Advertisement

Guest Lecture: ಸೆಮಿಸ್ಟರ್‌ ಮುಗಿದು ತಿಂಗಳು ಮೂರಾದರೂ ವೇತನವಿಲ್ಲ

12:10 AM Sep 03, 2023 | Team Udayavani |

ಮಂಗಳೂರು: ರಾಜ್ಯದ ಸರಕಾರಿ ಪಾಲಿಟೆಕ್ನಿಕ್‌ ಮತ್ತು ಸರಕಾರಿ ಎಂಜಿನಿಯರಿಂಗ್‌ ಕಾಲೇಜುಗಳ ಸುಮಾರು 1,600ರಷ್ಟು ಅತಿಥಿ ಉಪ ನ್ಯಾಸಕರಿಗೆ ಸರಕಾರದ ವಿಳಂಬ ಧೋರಣೆಯಿಂದಾಗಿ ಕಳೆದ ಸೆಮಿಸ್ಟರ್‌ನ ವೇತನ ಇನ್ನೂ ಪಾವತಿಯಾಗಿಲ್ಲ.

Advertisement

ತಿಂಗಳು ಮೂರಾದರೂ ವೇತನವಿಲ್ಲ

ಫೆ. 27ರಿಂದ ಜೂ. 17ರ ವರೆಗಿನ 2, 4, 6ನೇ ಸೆಮಿಸ್ಟರ್‌ಗಳಿಗೆ ಸಂಬಂಧಿಸಿದ ವೇತನ ಬಿಡುಗಡೆಯಾಗಲು ಬಾಕಿ ಇದೆ. ಇದರಿಂದಾಗಿ ಅಲ್ಲಲ್ಲಿ ಕೈಸಾಲ ಮಾಡಿ ಸೋತು ಹೋಗಿದ್ದೇವೆ. ಬ್ಯಾಂಕ್‌ ಖಾತೆಯಲ್ಲಿ ಕನಿಷ್ಠ ಬ್ಯಾಲೆನ್ಸ್‌ ಕೂಡ ಉಳಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಮನೆಯವರ ಆವಶ್ಯಕತೆಗಳನ್ನು ಪೂರೈಸಲು ಸಾಧ್ಯವಾಗದ ಪರಿಸ್ಥಿತಿಗೆ ತಲುಪಿದ್ದೇವೆ ಎಂದು “ಉದಯವಾಣಿ’ ಜತೆ ತಮ್ಮ ಅಳಲು ತೋಡಿಕೊಂಡಿದ್ದಾರೆ.

ಮನವಿಗೂ ಸ್ಪಂದನೆ ಇಲ್ಲ
ಶೀಘ್ರ ವೇತನ ಪಾವತಿ ಮಾಡುವಂತೆ ಆಗ್ರಹಿಸಿ ಉನ್ನತ ಶಿಕ್ಷಣ ಸಚಿವ ಡಾಣ ಎಂ.ಸಿ. ಸುಧಾಕರ್‌ ಅವರನ್ನು ಭೇಟಿ ಮಾಡಿ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಜುಲೈ ತಿಂಗಳಿನಲ್ಲಿ ನಡೆದ ವಿಧಾನ ಮಂಡಲ ಅಧಿವೇಶನ ಸಂದರ್ಭದಲ್ಲಿ ಸಚಿವರನ್ನು ಭೇಟಿ ಮಾಡಿದಾಗ ಸಂಬಂಧಪಟ್ಟ ಅಧಿಕಾರಿಗಳನ್ನು ಕರೆಸಿ ವೇತನ ಬಿಡುಗಡೆಗೆ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದರು. ಸಚಿವರನ್ನು ಭೇಟಿಯಾಗಿ ಒಂದೂವರೆ ತಿಂಗಳು ಕಳೆದರೂ ಪಾವತಿಯಾಗಿಲ್ಲ. ವಿಧಾನ ಸಭಾಧ್ಯಕ್ಷ ಯು.ಟಿ. ಖಾದರ್‌, ಪರಿಷತ್‌ ಸದಸ್ಯರಾದ ಹರೀಶ್‌ ಕುಮಾರ್‌, ಮರಿತಿಬ್ಬೇಗೌಡ, ಎಸ್‌.ವಿ. ಸಂಕನೂರು ಮೊದಲಾದವರಿಗೂ ಮನವಿ ಮಾಡಲಾಗಿದೆ ಎಂದು ಸಂಘದ ಅಧ್ಯಕ್ಷ ಪ್ರಶಾಂತ್‌ ಅವರು ತಿಳಿಸಿದ್ದಾರೆ.

ಹುದ್ದೆ ಮಂಜೂರಾತಿ ಆಗಿಲ್ಲ!
ಇನ್ನೊಂದು ವಿಶೇಷವೆಂದರೆ, ಈ ಅತಿಥಿ ಉಪನ್ಯಾಸಕರು ಕಳೆದ ಸೆಮಿಸ್ಟರ್‌ನಲ್ಲಿ ಕೆಲಸ ಮಾಡಿರುವುದಕ್ಕೆ ಸಂಬಂಧಿಸಿ ಇಲಾಖೆಯಿಂದ ಹುದ್ದೆ ಮಂಜೂರಾತಿ ಆಗಿಲ್ಲ. ನೇಮಕಾತಿ ಪತ್ರವಾಗಲಿ, ಕಾಲೇಜಿನಲ್ಲಿ ಕೆಲಸ ಮಾಡಿರುವುದರಕ್ಕೆ ಹಾಜರಾತಿ ಪುಸ್ತಕವಾಗಲೀ ಇಲ್ಲ. ಎಐಸಿಟಿಇ ವೆಬ್‌ಸೈಟ್‌ನಲ್ಲಿ
ಮತ್ತು ವಿದ್ಯಾರ್ಥಿಗಳ ಹಾಜರಾತಿ ಪುಸ್ತಕ ಮಾತ್ರ ದಾಖಲೆ.
ಈ ನಡುವೆ ಮತ್ತೂಂದು ಸೆಮಿಸ್ಟರ್‌ಗೆ ನೇಮಕಾತಿ ಪ್ರಕ್ರಿಯೆ ನಡೆಯುತ್ತಿದ್ದು, ತರಗತಿಗಳು ಈಗಾಗಲೇ ಆರಂಭವಾಗಿವೆ.

Advertisement

ವೇತನ ವೇದನೆ
ಉನ್ನತ ಶಿಕ್ಷಣ ಇಲಾಖೆಯ ವ್ಯಾಪ್ತಿಯಲ್ಲೇ ಬರುವ ಸರಕಾರಿ ಪದವಿ ಕಾಲೇಜು ಅತಿಥಿ ಉಪನ್ಯಾಸಕರು ಹಾಗೂ ಸರಕಾರಿ ಪಾಲಿಟೆಕ್ನಿಕ್‌ ಮತ್ತು ಸರಕಾರಿ ಎಂಜಿನಿಯರಿಂಗ್‌ ಕಾಲೇಜು ಅತಿಥಿ ಉಪನ್ಯಾಸಕರ ನಡುವೆ ಸರಕಾರ ಮಲತಾಯಿ ಧೋರಣೆ ಅನುಸರಿಸುತ್ತಿರುವುದು ಈ ಕೆಳಗಿನ ಅಂಕಿಅಂಶಗಳಿಂದ ಸ್ಪಷ್ಟವಾಗುತ್ತದೆ.
ರಾಜ್ಯದಲ್ಲಿರುವ ಸರಕಾರಿ ಪಾಲಿಟೆಕ್ನಿಕ್‌ಗಳು: 117
ಸರಕಾರಿ ಎಂಜಿನಿಯರಿಂಗ್‌ ಕಾಲೇಜುಗಳು: 13
ಇರುವ ಅತಿಥಿ ಉಪನ್ಯಾಸಕರು: 1,600+
ಸರಕಾರಿ ಪದವಿ ಕಾಲೇಜು ಅತಿಥಿ ಉಪನ್ಯಾಸಕರ ಕಾರ್ಯಭಾರ: ವರ್ಷಕ್ಕೆ 10 ತಿಂಗಳು
ವೇತನ: ಮಾಸಿಕ 28 ಸಾವಿರ ರೂ. (ಇತ್ತೀಚೆಗಿನ ಪರಿಷ್ಕರಣೆಯ ಬಳಿಕ)
ಪಾಲಿಟೆಕ್ನಿಕ್‌/ಎಂಜಿನಿಯರಿಂಗ್‌ ಕಾಲೇಜು ಅತಿಥಿ ಉಪನ್ಯಾಸಕರ ಕಾರ್ಯಭಾರ: ವರ್ಷಕ್ಕೆ ಏಳೂವರೆ ತಿಂಗಳು
ವೇತನ: 12,500 ರೂ. (14 ವರ್ಷಗಳಲ್ಲಿ ಕೇವಲ ಒಂದು ಬಾರಿ ಮಾತ್ರ ಪರಿಷ್ಕರಣೆ)

ವೇತನ ಬಿಡುಗಡೆ ವಿಳಂಬವಾಗಿರುವ ಕಾರಣ ರಾಜ್ಯದಲ್ಲಿ ಸಾವಿರಾರು ಅತಿಥಿ ಶಿಕ್ಷಕರು ಸಂಕಷ್ಟ ಪಡುವಂತಾಗಿದೆ. ಈ ಬಗ್ಗೆ ಉನ್ನತ ಶಿಕ್ಷಣ ಸಚಿವರಾದಿಯಾಗಿ ಎಲ್ಲರಿಗೂ ಮನವಿ ಸಲ್ಲಿಸಲಾಗಿದೆ. ಶೀಘ್ರ ವೇತನ ಬಿಡುಗಡೆಗೆ ಕ್ರಮ ಕೈಗೊಳ್ಳಬೇಕು.
  ಪ್ರಶಾಂತ್‌ ಅಧ್ಯಕ್ಷರು, ಅಖೀಲ ಕರ್ನಾಟಕ ಸರಕಾರಿ ಪಾಲಿಟೆಕ್ನಿಕ್‌ ಅರೆಕಾಲಿಕ ಉಪನ್ಯಾಸಕರ ಸಂಘ

ಪಾಲಿಟೆಕ್ನಿಕ್‌ ಅತಿಥಿ
ಉಪನ್ಯಾಸಕರ ವೇತನ ಬಿಡುಗಡೆಗೆ ಕ್ರಮ ಕೈಗೊಳ್ಳುವಂತೆ ಈಗಾಗಲೇ ಅಧಿಕಾರಿ ಗಳಿಗೆ ಸೂಚನೆ ನೀಡಿದ್ದೇನೆ. ಮತ್ತೂಮ್ಮೆ ಪರಿಶೀಲಿಸಿ, ವೇತನ ಬಿಡುಗಡೆ ಸಂಬಂಧ ಸೂಕ್ತ ಕ್ರಮ ಕೈಗೊಳ್ಳುತ್ತೇನೆ. ವರ್ಷದಲ್ಲಿ ಹತ್ತು ತಿಂಗಳು ಕೆಲಸ ನೀಡಬೇಕು ಎನ್ನುವ ಬೇಡಿಕೆ ಇದ್ದು, ಸಾಧ್ಯತೆಗಳ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ.
-ಡಾ| ಎಂ.ಸಿ. ಸುಧಾಕರ್‌, ಉನ್ನತ ಶಿಕ್ಷಣ ಸಚಿವರು

  ಭರತ್‌ ಶೆಟ್ಟಿಗಾರ್‌

Advertisement

Udayavani is now on Telegram. Click here to join our channel and stay updated with the latest news.

Next