ಯಾದಗಿರಿ: ರಾಜ್ಯಾದ್ಯಂತ ಅತಿಥಿ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿರುವ ಅಭ್ಯರ್ಥಿಗಳು ವಿಶ್ವವಿದ್ಯಾಲಕ್ಕೆ ತಪ್ಪು ಮಾಹಿತಿ ನೀಡಿ ವೃತ್ತಿಯಲ್ಲಿ ತೊಡಗಿದ್ದಾರೆಯೇ ಎನ್ನುವ ಅನುಮಾನಕ್ಕೆ ಎಡೆಮಾಡಿದೆ.
ಗುಲಬರ್ಗಾ ವಿಶ್ವವಿದ್ಯಾಲಯಕ್ಕೆ ಮಾಹಿತಿ ಹಕ್ಕು ಕಾಯ್ದೆಯಡಿ ಕೇಳಿದ ಮಾಹಿತಿಯಿಂದ ಇಂತಹ ಅಂಶ ಬೆಳಕಿಗೆ ಬಂದಿದೆ. ಯಾದಗಿರಿ ಜಿಲ್ಲೆಯ ಗುರುಮಠಕಲ್ ಪ್ರಥಮ ದರ್ಜೆ ಕಾಲೇಜಿನಲ್ಲಿ ದಶರಥ ಹಾಗೂ ಕಲಬುರಗಿ ಜಿಲ್ಲೆ ಸೇಡಂ ಪ್ರಥಮ ದರ್ಜೆ ಕಾಲೇಜಿನಲ್ಲಿ ಗೌತಮ ಮತ್ತು ಅಲ್ಲಾಭಕ್ಷ ಎನ್ನುವವರು ಅತಿಥಿ ಉಪನ್ಯಾಸಕರಾಗಿ ಸೇವೆಗೆ ಸೇರಿರುವುದು ಬಯಲಿಗೆ ಬಂದಿದೆ. ಆದರೆ, ಇವರು ಗುಲಬರ್ಗಾ ವಿಶ್ವವಿದ್ಯಾಲಯದ ಇತಿಹಾಸ ಅಧ್ಯಯನ ವಿಭಾಗದಲ್ಲಿ ಪಿಎಚ್‌ಡಿ ಅಧ್ಯಯನ ಮಾಡುತ್ತಿರುವುದು ಬೆಳಕಿಗೆ ಬಂದಿದೆ.
ಯುಜಿಸಿ ನಿಯಮದ ಪ್ರಕಾರ ಒಂದೇ ಅವಧಿಯಲ್ಲಿ ಎರಡು ಕಡೆ ಹಾಜರಾತಿ ಪಡೆಯಲು ಬರಲ್ಲ. ಅದನ್ನು ಮೀರಿ ಹೇಗೆ ಸೇವೆ ಸಲ್ಲಿಸುತ್ತಿದ್ದಾರೆ ಎನ್ನುವ ಪ್ರಶ್ನೆ ಮೂಡಿದೆ. ಈ ಬಗ್ಗೆ ಕಾಲೇಜು ಪ್ರಾಂಶುಪಾಲರಿಗೆ ತಿಳಿದಿದೆಯೇ ಇಲ್ಲವೇ? ಆಯ್ಕೆ ವೇಳೆ ಇದನ್ನು ಮುಚ್ಚಿಟ್ಟು ಅಭ್ಯರ್ಥಿಗಳು ಉದ್ಯೋಗ ಗಿಟ್ಟಿಸಿಕೊಳ್ಳಲು ಇಂತಹ ಮಾರ್ಗ ಅನುಸರಿಸುತ್ತಿದ್ದಾರೆಯೇ ಎನ್ನುವುದು ಪ್ರಶ್ನೆಯಾಗಿ ಉಳಿದಿದೆ. ಆಯ್ಕೆ ವೇಳೆ ಅತಿಥಿ ಉಪನ್ಯಾಸಕರು ಕಾಲೇಜಿಗೆ ದೃಢೀಕರಣ ನೀಡುತ್ತಾರೆ. ಹಾಗೇಯೇಪಿಎಚ್‌ಡಿ ವ್ಯಾಸಂಗಕ್ಕೆ ಪ್ರವೇಶ ಪಡೆಯುವ ವೇಳೆಗೂ ವಿವಿಗೆ ಎಲ್ಲಿಯೂ ಕೆಲಸ ನಿರ್ವಹಿಸದ ಕುರಿತು ಮಾಹಿತಿ ನೀಡುವ ನಿಯಮ ಉಲ್ಲಂಘಿಸಿ ಅತಿಥಿ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿರುವುದು ಎಷ್ಟು ಸರಿ ಎಂದು ಆಕಾಂಕ್ಷಿಗಳು ಪ್ರಶ್ನಿಸಿದ್ದಾರೆ.
ಅರ್ಹರಿಗೆ ಅನ್ಯಾಯ: ಇದರಿಂದಾಗಿ ಅತಿಥಿ ಉಪನ್ಯಾಸಕರಾಗಿ ಸೇವೆ ಸಲ್ಲಿಸಲು ಎಂಎ, ಎಂಫಿಲ್ ವ್ಯಾಸಂಗ ಮಾಡಿ ಅರ್ಹತೆ ಹೊಂದಿರುವ ಅಭ್ಯರ್ಥಿಗಳು ಅವಕಾಶದಿಂದ ವಂಚಿತವಾಗುತ್ತಿದ್ದು, ಇದೇ ರೀತಿ ಪಿಎಚ್‌ಡಿ ವ್ಯಾಸಂಗ ಮಾಡುತ್ತ ಅತಿಥಿ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿರುವ ಪ್ರಕರಣಗಳು ಸಾಕಷ್ಟು ಕಡೆ ನಡೆಯುತ್ತಿವೆ. ಇದರಿಂದ ಅರ್ಹರಿಗೆ ಅವಕಾಶ ಸಿಗುತ್ತಿಲ್ಲ ಎನ್ನುವ ಮಾತುಗಳು ಕೇಳಿಬಂದಿದೆ. ಇದರಿಂದ ನೊಂದ ಆಕಾಂಕ್ಷಿ ರಾಮಲಿಂಗಪ್ಪ ಧರ್ಮಪುರ ಎನ್ನುವವರು ಕಾಲೇಜು ಶಿಕ್ಷಣ ಇಲಾಖೆ ಆಯುಕ್ತರು, ಕಾಲೇಜು ಶಿಕ್ಷಣ ಇಲಾಖೆ ಜಂಟಿ ನಿರ್ದೇಶಕರು, ಗುಲಬರ್ಗಾ ವಿವಿ ಇತಿಹಾಸ ಅಧ್ಯಯನ ಮತ್ತು ಸಂಶೋಧನಾ ವಿಭಾಗದ ಮುಖ್ಯಸ್ಥರಿಗೆ ಕ್ರಮ ಕೈಗೊಳ್ಳುವ ಕುರಿತು ದೂರು ಸಲ್ಲಿಸಿದ್ದಾರೆ. ಆದರೆ ಈವರೆಗೆ ಕ್ರಮ ವಹಿಸಲು ಮುಂದಾಗಿಲ್ಲ ಎಂದು ಅತಿಥಿ ಉಪನ್ಯಾಸಕ ಆಕಾಂಕ್ಷಿ ರಾಮಲಿಂಗಪ್ಪ ಅಳಲು ತೋಡಿಕೊಂಡಿದ್ದಾರೆ.
ಗುರುಮಠಕಲ್ ಪ್ರಥಮ ದರ್ಜೆ ಕಾಲೇಜುವೊಂದರಲ್ಲಿಯೇ ವಿವಿಧ ವಿಷಯಗಳ 39 ಅತಿಥಿ ಉಪನ್ಯಾಸಕರು ಸೇವೆ ಸಲ್ಲಿಸುತ್ತಿದ್ದಾರೆ. ಸೇಡಂ ಕಾಲೇಜಿನಲ್ಲಿ 70 ಅತಿಥಿ ಉಪನ್ಯಾಸಕರು ಸೇವೆ ಸಲ್ಲಿಸುತ್ತಿರುವುದಾಗಿ ಉಭಯ ಕಾಲೇಜು ಪ್ರಾಂಶುಪಾಲರು ಮಾಹಿತಿ ನೀಡಿದ್ದಾರೆ.
ಗುರುಮಠಕಲ್ ಮತ್ತು ಸೇಡಂ ಪ್ರಥಮ ದರ್ಜೆ ಕಾಲೇಜಿನಲ್ಲಿ ಅತಿಥಿ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತ ಕೆಲವು ಅತಿಥಿ ಉಪನ್ಯಾಸಕರು ಪಿಎಚ್‌ಡಿ ಅಧ್ಯಯನ ಮಾಡುತ್ತಿರುವುದು ಮಾಹಿತಿ ಹಕ್ಕಿನಡಿ ಕೇಳಿದ್ದರಿಂದ ತಿಳಿದು ಬಂತು. ನಾನು ಎಂಎ, ಎಂಫಿಲ್ ಸ್ನಾತಕೋತ್ತರ ಪದವೀಧರನಾಗಿದ್ದು, ಇಂತಹ ಪ್ರಕರಣಗಳಿಂದ ನನ್ನಂಥ ಅದೆಷ್ಟೋ ಅರ್ಹರಿಗೆ ಅವಕಾಶ ಸಿಗದಂತಾಗಿದೆ. ಈ ಬಗ್ಗೆ ಕಾಲೇಜು ಶಿಕ್ಷಣ ಆಯುಕ್ತರು, ಜಂಟಿ ನಿರ್ದೇಶಕರು, ಕುಲಪತಿಗಳಿಗೂ ಕ್ರಮ ವಹಿಸಲು ಕೇಳಿಕೊಂಡಿದ್ದೇನೆ. ಗುಲಬರ್ಗಾ ವಿವಿ ಅರ್ಹರಿಗೆ ನ್ಯಾಯ ಒದಗಿಸಬೇಕು. –
ರಾಮಲಿಂಗಪ್ಪ ಧರ್ಮಪುರ, ಅತಿಥಿ ಉಪನ್ಯಾಸಕ ಆಕಾಂಕ್ಷಿ
ಅತಿಥಿ ಉಪನ್ಯಾಸಕರು ಸೇವೆಗೆ ಸೇರುವ ಸಂದರ್ಭದಲ್ಲಿ ಲಿಖೀತ ರೂಪದಲ್ಲಿ ಎಲ್ಲಿಯೂ ವ್ಯಾಸಂಗ ಮಾಡದಿರುವ ಕುರಿತು ಮಾಹಿತಿ ನೀಡಿರುತ್ತಾರೆ. ಸದ್ಯ ನಮ್ಮ ಕಾಲೇಜಿನಲ್ಲಿ 70 ಜನ ಅತಿಥಿ ಉಪನ್ಯಾಸಕರು ಸೇವೆ ಸಲ್ಲಿಸುತ್ತಿದ್ದಾರೆ. ಪಿಎಚ್‌ಡಿ ಮಾಡುತ್ತಿರುವ ಕುರಿತು ನಮ್ಮ ಗಮನಕ್ಕಿಲ್ಲ. ತಿಳಿದರೆ ಮೇಲಧಿಕಾರಿಗಳ ಗಮನಕ್ಕೆ ತರಲಾಗುವುದು.-
ಶಿವಶರಣಪ್ಪ, ಪ್ರಾಂಶುಪಾಲರು, ಸೇಡಂ
-ಅನೀಲ ಬಸೂದೆ