ಬೆಂಗಳೂರು: ವಿಪಕ್ಷ ನಾಯಕ ಆರ್. ಅಶೋಕ್ ವಿರುದ್ಧ ಮತ್ತೆ ವ್ಯಂಗ್ಯಾಸ್ತ್ರ ಪ್ರಯೋಗ ಮಾಡಿರುವ ಸಿಎಂ ಸಿದ್ದರಾಮಯ್ಯ, ಅಶೋಕ್ ಆಗಾಗ ತಮ್ಮ ಅಜ್ಞಾನ ಪ್ರದರ್ಶನ ಮಾಡುತ್ತ ರಾಜ್ಯದ ಜನರಿಗೆ ಮನೋರಂಜನೆ ನೀಡುತ್ತಿರುತ್ತಾರೆ. ಗ್ಯಾರಂಟಿಗಳು ಕಾಂಗ್ರೆಸ್‌ಗೆ ಮತ ತಂದು ಕೊಟ್ಟಿಲ್ಲ ಎನ್ನುವುದು ಅವರ ಇತ್ತೀಚಿನ ಸಂಶೋಧನೆ ಎಂದು ಟೀಕಿಸಿದ್ದಾರೆ.
ಜತೆಗೆ ಗ್ಯಾರಂಟಿ ಯೋಜನೆಗಳು ಮುಂದುವರಿಯುತ್ತವೆ ಎಂದು ದೃಢವಾಗಿ ಹೇಳುವ ಮೂಲಕ ಎಲ್ಲ ಗೊಂದಲಗಳಿಗೆ ಅವರು ತೆರೆ ಎಳೆದಿದ್ದಾರೆ.
ಸಾಲ ಮಾಡಿ ಸಂಬಳ ಕೊಡುವ ದುಃಸ್ಥಿತಿಗೆ ನಮ್ಮ ಸರಕಾರ ತಲುಪಿಲ್ಲ. ನಿಮಗೆ ಬರುವ ಸಂಬಳದಲ್ಲಿ ಏನಾದರೂ ಹೆಚ್ಚು ಕಡಿಮೆ ಆಗಿದ್ದರೆ ನನ್ನ ಗಮನಕ್ಕೆ ತನ್ನಿ, ಅದನ್ನು ಸರಿಪಡಿಸುವ ಪ್ರಯತ್ನ ಮಾಡುತ್ತೇನೆ ಎಂದು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಡಿ.ಕೆ. ಸುರೇಶ್ ಅವರು ಸೋತಿದ್ದಾರೆ ಎನ್ನುವುದು ನಿಜ. ಆದರೆ ಬಳ್ಳಾರಿ, ಬೀದರ್, ಚಾಮರಾಜನಗರ, ಚಿಕ್ಕೋಡಿ, ದಾವಣಗೆರೆ, ಕಲಬುರಗಿ, ಮತ್ತು ರಾಯಚೂರುಗಳಲ್ಲಿ ಬಿಜೆಪಿ ಅಭ್ಯರ್ಥಿಗಳನ್ನು ನಮ್ಮ ಪಕ್ಷದ ಅಭ್ಯರ್ಥಿಗಳು ಸೋಲಿಸಿದ್ದಾರೆ ಎಂದು ಸಿಎಂ ಹೇಳಿದ್ದಾರೆ. ಹುಬ್ಬಳ್ಳಿಯ ಅಮಾಯಕ ಹೆಣ್ಣೊಬ್ಬಳ ಹತ್ಯೆಯನ್ನು ನಿಮ್ಮ ಪಕ್ಷ ರಾಜಕೀಯ ಲಾಭಕ್ಕಾಗಿ ಬಳಸಿಕೊಂಡ ಕಾರಣಕ್ಕಾಗಿ ನಮಗೆ ಆ ಭಾಗದಲ್ಲಿ ಹಿನ್ನಡೆಯಾಯಿತು. ಇಲ್ಲದೆ ಇದ್ದರೆ ನಿಮ್ಮ ಪಕ್ಷ ಒಂದಂಕಿಗೆ ಇಳಿಯುತ್ತಿತ್ತು. ನಿಮ್ಮ ದಿಲ್ಲಿ ನಾಯಕರ ರೀತಿಯಲ್ಲಿ ಸುಳ್ಳು ಸುದ್ದಿಗಳನ್ನು ಹರಡಬೇಡಿ ಎಂದು ಸಲಹೆ ನೀಡಿದ್ದಾರೆ.