ತೀರ್ಥಹಳ್ಳಿ : ಕಾಂಗ್ರೆಸ್ ಗ್ಯಾರೆಂಟಿಗಳು ಅನುಷ್ಠಾನ ಆಗುವುದಿಲ್ಲ. ಇವೆಲ್ಲವೂ ಸುಳ್ಳಿನ ಭರವಸೆ ಎಂದು ಕೆಲವರು ಹೇಳಿದ್ದರು. ಸುಳ್ಳು ಎಂದು ಹೇಳಿದವರು ಯಾರು ಈಗ ಮಾತನಾಡುತ್ತಿಲ್ಲ. ಅವರೇ ಈ ಯೋಜನೆಗಳನ್ನು ಪಡೆಯುತ್ತಿದ್ದಾರೆ. ಬಡವರ ಮನೆಯ ಹೆಣ್ಣುಮಕ್ಕಳಿಗೆ 35 ಸಾವಿರ ಕೋಟಿ ಹಣ ಇಂದು ಈ ಯೋಜನೆಯಲ್ಲಿ ಮಹಿಳೆಯರ ಬ್ಯಾಂಕ್ ಖಾತೆಗೆ ಜಮಾ ಆಗುತ್ತಿದೆ ಎಂದು ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಹೇಳಿದರು.
ಬುಧವಾರ ಪಟ್ಟಣದ ಗೋಪಾಲಗೌಡ ರಂಗಮಂದಿರದಲ್ಲಿ ಗೃಹಲಕ್ಷ್ಮಿಯೋಜನೆಗೆ ಚಾಲನೆ ನೀಡಿ ಮಾತನಾಡಿದ ಅವರು ಇದು ನಾಲ್ಕನೇ ಯೋಜನೆಯಾಗಿದೆ. ಇದಕ್ಕೂ ಮೊದಲು ಶಕ್ತಿ ಯೋಜನೆ, ಅನ್ನಭಾಗ್ಯ, ಗೃಹಜ್ಯೋತಿ ಯೋಜನೆಯಿಂದ ಜನರು ಸಂತೋಷ ಗೊಂಡಿದ್ದಾರೆ. ಅದರಲ್ಲೂ ಮಹಿಳೆಯರು ದೇವರ ದರ್ಶನ ಪಡೆಯಲಾಗದೆ ಮನೆಯಲ್ಲೇ ಇದ್ದರು ಅಂತಹ ಎಷ್ಟೋ ಮಹಿಳೆಯರು ಶಕ್ತಿ ಯೋಜನೆಯಲ್ಲಿ ದೇವರ ದರ್ಶನ ಪಡೆದಿದ್ದಾರೆ ಎಂದರು.
ಒಬ್ಬ ಬಡವನಿಗೆ ಬೇಕಾದ ಎಲ್ಲಾ ಸೌಲಭ್ಯಗಳನ್ನು ನೀಡಿದೆ. ಇನ್ನುಳಿದ ಆರೋಗ್ಯ ಹಾಗೂ ಶಿಕ್ಷಣಕ್ಕೂ ಕೂಡ ಮುಂದಿನ ದಿನಗಳಲ್ಲಿ ಸರ್ಕಾರ ಸೂಕ್ತ ವ್ಯವಸ್ಥೆ ಮಾಡಲಿದೆ. ಸರ್ಕಾರದ ಮೇಲೆ ನಿಮ್ಮೆಲ್ಲರ ಆಶೀರ್ವಾದ ಇರಲಿ. ಮುಂದೆ ದೇಶಾದ್ಯಂತ ಈ ರೀತಿಯ ಕಾರ್ಯಕ್ರಮ ಆಗುವ ರೀತಿ ನಮ್ಮ ಮುಖಂಡರಿಗೆ ಹೇಳುತ್ತೇವೆ ಎಂದರು.
ಡಿಸಿಸಿ ಬ್ಯಾಂಕ್ ಮಾಜಿ ಅಧ್ಯಕ್ಷರಾದ ಆರ್ ಎಂ ಮಂಜುನಾಥ್ ಗೌಡ ಮಾತನಾಡಿ ಕಾಂಗ್ರೆಸ್ ಸರ್ಕಾರ ಮಾಡಿದ್ದ ವಾಗ್ದಾನವನ್ನು ಉಳಿಸಿಕೊಂಡಿದೆ. ಮನೆಯ ಯಜಮಾನಿಗೆ ಕೊಡುವ ಈ ಗೃಹಲಕ್ಷ್ಮಿ ಯೋಜನೆ ಕಾರ್ಯಕ್ರಮ ಮಹಿಳೆಯರ ಬಾಳಲ್ಲಿ ಆಶಾ ಕಿರಣವಿದ್ದಂತೆ. ಈಗಾಗಲೇ ಮಾಡಿರುವ ಯೋಜನೆಗಳು ಯಶಸ್ವಿಗೊಂಡಿದೆ. ಇನ್ನೊಂದು ಯೋಜನೆಯೂ ಸದ್ಯದಲ್ಲೇ ಪ್ರಾರಂಭಗೊಳ್ಳಲಿದೆ ಎಂದರು.
ಪ. ಪಂ ಅಧ್ಯಕ್ಷೆ ಸುಶೀಲ ಶೆಟ್ಟಿ ಮಾತನಾಡಿ ಮಂಗಳವಾರ ಚಾಮುಂಡೇಶ್ವರಿ ದೇವಿಗೆ ನಮಸ್ಕರಿಸಿ ಗೃಹಲಕ್ಷ್ಮಿ ಯೋಜನೆಗೆ ಚಾಲನೆ ನೀಡಿದ್ದಾರೆ. ಹೆಣ್ಣುಮಗಳು ತನ್ನ ಕುಟುಂಬಕ್ಕಾಗಿ ಹಲವು ಹೋರಾಟ ಮಾಡುತ್ತಾಳೆ, ಆ ಹೆಣ್ಣಿಗೆ ಬೆಂಬಲ ನೀಡುವ ಸಲುವಾಗಿ ಸರ್ಕಾರ ಹಲವು ಯೋಜನೆಯನ್ನು ತಂದಿತ್ತು. ಶಕ್ತಿಯೋಜನೆ ಮೂಲಕ ಎಷ್ಟೋ ಮಹಿಳೆಯರು ಈ ಯೋಜನೆಯ ಮೂಲಕ ದೇವರ ದರ್ಶನ ಪಡೆದರು, ಉಚಿತ ವಿದ್ಯುತ್ ನಿಂದ ಎಷ್ಟೋ ಮನೆಗಳಲ್ಲಿ ದೀಪ ಬೆಳಗಿದೆ. ಈಗ ಗೃಹಲಕ್ಷ್ಮಿ ಯೋಜನೆಯಿಂದ ಮಹಿಳೆಯರಿಗೆ ದೊಡ್ಡ ಮಟ್ಟದಲ್ಲಿ ಅನುಕೂಲವಾಗಲಿದೆ ಎಂದರು.
ಈ ಸಂದರ್ಭದಲ್ಲಿ ಪ. ಪಂ ಉಪಾಧ್ಯಕ್ಷರಾದ ರೆಹಮಾತುಲ್ಲ ಅಸಾದಿ, ಸದಸ್ಯರಾದ ಮಂಜುಳಾ ನಾಗೇಂದ್ರ, ಶಬನಂ, ರತ್ನಾಕರ್ ಶೆಟ್ಟಿ, ಬಿ.ಗಣಪತಿ ಮುಖ್ಯಾಧಿಕಾರಿ ಕುರಿಯಾಕೋಸ್ ಸೇರಿ ಹಲವರು ಉಪಸ್ಥಿತರಿದ್ದರು.