ಚನ್ನಗಿರಿ: ಆಸ್ಪತ್ರೆಯಲ್ಲಿ ವೈದ್ಯರ ಕೊರತೆಯಿದೆ. ಸರ್ಜನ್ ರನ್ನು ಹುಡುಕಿಕೊಂಡು ಜಿಲ್ಲಾ ಕೇಂದ್ರಕ್ಕೆ ಅಲೆದಾಡುವ ಪರಿಸ್ಥಿತಿಯಿದೆ. ಆದ್ದರಿಂದ ತಾಲೂಕು ಕೇಂದ್ರದಲ್ಲಿಯೇ ಸರ್ಜನ್ ವೈದ್ಯರನ್ನು ನೇಮಿಸುವಂತೆ ಜಿಲ್ಲಾಧಿಕಾರಿ ಬಗಾದಿ ಗೌತಮ್ ಅವರಿಗೆ ಸಾರ್ವಜನಿಕರು ಮನವಿ ಮಾಡಿದರು.
ಗುರುವಾರ ಪಟ್ಟಣದ ಸಾರ್ವಜನಿಕರ ಆಸ್ಪತ್ರೆಗೆ ಜಿಲ್ಲಾಧಿಕಾರಿ ಬಗಾದಿ ಗೌತಮ್ ದಿಢೀರ್ ಭೇಟಿ ನೀಡಿದ ಸಂದರ್ಭದಲ್ಲಿ ಸಾರ್ವಜನಿಕರು ತಮಗೆ ಆಗುತ್ತಿರುವ ಸಮಸ್ಯೆಗಳನ್ನು ಜಿಲ್ಲಾಧಿಕಾರಿಗಳ ಬಳಿ ತೋಡಿಕೊಂಡರು. ಜಿಲ್ಲಾಧಿಕಾರಿ ಬಗಾದಿ ಗೌತಮ್, ಆಸ್ಪತ್ರೆಯಲ್ಲಿನ ಪ್ರತಿಯೊಂದು ವಾರ್ಡ್‌ಗೆ ತೆರಳಿ ರೋಗಿಗಳ ಆರೋಗ್ಯ ಹಾಗೂ ಆಸ್ಪತ್ರೆಯಲ್ಲಿನ ಸೌಲಭ್ಯ, ಸಮಸ್ಯೆಗಳ ಬಗ್ಗೆ ವಿಚಾರಿಸಿದರು.
ಈ ವೇಳೆ ಜಿಲ್ಲಾಧಿಕಾರಿ ಬಗಾದಿ ಗೌತಮ್ ಮಾತನಾಡಿ, ದಾವಣಗೆರೆ ಜಿಲ್ಲೆಗೆ ಜಿಲ್ಲಾಧಿಕಾರಿಯಾಗಿ ಆಗಮಿಸಿದ ನಂತರ ಪ್ರಥಮ ಬಾರಿಗೆ ಚನ್ನಗಿರಿ ಸಾರ್ವಜನಿಕರ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದೇನೆ. ಸದ್ಯಕ್ಕೆ ಆಸ್ಪತ್ರೆಯಲ್ಲಿ ಯಾವುದೇ ಸಮಸ್ಯೆಗಳು ಕಂಡು ಬಂದಿಲ್ಲ. ವೈದ್ಯರ ಕೊರತೆ ಬಗ್ಗೆ ಸಾರ್ವಜನಿಕರು ತಿಳಿಸಿದ್ದಾರೆ. ವೈದ್ಯರನ್ನು ನೇಮಿಸುವ ಕುರಿತು ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಚರ್ಚಿಸಲಾಗುವುದು ಎಂದರು.
ಶಾಂತಿಸಾಗರ (ಸೂಳೆಕೆರೆ) ಕೆರೆ ಒತ್ತುವರಿಯಾಗಿದೆ ಎಂದು ಸಾರ್ವಜನಿಕರು ಹೇಳುತ್ತಿದ್ದಾರೆ. ನಮ್ಮಲಿರುವಂತಹ ದಾಖಲೆಗಳ ಪ್ರಕಾರ ಒತ್ತುವರಿಯಾಗಿರುವುದು ಕಂಡುಬರುತ್ತಿಲ್ಲ, 1965ರಲ್ಲಿ ಸೂಳೆಕೆರೆಯ ಸರ್ವೇ ಆಗಿದ್ದು, ಕೆರೆಯ ವಿಸ್ತೀರ್ಣ 5447 ಎಕರೆ 10 ಗುಂಟೆ ಎಂದಿದೆ. ಕೆರೆ 2.6
ಟಿಎಂಸಿ ಅಡಿ ಸಾಮರ್ಥ್ಯ ಹೊಂದಿದೆ. ಸದ್ಯ ಕೆರೆಯಲ್ಲಿ 1.7 ಟಿಎಂಸಿ ನೀರು ಸಂಗ್ರಹವಾಗಿದೆ ಎಂದು ಮಾಹಿತಿ ನೀಡಿದರು.
ಕೆರೆ ಒತ್ತುವರಿಯಾಗಿರುವ ದಾಖಲಾತಿಗಳಿದ್ದವರು ನೀಡಿದರೆ ಪರಿಶೀಲನೆ ನಡೆಸುವುದಾಗಿ ತಿಳಿಸಿದರು. ವಾಟ್ಸ್ ಆ್ಯಪ್, ಫೇಸ್‌ಬುಕ್ ಮೊದಲಾದ ಸಾಮಾಜಿಕ ಜಾಲತಾಣಗಳಲ್ಲಿ ಕೆಲವರು ಸೂಳೆಕೆರೆಯ ವಿಸ್ತಿರ್ಣ 6500 ಎಕರೆ ಎಂದೂ ಹಾಗೂ 1500 ಎಕರೆ ಒತ್ತುವರಿಯಾಗಿದೆ ಎಂದು ಸುಳ್ಳು
ಮಾಹಿತಿ ಹರಿಬಿಟ್ಟಿದ್ದಾರೆ ಎಂದರು. ಜಿಪಂ ಕಾರ್ಯನಿರ್ವಹಣಾಧಿಕಾರಿ ಅಶ್ವತಿ, ತಹಶೀಲ್ದಾರ್ ನಾಗರಾಜ್, ಇತರ ಅಧಿಕಾರಿಗಳು ಇದ್ದರು.