ಮುಂಡಗೋಡ: ತಾಲೂಕಿನ ವಿವಿಧ ಅಭಿವೈದ್ಧಿ ಕಾಮಗಾರಿಗೆ ಸಿಎಂ ಯಡಿಯೂರಪ್ಪನವರು ಕೊಟ್ಯಾಂತರ ರೂ. ಅನುದಾನ ನೀಡಿದ್ದು ಮುಂದಿನ ದಿನದಲ್ಲಿ ಮತ್ತಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡುವ ಮೂಲಕ ಮಾದರಿ ಕ್ಷೇತ್ರವನ್ನಾಗಿ ಮಾಡೋಣ ಎಂದು ಶಾಸಕ ಶಿವರಾಮ ಹೆಬ್ಟಾರ್ ಹೇಳಿದರು.
ತಾಲೂಕಿನ ವಿವಿಧ ಗ್ರಾಮಗಳಲ್ಲಿ ಅಭಿವೃದ್ಧಿ ಕಾಮಗಾರಿಗೆ ಶಿಲಾನ್ಯಾಸ ಹಾಗೂ ಮುಕ್ತಾಯಗೊಂಡ ಕಾಮಗಾರಿ ಉದ್ಘಾಟಿಸಿದರು. ಗುಂಜಾವತಿ ಗ್ರಾಪಂ ವ್ಯಾಪ್ತಿಯ ಬಸನಾಳ ಗ್ರಾಮದಲ್ಲಿ ಮಾತನಾಡಿದ ಅವರು, ಚುನಾವಣೆಗೂ ಮುನ್ನ ನಾವು ಕೊಟ್ಟ ಮಾತಿನಂತೆ ಅಭಿವೃದ್ಧಿ ಕೆಲಸಗಳನ್ನು ಮಾಡುತ್ತಿದ್ದು ಮುಂದಿನ ದಿನಗಳಲ್ಲಿ ಮತ್ತಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡುತ್ತೇವೆ. ಎಲ್ಲರು ಒಂದಾಗಿ ಅಭಿವೃದ್ಧಿ ಕೆಲಸಗಳನ್ನು ಮಾಡೋಣ ಎಂದರು.
ವಾಯವ್ಯ ಸಾರಿಗೆ ಸಂಸ್ಥೆ ಅಧ್ಯಕ್ಷ ವಿ.ಎಸ್. ಪಾಟೀಲ ಮಾತನಾಡಿ, ರಾಜ್ಯ ಬಿಜೆಪಿ ಸರಕಾರದಿಂದ ಅಭಿವೃದ್ಧಿ ಕಾಮಗಾರಿಗಳಿಗೆ ಅನುದಾನ ಸಮರ್ಪಕವಾಗಿ ನೀಡುತ್ತಿದ್ದು ಚುನಾವಣೆಗೂ ಮುನ್ನ ಮತದಾರರಿಗೆ ಭರವಸೆ ಕೊಟ್ಟಂತೆ ನಾವು ಅಭಿವೃದ್ಧಿ ಕೆಲಸಗಳಿಗೆ ಚಾಲನೆ ನೀಡುತ್ತಿದ್ದೇವೆ. ಎಲ್ಲರು ಒಗ್ಗಟ್ಟಾಗಿ ಮತ್ತಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡೋಣ ಎಂದು ಹೇಳಿದರು.
ತಾಲೂಕಿನ ಮೈನಳ್ಳಿ, ಗುಂಜಾವತಿ, ನಂದಿಕಟ್ಟ, ಹುನಗುಂದ, ಬಾಚಣಕಿ, ಸಾಲಗಾಂವ, ಚಿಗಳ್ಳಿ, ಚವಡಳ್ಳಿ, ಗ್ರಾಪಂ ವ್ಯಾಪ್ತಿಯ ಹಾಗೂ ಮುಂಡಗೋಡ ಕಾಳಗನಕೊಪ್ಪ ಗ್ರಾಮಗಳಲ್ಲಿ 18ಕ್ಕೂ ಹೆಚ್ಚು ಅಭಿವೃದ್ಧಿ ಕಾಮಗಾರಿಗೆ ಅವರು ಚಾಲನೆ ನೀಡಿದರು.
ಗೌಳಿದಡ್ಡಿಗೆ ಹೆಚ್ಚು ಅನುದಾನ: ತಾಲೂಕಿನಲ್ಲಿರುವ ಗೌಳಿದಡ್ಡಿ ಗ್ರಾಮಗಳಿಗೆ ಸಿಮೆಂಟ್ ರಸ್ತೆ ಹಾಗೂ ಚರಂಡಿ ಹಾಗೂ ಡಾಂಬರ ರಸ್ತೆಗಳ ನಿರ್ಮಾಣಕ್ಕೆ ಹೆಚ್ಚಿನ ಅನುದಾನ ನೀಡಿದ್ದು ಮುಂದಿನ ದಿನಗಳಲ್ಲಿಯೂ ಗೌಳಿದಡ್ಡಿಗಳ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಲಾಗುವುದು ಎಂದು ಶಾಸಕ ಶಿವರಾಮ ಹೆಬ್ಟಾರ ತಿಳಿಸಿದರು.
ಜಿಪಂ ಸದಸ್ಯರಾದ ಎಲ್.ಟಿ. ಪಾಟೀಲ, ರವಿಗೌಡ ಪಾಟೀಲ, ಉಮೇಶ ಬಿಜಾಪುರ, ಗುಡ್ಡಪ್ಪ ಕಾತೂರ, ರಮೇಶ ರಾಯ್ಕರ, ಬಸಯ್ಯ ನಡವಿನಮನಿ, ಕೆಂಜೋಡಿ ಗಲಬಿ, ಬಸವರಾಜ ಹರಿಜನ, ಫಕ್ಕೀರಸ್ವಾಮಿ ಗುಲ್ಯಾನವರ, ಪ್ರಶಾಂತ ಲಮಾಣಿ ಸೇರಿದಂತೆ ಮುಂತಾದವರಿದ್ದರು.