Advertisement

ನಾಯಿ, ಕೋತಿಗಳ ಕಾಟಕ್ಕೆ ಬೇಸತ್ತ ಗುಡಿಬಂಡೆ ಜನ!

03:52 PM Jul 16, 2023 | Team Udayavani |

ಗುಡಿಬಂಡೆ: ಪಟ್ಟಣದಲ್ಲಿ ಇತ್ತೀಚೆಗೆ ಬೀದಿ ನಾಯಿಗಳು ಮತ್ತು ಕೋತಿಗಳ ಹಾವಳಿ ಹೆಚ್ಚಾಗಿದ್ದು ಮಹಿಳೆಯರು, ಮಕ್ಕಳು, ವೃದ್ಧರು ಮನೆಯಿಂದ ಹೊರಬರಲು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಇದರಿಂದಾಗಿ ಪಪಂ ಅಧಿಕಾರಿಗಳ ವಿರುದ್ಧ ನಾಗರಿಕರು ನಿತ್ಯ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

Advertisement

ಮನೆಯ ಕಿಟಕಿ, ಮುಖ್ಯ ಬಾಗಿಲು, ಕಾರಿಡಾರ್‌, ಮಾಳಿಗೆ ಮೇಲಿನ ಗವಾಕ್ಷಿ ಮೂಲಕ ಮನೆಯೊಳಗೆ ನುಗ್ಗುತ್ತಿರುವ ಕೋತಿಗಳು, ಮನೆಯವರನ್ನೇ ಹೆದರಿಸಿ ಆಹಾರ ಪದಾರ್ಥವನ್ನು ಎತ್ತಿಕೊಂಡು ಪರಾರಿಯಾಗು ತ್ತಿವೆ. ಅಲ್ಲದೇ, ತರಕಾರಿ, ವಸ್ತುಗಳನ್ನು ಚೆಲ್ಲಾಪಿಲ್ಲಿ ಮಾಡುತ್ತಿವೆ. ಓಡಿಸಲು ಮುಂದಾದರೆ ಮನೆಯವರ ಮೇಲೆಯೇ ಎರಗುತ್ತಿವೆ.

ಅಪಘಾತ: ಕೋತಿಗಳ ಜತೆಯಲ್ಲಿಯೇ ಬೀದಿ ನಾಯಿಗಳ ಹಾವಳಿಯೂ ಪಟ್ಟಣದಲ್ಲಿ ಹೆಚ್ಚಾಗಿದೆ. ಅಂಗಡಿಯಿಂದ ಪಡಿತರ, ಆಹಾರ ಪದಾರ್ಥಗಳನ್ನು ತೆಗೆದುಕೊಂಡು ಹೋಗುವಾಗ ಏಕಾಏಕಿ ದಾಳಿ ನಡೆಸಿ ಕೈಯಲ್ಲಿದ್ದ ವಸ್ತುಗಳನ್ನು ಕಿತ್ತುಕೊಂಡು ಹೋಗುತ್ತಿವೆ.

ಅಲ್ಲದೇ ರಸ್ತೆಯುದ್ದಗಲಕ್ಕೂ ಮಲಗುವ ನಾಯಿಗಳು ವಾಹನ ಸವಾರರ ಮೇಲೆ ದಿಢೀರ್‌ ದಾಳಿ ಮಾಡುವುದಲ್ಲದೇ, ಬೆನ್ನಟ್ಟುತ್ತಿವೆ. ಇದರಿಂದಾಗಿ ಸವಾರರು ಹೆದರಿ ವಾಹನಗಳ ಅಪಘಾತಕ್ಕೆ ಕಾರಣವಾಗುತ್ತಿದೆ. ಇನ್ನು ಪಕ್ಕದಲ್ಲೇ ಬಸ್‌ ನಿಲ್ದಾಣವಿದ್ದು ಪ್ರಯಾಣಿಕರಿಗೂ ಕಿರಿಕಿರಿಯನ್ನುಂಟು ಮಾಡುತ್ತಿವೆ.

ಕಣ್ಣು ಮುಚ್ಚಿ ಕುಳಿತ ಅಧಿಕಾರಿಗಳು: ದಾಳಿ ಮಾಡುತ್ತಿರುವ ಘಟನೆಗಳ ಬಗ್ಗೆ ಪಪಂ ಮುಖ್ಯಾಧಿಕಾರಿಗಳ ಗಮನಕ್ಕೆ ಸಾರ್ವಜನಿಕರು ತಂದರೂ ಅವರು ತಮಗೇನು ಆಗಿಲ್ಲವೇನೋ ಎಂಬ ರೀತಿಯಲ್ಲಿ ಕಣ್ಮುಚ್ಚಿ ಕುಳಿತಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣ ವಾಗಿದೆ. ಆದಷ್ಟು ಬೇಗ ಪಪಂ ಅಧಿಕಾರಿಗಳು ಬೀದಿ ನಾಯಿಗಳು, ಕೋತಿಗಳ ಹಾವಳಿ ತಡೆಗೆ ಮುಂದಾಗಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

Advertisement

ವೃದ್ಧರು, ವಿದ್ಯಾರ್ಥಿಗಳ ಮೇಲೆ ದಾಳಿ: ಪಟ್ಟಣದಲ್ಲಿ ನಾಯಿಗಳು, ಕೋತಿಗಳ ಉಪಟಳ ಜಾಸ್ತಿಯಾಗಿದ್ದು ವಿದ್ಯಾರ್ಥಿಗಳು ತಿಂಡಿ, ತಿನುಸು ಬ್ಯಾಗ್‌ಗಳನ್ನು ಕೈಯಲ್ಲಿ ಹಿಡಿದುಕೊಂಡು ಶಾಲಾ, ಕಾಲೇಜಿಗೆ ಹೋಗುವಾಗ ಅವರ ಮೇಲೆ ದಾಳಿ ಮಾಡಿ, ಕಚ್ಚಿ ಗಾಯಗೊಳಿಸಿ ಆಸ್ಪತ್ರೆ ದಾಖಲಾದ ಘಟನೆಗಳೂ ನಡೆದಿವೆ. ಅಲ್ಲದೇ, ಭಯಪಟ್ಟ ವೃದ್ಧರು ಕೆಳಗೆ ಬಿದ್ದು ಗಾಯ ಮಾಡಿಕೊಂಡಿರುವ ನಿದರ್ಶನಗಳೂ ಇವೆ.

‌ಪಟ್ಟಣದಲ್ಲಿ ಬೀದಿ ನಾಯಿ, ಕೋತಿಗಳ ಹಾವಳಿ ಜಾಸ್ತಿಯಾಗಿದ್ದು, ಮನೆಯಿಂದ ಹೊರಬಾರದ ಪರಿಸ್ಥಿತಿ ನಿರ್ಮಾಣವಾಗಿದೆ. ಪಪಂ ಅಧಿಕಾರಿಗಳು ಸೂಕ್ತ ಕ್ರಮಕೈಗೊಂಡು ಸ್ಥಳಾಂತರಿಸಲು ಮುಂದಾಗಬೇಕು. ● ನಾರಾಯಣಸ್ವಾಮಿ, ಗುಡಿಬಂಡೆ ನಿವಾಸಿ

ಗುಡಿಬಂಡೆ ಪಟ್ಟಣದಲ್ಲಿ ಬೀದಿ ನಾಯಿ, ಕೋತಿಗಳ ಹಾವಳಿ ಜಾಸ್ತಿಯಾಗಿರುವ ಬಗ್ಗೆ ದೂರು ಬಂದಿವೆ. ಅವುಗಳ ನಿಯಂತ್ರಣಕ್ಕೆ ಕ್ರಮ ತೆಗೆದುಕೊಳ್ಳಲಾಗುವುದು. ● ಸಬಾಶಿರಿನ್‌, ಮುಖ್ಯಾಧಿಕಾರಿ

Advertisement

Udayavani is now on Telegram. Click here to join our channel and stay updated with the latest news.

Next