ವಿಜಯಪುರ: ರಾಜ್ಯ ಸರ್ಕಾರದ ಐದು ಗ್ಯಾರಂಟಿ ಯೋಜನೆಗಳು ನಮ್ಮ ಬದ್ಧತೆ. ಸರ್ಕಾರ ಇರುವವರೆಗೂ ಈ ಯೋಜನೆಗಳು ಇರುತ್ತವೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ, ಮೂಲ ಸೌಕರ್ಯ ಅಭಿವೃದ್ಧಿ ಹಾಗೂ ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ.ಪಾಟೀಲ್ ತಿಳಿಸಿದರು.
ಜಿಲ್ಲೆಯ ತಿಕೋಟಾ ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ‘ಗ್ಯಾರಂಟಿ ಯೋಜನೆಗಳು ಯಾವ ಕಾಲಕ್ಕೂ ನಿಲ್ಲುವುದಿಲ್ಲ. ಅವುಗಳನ್ನು ಮುಂದುವರಿಸಿಕೊಂಡು ಹೋಗುತ್ತೇವೆ. ಆದಾಗ್ಯೂ, ಅಭಿವೃದ್ಧಿಗೆ ಹಣ ಏನು ಶೇಖರಣೆ ಮಾಡಬೇಕು, ಮಾಡುತ್ತೇವೆ’ ಎಂದರು.
ನಮ್ಮ ಸಿಎಂ ಹಣಕಾಸಿನ ತಜ್ಞರು. 15 ಬಜೆಟ್’ಗಳನ್ನು ಮಂಡನೆ ಮಾಡಿದ್ದಾರೆ. ಹೀಗಾಗಿ ಗ್ಯಾರಂಟಿಗಳ ಬಗ್ಗೆ ಯಾರಿಗೂ ಸಂಶಯ ಬೇಡ. ಅಭಿವೃದ್ಧಿಗೂ ಹಣ ಒದಗಿಸುತ್ತೇವೆ. ಈಗಲೂ ಅಭಿವೃದ್ಧಿ ಕಾರ್ಯಗಳು ನಿಂತಿಲ್ಲ, ನಡೆಯುತ್ತಿವೆ ಎಂದು ಹೇಳಿದರು.
ಇದೇ ವೇಳೆ, ಗ್ಯಾರಂಟಿ ಯೋಜನೆಗಳ ಪರಿಷ್ಕರಣೆಗೆ ಒತ್ತಡ ಇದೆ. ನಮ್ಮ ರಾಜ್ಯದಲ್ಲಿ ಶೇ. 82ರಷ್ಟು ಬಿಪಿಎಲ್ ಕಾರ್ಡ್ ಗಳು ಇವೆ. ನಿಜವಾದ ಬಿಪಿಎಲ್ ಕಾರ್ಡ್ ದಾರಿಗೆ ಪ್ರಯೋಜನ ಸಿಗಬೇಕು. ಅನವಶ್ಯಕವಾಗಿ ತೆಗೆದುಕೊಳ್ಳುವವರಿಗೆ ಯಾಕೆ ಸಿಗಬೇಕು ಎಂಬ ಚಿಂತನೆ ಇದೆ. ಇದಕ್ಕೆ ಸಮಗ್ರವಾಗಿ ಸಮೀಕ್ಷೆ ಆಗಬೇಕಾಗುತ್ತದೆ. ಸರ್ಕಾರ ಸೂಕ್ತ ಸಂದರ್ಭದಲ್ಲಿ ಕ್ರಮ ಕೈಗೊಳ್ಳುತ್ತದೆ ಎಂದರು.
ನಾನು ಹೈಕಮಾಂಡ್ ಅಲ್ಲ
ಸಂಪುಟ ವಿಸ್ತರಣೆ, ಪುನರ್ ರಚನೆ ಕುರಿತಾದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಈ ಬಗ್ಗೆ ನನಗೆ ಗೊತ್ತಿಲ್ಲ. ಹೈಕಮಾಂಡ್ ನ ಕೇಳಬೇಕು. ನಾನು ಹೈಕಮಾಂಡ್ ಅಲ್ಲ ಎಂದರು.
21ರಂದು ಆಲಮಟ್ಟಿಗೆ ಬಾಗಿನ ಅರ್ಪಣೆ: ಆಲಮಟ್ಟಿ ಜಲಾಶಯಕ್ಕೆ ಬಾಗಿನ ಅರ್ಪಣೆ ಕುರಿತು ಮುಖ್ಯಮಂತ್ರಿಗಳು ಮಾತನಾಡಿದ್ದಾರೆ. ಬಹುಷಃ ಇದೇ 21ರಂದು ಬಾಗಿನ ಅರ್ಪಣೆ ಆಗಬಹುದು ಎಂದು ಸಚಿವರು ಮಾಹಿತಿ ನೀಡಿದರು.