Advertisement

ಇದು ರಾಮ ಮಂದಿರ: ಗುಡಿಗಾರರು ನಿರ್ಮಿಸಿದ ಗುಡಿಯ ಕಥೆ

10:53 AM Jul 08, 2017 | |

ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕು ಕೇಂದ್ರದಿಂದ ಜಗತøಸಿದ್ಧ ಜೋಗ ಜಲಪಾತದ ಕಡೆ ಸಾಗುವ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಶ್ರೀರಾಮ ಮಂದಿರ, ಅತ್ಯಾಕರ್ಷಕ ಕಟ್ಟಡ ಹೊಂದಿದ್ದು ಸದಾ ಭಕ್ತರನ್ನು ಸೆಳೆಯುತ್ತಿದೆ.

Advertisement

  ಆರಂಭದಲ್ಲಿ ಭಜನೆ ನಡೆಸುವ ಸ್ಥಳವಾಗಿ ಗುರುತಿಸಿಕೊಂಡಿದ್ದ ಈ ಸ್ಥಳ ಇದೀಗ ಶಾಶ್ವತ ದೇವಾಲಯವಾಗಿ ಮಾರ್ಪಟ್ಟು ಸಾಗರ ಪಟ್ಟಣದ ಪ್ರಮುಖ ದೇವಾಲಯಗಳಲ್ಲಿ ಒಂದಾಗಿದೆ.  

ಶ್ರೀಗಂಧದ ಕೆತ್ತನೆ, ಮರದ ಕುಸುರಿ ಕೆಲಸ ಇತ್ಯಾದಿ ಪಾರಂಪರಿಕ ಕಸುಬು  ನಡೆಸುವ ಗುಡಿಗಾರ ಸಮಾಜದವರು ನಿರ್ಮಿಸಿದ ದೇವಾಲಯ ಇದಾಗಿತ್ತು. ಈ ದೇವಾಲಯ ನಿರ್ಮಾಣವಾಗುವುದಕ್ಕಿಂತ ಮೊದಲು ಸಾಗರದ ಗುಡಿಗಾರರು ವಿಶೇಷ ಹಬ್ಬ ಮತ್ತು ಕುಟುಂಬದ ಮಂಗಳ ಕಾರ್ಯಗಳ ಆರಂಭದಲ್ಲಿ ಶ್ರೀರಾಮ ದೇವರಿಗೆ ಪೂಜೆ, ಹರಕೆ ಸಮರ್ಪಿಸಲು ಪಕ್ಕದ ತಾಲೂಕಾದ ಸೊರಬದ ಪಟ್ಟಣ ಪ್ರದೇಶದಲ್ಲಿರುವ ಶ್ರೀರಾಮ ದೇವಾಲಯಕ್ಕೆ ಹೋಗಿ ಬರುತ್ತಿದ್ದರು.

1962 ರ ಸುಮಾರಿನಲ್ಲಿ ಸಾಗರದಲ್ಲಿ ಸಹ ರಾಮ ದೇವರ ಆರಾಧನೆ ಮತ್ತು ಭಜನೆ ನಡೆಸಲು ನಿರ್ಧರಿಸಿ ಈ ಸ್ಥಳ ಗುರುತಿಸಿಕೊಂಡರು. ಎತ್ತರವಾದ ಕಟ್ಟೆ ನಿರ್ಮಿಸಿ ರಾಮ ದೇವರ ಭಾವಚಿತ್ರವನ್ನಿರಿಸಿ ಭಜನೆ ಮತ್ತು ಪೂಜೆ ಆರಂಭಿಸಿದರು. ಇದೇ ಸ್ಥಳದಲ್ಲಿ ದೇವಾಲಯ ನಿರ್ಮಿಸಬೇಕೆಂದು ಸಂಕಲ್ಪಿಸಿ 1967ರ ನವೆಂಬರ್‌ನಲ್ಲಿ ಶೃಂಗೇರಿಯ ಅಂದಿನ ಜಗದ್ಗುರುಗಳಾಗಿದ್ದ ಶ್ರೀಅಭಿನವ ವಿದ್ಯಾಭಾರತಿ ಮಹಾಸ್ವಾಮಿಗಳಿಂದ ಶಿಲಾನ್ಯಾಸ ನಡೆಸಲಾಯಿತು. ದೇವಪ್ಪ ಗುಡಿಗಾರರ ಅಧ್ಯಕ್ಷತೆಯಲ್ಲಿ ದೇವಾಲಯ ನಿರ್ಮಾಣ ಸಮಿತಿ ರಚಿಸಲಾಯಿತು. ದಾನಿಗಳಿಂದ ದೇಣಿಗೆ ಸ್ವೀಕರಿಸಿ ಆಕರ್ಷಕ ದೇವಾಲಯ ನಿರ್ಮಿಸಲಾಯಿತು. ಕೆ.ಜಿ.ಶಾಂತಪ್ಪ ಗುಡಿಗಾರ ಎಂಬವರು ಆಕರ್ಷಕ ಶಿಲಾ ಮೂರ್ತಿಯ ಕೆತ್ತನೆ ಮಾಡಿ ಸಮರ್ಪಿಸಿದರು. 

ಬಹುತೇಕ ರಾಮ ದೇವಾಲಯಗಳಲ್ಲಿ ಕೋದಂಡ ರಾಮನ ವಿಗ್ರಹ ಇರುವುದು ವಾಡಿಕೆ. ಆದರೆ ಈ ದೇವಾಲಯದಲ್ಲಿ ಸೀತಾ,ಲಕ್ಷ್ಮಣ,ಆಂಜನೇಯ ಸಹಿತ ಪಟ್ಟಾಭಿರಾಮನ ಮೂರ್ತಿಯ ಕೆತ್ತನೆ ಮಾಡಲಾಗಿದೆ.

Advertisement

1989ರ ಜುಲೈ ತಿಂಗಳಿನಲ್ಲಿ  ಶೃಂಗೇರಿಯ ಜಗದ್ಗುರುಗಳಾದ ಶ್ರೀಭಾರತೀ ತೀರ್ಥ ಮಹಾಸ್ವಾಮಿಗಳ ಅಮೃತ ಹಸ್ತದಿಂದ ನೂತನ ದೇವಾಲಯದ ಲೋಕಾರ್ಪಣೆ ಮತ್ತು ಶಿಲಾ ಮೂರ್ತಿಯ ಪ್ರತಿಷ್ಠಾಪನಾ ಮಹೋತ್ಸವ ವೈಭವದಿಂದ ನಡೆಯಿತು. ಪ್ರತಿಷ್ಠಾಪನೆಗಿಂತ ಮೊದಲು ದೇವರ ಮೂರ್ತಿಯನ್ನು ಆನೆಯ ಮೇಲೆ ಅಂಬಾರಿಯಲ್ಲಿಟ್ಟು ನಗರದ ಪ್ರಮುಖ ರಸ್ತೆಯಲ್ಲಿ ಮೆರವಣಿಗೆ ನಡೆಸಲಾಗಿತ್ತು.

  ದೇವಾಲಯದಲ್ಲಿ ಪ್ರತಿನಿತ್ಯ ತ್ರಿಕಾಲ ಪೂಜೆ ನಡೆಯುತ್ತದೆ. ಪ್ರತಿ ಶನಿವಾರ ಸಂಜೆ ಭಜನೆ ನಡೆಸಲಾಗುತ್ತದೆ. ಚೈತ್ರ ಶುದ್ಧ ಪಾಡ್ಯದಿಂದ ನವಮಿ ವರೆಗೆ ಉತ್ಸವ ನಡೆಯುತ್ತದೆ. ನವಮಿಯಂದು ರಾಮ ದೇವರ ಉತ್ಸವ ಮೂರ್ತಿಯ ರಾಜಬೀದಿ ಉತ್ಸವ ನಡೆಯುತ್ತದೆ. ದಶಮಿಯಂದು ರಾಮತಾರಕ ಹೋಮ ವೈಭವದಿಂದ ನಡೆಯುತ್ತದೆ.

ಶ್ರಾವಣಮಾಸದಲ್ಲಿ ನಿತ್ಯ ಬೆಳಗ್ಗೆ ಅಭಿಷೇಕ ಪೂಜೆ ಮತ್ತು ವಿಶೇಷ ಅಲಂಕಾರ ಪೂಜೆ ನಡೆಯುತ್ತದೆ.ದೀಪಾವಳಿ,ಯುಗಾದಿ,ಶಿವರಾತ್ರಿ ಮತ್ತಿತರ ಹಬ್ಬ ಹರಿದಿನಗಳಂದು ಗುಡಿಗಾರ ಸಮಾಜದ ಎಲ್ಲಾ ಕುಟುಂಬಸ್ಥರು ಮತ್ತು ಸಾಗರ ನಗರದ ವಿವಿಧ ಬೀದಿಯ ಭಕ್ತರು ಆಗಮಿಸಿ ಪೂಜೆ ಮತ್ತು ಹರಕೆ ಸಮರ್ಪಿಸುತ್ತಾರೆ. ಶತ್ರುಭಯ ನಿವರಣೆ, ಕೌಟುಂಬಿಕ ಶಾಂತಿ, ಉದ್ಯೋಗ ಪ್ರಾಪ್ತಿ, ಕಾರ್ಯದಲ್ಲಿ ಯಶಸ್ಸು ಇತ್ಯಾದಿಗಳನ್ನು ಪ್ರಾರ್ಥಿಸಿ ಭಕ್ತರು ಬಗೆ ಬಗೆಯ ಹರಕೆ ಹೊತ್ತು ಇಲ್ಲಿಗೆ ಆಗಮಿಸುತ್ತಾರೆ.

ಫೋಟೋ ಮತ್ತು ಲೇಖನ-ಎನ್‌.ಡಿ.ಹೆಗಡೆ ಆನಂದಪುರಂ 

Advertisement

Udayavani is now on Telegram. Click here to join our channel and stay updated with the latest news.

Next