸರ್ಕಾರ ನಿರ್ಧಾರ ತೆಗೆದುಕೊಳ್ಳುವಂತೆ ಆಗ್ರಹಿಸಿದರು.
ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಕಾರ್ಯನಿರತ ಹುದ್ದೆಗಳಿಗೆ ವಿರುದ್ಧವಾಗಿ ಹೊಸ ಹುದ್ದೆ ಸೃಜಿಸಿ, ಸೇರ್ಪಡೆ ಮತ್ತು ಕಾನೂನು ತಿದ್ದುಪಡಿ ಮಾಡಿಕೊಂಡು ಅನುಮೋದನೆ ನೀಡಿ ಕಾರ್ಯನಿರ್ವಹಿಸುತ್ತಿರುವ ಅತಿಥಿ ಉಪನ್ಯಾಸಕರನ್ನು ಸೃಜಿಸಿದ ಹುದ್ದೆಗಳಲ್ಲಿ ವಿಲೀನಗೊಳಿಸಿ ಎಲ್ಲ ಅತಿಥಿ ಉಪನ್ಯಾಸಕರಿಗೂ ಅವರವರ ವಿದ್ಯಾರ್ಹತೆಗೆ ಅನುಸಾರ ಹುದ್ದೆ ನೀಡಿ ಸೇವಾ ಭದ್ರತೆ ನೀಡುವ ಮೂಲಕ ಇಚ್ಛಾಶಕ್ತಿ ಪ್ರದರ್ಶಿಸಬೇಕು ಎಂದು ಒತ್ತಾಯಿಸಿದ್ದಾರೆ.