Advertisement

ಸೇವಾ ಭದ್ರತೆಗಾಗಿ ಮಾಡು ಇಲ್ಲವೇ ಮಡಿ ಹೋರಾಟ

03:58 PM Jan 07, 2022 | Team Udayavani |

ಬಾಗಲಕೋಟೆ: ರಾಜ್ಯದ ವಿವಿಧ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಕಳೆದ 15ಕ್ಕೂ ಹೆಚ್ಚು ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಅತಿಥಿ ಉಪನ್ಯಾಸಕರಿಗೆ ಕನಿಷ್ಠ ವೇತನವೂ ಕೊಡುತ್ತಿಲ್ಲ. 28 ದಿನಗಳಿಂದ ತರಗತಿ ಬಹಿಷ್ಕರಿಸಿ ಹೋರಾಟ ನಡೆಸುತ್ತಿದ್ದರೂ ಸರ್ಕಾರ ಸ್ಪಂದಿಸುತ್ತಿಲ್ಲ. ನಮ್ಮ ಬೇಡಿಕೆಗಾಗಿ ಮಾಡು ಇಲ್ಲವೇ ಮಡಿ ಹೋರಾಟಕ್ಕೆ ಸಿದ್ಧರಾಗಿದ್ದೇವೆ.

Advertisement

ಕೂಡಲೇ ಸರ್ಕಾರ ನಮ್ಮ ಬೇಡಿಕೆಗೆ ಸ್ಪಂದಿಸಬೇಕು. ಇಲ್ಲದಿದ್ದರೆ ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ರಾಜ್ಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಅತಿಥಿ ಉಪನ್ಯಾಸಕರ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಪ್ರೊ| ಹನುಮಂತ ಕುಲಗೋಡ ಎಚ್ಚರಿಕೆ ನೀಡಿದರು.

ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದ ಸುಮಾರು 440 ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಸುಮಾರು 14,183ಕ್ಕೂ ಅಧಿಕ ಅತಿಥಿ ಉಪನ್ಯಾಸಕರು ಹಲವಾರು ವರ್ಷಗಳಿಂದ ಅತ್ಯಂತ ಕಡಿಮೆ ಗೌರವ ಭತ್ಯೆ ಪಡೆದು ಸೇವೆ ಸಲ್ಲಿಸುತ್ತಿದ್ದಾರೆ. ಅದರಲ್ಲಿ ಸಾವಿರಾರು ಜನರ ವಯೋಮಿತಿ ಮೀರುತ್ತಿದೆ. ಅಲ್ಲದೇ ಸುಮಾರು 84 ಜನ ಕೊರೊನಾ ಮತ್ತು ಇನ್ನಿತರ ಕಾರಣಗಳಿಂದ ಅಸುನೀಗಿದ್ದಾರೆ ಎಂದರು.

ಅತಿಥಿ ಉಪನ್ಯಾಸಕರು ಸಾಕಷ್ಟು ಪ್ರತಿಭಾವಂತರಿದ್ದಾರೆ. ಬೋಧನಾ ಕೌಶಲ್ಯ ಕೂಡ ಹೊಂದಿದ್ದಾರೆ. ತಮ್ಮ ಸಾಮರ್ಥ್ಯಕ್ಕೆ ತಕ್ಕ ಹಾಗೆ ಶೈಕ್ಷಣಿಕ ಚಟುವಟಿಕೆ ಪೂರ್ಣ ಪ್ರಮಾಣದಲ್ಲಿ ತೊಡಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ನೆಟ್‌ನಂತಹ ಪರೀಕ್ಷೆ ಪಾಸಾಗಿ ಬೋಧನೆ ಮಾಡುತ್ತಿರುವ ಅತಿಥಿ ಉಪನ್ಯಾಸಕರಿಗೆ ಕೇವಲ 11 ಸಾವಿರ ವೇತನ ಕೊಡಲಾಗುತ್ತಿದೆ. ಮನೆಗೆಲಸ ಮಾಡುವ ಕೆಲಸಗಾರರು ಇದಕ್ಕಿಂತ ಹೆಚ್ಚು ಸಂಬಳ ಪಡೆಯುತ್ತಾರೆ. ಇಂತಹ ಸಂಕಷ್ಟದ ದಿನಗಳಿದ್ದರೂ
ಸರ್ಕಾರ ನಮಗೆ ಸೇವಾ ಭದ್ರತೆ ಕೊಡುವುದಾಗಲಿ, ಕಳೆದ ಹಲವು ತಿಂಗಳಿಂದ ಕೊಡದ ವೇತನ ಕೊಡುವುದಾಗಲಿ ಮಾಡುತ್ತಿಲ್ಲ. ಬದಲಾಗಿ, ಸೇವೆಯಿಂದಲೇ ತೆಗೆಯುವ ಗೊಡ್ಡು ಬೆದರಿಕೆ ಹಾಕಲಾಗುತ್ತಿದೆ. ಇಂತಹ ಬೆದರಿಕೆಗೆ ನಾವು ಹೆದರುವುದಿಲ್ಲ ಎಂದು ಎಚ್ಚರಿಕೆ ನೀಡಿದರು.

ರಾಜ್ಯದ 440 ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಸುಮಾರು 7.30 ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಕಳೆದ 28 ದಿನಗಳಿಂದ ನಾವು ತರಗತಿ ಬಹಿಷ್ಕರಿಸಿ ಹೋರಾಟ ನಡೆಸುತ್ತಿದ್ದಾರೆ. ಇದರಿಂದ ವಿದ್ಯಾರ್ಥಿಗಳ ಕಲಿಕೆಗೆ ತೀವ್ರ ತೊಂದರೆ ಆಗಿದೆ. ಅವರೂ ಹಲವು ಬಾರಿ ಹೋರಾಟ ನಡೆಸಿದ್ದಾರೆ. ಸರ್ಕಾರ ಕಿವಿಗೊಡುತ್ತಿಲ್ಲ. ವಿಶ್ವ ವಿದ್ಯಾಲಯದಿಂದ ಪದವಿ ವಿದ್ಯಾರ್ಥಿಗಳ ಪರೀಕ್ಷೆ ವೇಳಾಪಟ್ಟಿ ಕೂಡ ಹೊರಡಿಸಿದೆ. ತರಗತಿಗಳು ನಡೆಯದೇ ವಿದ್ಯಾರ್ಥಿಗಳು ಪರೀಕ್ಷೆ ಬರೆಯುವುದು ಹೇಗೆ ಎಂಬ ಬಗ್ಗೆಯೂ ಸರ್ಕಾರ ಚಿಂತನೆ ಮಾಡುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

Advertisement

ರಾಜ್ಯದ 224 ಜನ ಶಾಸಕರೂ ಪ್ರತಿಯೊಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಆಡಳಿತ ಸುಧಾರಣಾ ಸಮಿತಿ ಅಧ್ಯಕ್ಷರಾಗಿರುತ್ತಾರೆ. ಅದೇ ಶಾಸಕರ ಒಂದು ತಿಂಗಳ ಪ್ರಯಾಣ ಭತ್ಯೆಗಿಂತ ಕಡಿಮೆ ವೇತನ ಪಡೆಯುವ ಅತಿಥಿ ಉಪನ್ಯಾಸಕರ ಬಗ್ಗೆ ಚಿಂತನೆ ಮಾಡುತ್ತಿಲ್ಲ. ಈ ವರೆಗೆ ಒಬ್ಬ ಶಾಸಕರೂ ಕಾಲೇಜುಗಳಿಗೆ ಭೇಟಿ ನೀಡಿ ವಿದ್ಯಾರ್ಥಿಗಳ ಸಮಸ್ಯೆ ಅರಿತಿಲ್ಲ. ಅಲ್ಲದೇ ಯಾವುದೇ ಮುಂಜಾಗೃತೆ ಇಲ್ಲದೇ, ಪಠ್ಯಕ್ರಮವೂ ಇಲ್ಲದೇ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೊಳಿಸಲಾಗಿದೆ. ಇದು ವಿದ್ಯಾರ್ಥಿಗಳಿಗೆ-ಬೋಧಕರಿಗೂ ಸಮಸ್ಯೆಯಾಗಿದೆ ಎಂದರು.

ಅತಿಥಿ ಉಪನ್ಯಾಸಕರ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿ ಮಾತನಾಡಿದ ಕರವೇ ಜಿಲ್ಲಾ ಅಧ್ಯಕ್ಷ ರಮೇಶ ಬದೂ°ರ, ಇದು ಕೇವಲ ಅತಿಥಿ ಉಪನ್ಯಾಸಕರ ಸ್ವಾರ್ಥಕ್ಕಾಗಿ ನಡೆದ ಹೋರಾಟವಲ್ಲ. ರಾಜ್ಯದ 7.30 ಲಕ್ಷ ವಿದ್ಯಾರ್ಥಿಗಳ ಭವಿಷ್ಯವೂ ಅಡಗಿದೆ. ಕೇಂದ್ರ ಸರ್ಕಾರದ ಯುಜಿಸಿ ನಿಯಮಾವಳಿ ಪ್ರಕಾರ, ಅತಿಥಿ ಉಪನ್ಯಾಸಕರಿಗೆ ಒಂದು ತರಗತಿಗೆ ರೂ. 1500 ದಂತೆ ವಾರಕ್ಕೆ 8 ತರಗತಿ ಬೋಧನೆಗೆ ನೀಡಿ, ಮಾಸಿಕ 50 ಸಾವಿರ ವೇತನ ಕೊಡಬೇಕು. ಆದರೆ, 11 ಸಾವಿರ ವೇತನ ನೀಡಿ, ತನ್ನದೇ ನಿಯಮವನ್ನೂ ಸರ್ಕಾರ ಉಲ್ಲಂಘಿಸುತ್ತಿದೆ ಎಂದು ಆರೋಪಿಸಿದರು.

ಸರ್ಕಾರ ಅತಿಥಿ ಉಪನ್ಯಾಸಕರ ಹೋರಾಟಕ್ಕೆ ಕರವೇ ಸಂಪೂರ್ಣ ಬೆಂಬಲ ಕೊಡಲಿದೆ. ಅಲ್ಲದೇ ಸರ್ಕಾರ ಈವರೆಗೆ ರಾಜಕೀಯ ಸಮಾವೇಶ ಮಾಡುವಾಗ ಇಲ್ಲದ ಕೊರೊನಾ ನಿಯಮ ಈಗ ಜಾರಿಗೊಳಿಸಿದೆ. ಇಂತಹ ಪರೋಕ್ಷ ಬೆದರಿಕೆಗೆ ಯಾರೂ ಬಗ್ಗುವುದಿಲ್ಲ ಎಂದರು. ಸಂಘಟನೆಯ ಬಸವರಾಜ ಮನಿಗಾರ, ಕಲಾವತಿ ಗುರವ, ಶಶಿಧರ ಪೂಜಾರಿ, ಚಂದ್ರಶೇಖರ ಕಾಳನ್ನವರ, ಶಶಿಕಲಾ ಜೋಳದ, ಪಾಂಡರಂಗ ಜಾಧವ, ವಿಜಯಕುಮಾರ ಗಂಗಲ, ರಾಜೇಶ್ವರಿ
ಶೀಲವಂತ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next