Advertisement

Guarantee Schemes: ಬಿಜೆಪಿ ಆರೋಪಗಳನ್ನು ಸುಳ್ಳು ಎಂದು ಸಾಬೀತುಪಡಿಸಿವೆ: ಸಿದ್ದರಾಮಯ್ಯ

03:10 PM Aug 30, 2023 | Team Udayavani |

ಮೈಸೂರು: ವಿರೋಧಪಕ್ಷದ ಎಲ್ಲಾ ಆರೋಪಗಳನ್ನೂ ನಮ್ಮ ಗ್ಯಾರಂಟಿ ಯೋಜನೆಗಳು ಸುಳ್ಳು ಎಂದು ಸಾಬೀತು ಮಾಡಿವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನುಡಿದರು.

Advertisement

ಮೈಸೂರು ಮಹಾರಾಜ ಕಾಲೇಜು ಮೈದಾನದಲ್ಲಿ ನಡೆದ ರಾಜ್ಯ ಸರ್ಕಾರದ ಚಾರಿತ್ರಿಕ ಗೃಹಲಕ್ಷ್ಮಿ ಯೋಜನೆಯ ಉದ್ಘಾಟನಾ ಸಂಭ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ನಾವು ಬಡವರ ಪರವಾದ, ಮಧ್ಯಮ ವರ್ಗದವರ ಪರವಾದ ಯೋಜನೆಗಳನ್ನು ರೂಪಿಸಿದಾಗ, ಘೋಷಿಸಿದಾಗ ಬಿಜೆಪಿ ನಾಯಕರು ಇನ್ನಿಲ್ಲದ ಆರೋಪಗಳನ್ನು ಮಾಡಿದರು. ಸುಳ್ಳುಗಳ ಸುರಿಮಳೆ ಸುರಿಸಿದರು. ಸ್ವತಃ ಪ್ರಧಾನಿ ಮೋದಿಯವರೇ ರಾಜ್ಯ ದಿವಾಳಿಯಾಗುತ್ತದೆ ಎಂದು ಭಾಷಣ ಮಾಡಿದರು. ಆದರೆ, ಈಗ ಗ್ಯಾರಂಟಿ ಯೋಜನೆಗಳು ಜಾರಿಯಾಗಿವೆ. ಪ್ರತಿದಿನ ಕೋಟಿಗೂ ಅಧಿಕ ಮಂದಿ ಪ್ರತಿ ದಿನ, ಪ್ರತಿ ತಿಂಗಳು ನಮ್ಮ ಗ್ಯಾರಂಟಿ ಯೋಜನೆಗಳ ಅನುಕೂಲ ಪಡೆಯುತ್ತಿದ್ದಾರೆ. ಹೀಗಾಗಿ ಪ್ರಧಾನಿ ಮೋದಿ ಅವರ ಮಾತುಗಳು ಸುಳ್ಳಾಗಿವೆ ಎಂದು ವಿವರಿಸಿದರು.

ನೂರು ದಿನಗಳ ಸಾಧನೆಯ ಪುಸ್ತಕ ಹೊರಗೆ ತಂದಿದ್ದೇವೆ. ಈ ಪುಸ್ತಕವನ್ನು ಮತ್ತು ನಾವು ಚುನಾವಣಾ ಪ್ರಣಾಳಿಕೆಯಲ್ಲಿ ಕೊಟ್ಟಿದ್ದ ಭರವಸೆಗಳನ್ನು ಪಟ್ಟಿ ಮಾಡಿ ನೋಡಿ. ನಿಮಗೂ “ನುಡಿದಂತೆ ನಡೆದ ನಮ್ಮ ಸರ್ಕಾರದ ಬಗ್ಗೆ ಹೆಮ್ಮೆ ಬರುತ್ತದೆ ಎಂದರು.

ಭಾರತದ ರಾಜಕೀಯ ಇತಿಹಾಸದಲ್ಲೇ ಒಂದೇ ಯೋಜನೆಯಲ್ಲಿ ಇಷ್ಟು ದೊಡ್ಡ ಪ್ರಮಾಣದ ಜನೋಪಯೋಗಿ ಕಾರ್ಯಕ್ರಮ ಜಾರಿ ಆಗಿಲ್ಲ. ಶಕ್ತಿಯೋಜನೆಯಿಂದ 48.5 ಕೋಟಿ ಮಹಿಳೆಯರು ಪ್ರಯಾಣಿಸಿದ್ದಾರೆ. ಇಷ್ಟು ಕಡಿಮೆ ಅವಧಿಯಲ್ಲಿ ಅವರಿಗೆಲ್ಲಾ ಸಾವಿರಾರು ರೂಪಾಯಿ ಬಸ್ ಚಾರ್ಜ್ ಉಳಿತಾಯವಾಗಿದೆ.ಅನ್ನಭಾಗ್ಯಕ್ಕೆ ಅಕ್ಕಿ ಕೊಡಲು, ಕನ್ನಡ ನಾಡಿದ ಬಡವರು, ಮಧ್ಯಮ ವರ್ಗದವರು ಊಟ ಮಾಡಲು ಅಕ್ಕಿ ಕೊಡದೆ ಕೇಂದ್ರ ಸರ್ಕಾರ ನಮಗೆ ವಂಚಿಸಿತು. ನಾವು ಅಕ್ಕಿಯ ಬದಲಿಗೆ ಹಣ ಕೊಟ್ಟೆವು ಎಂದು ಹೇಳಿದರು.

Advertisement

ಪ್ರತೀ ದಿನ, ಪ್ರತೀ ತಿಂಗಳು ಕೋಟಿಗೂ ಅಧಿಕ ಕುಟುಂಬಗಳು ನಮ್ಮ ಗ್ಯಾರಂಟಿ ಯೋಜನೆಗಳ ಅನುಕೂಲ ಪಡೆದುಕೊಳ್ಳುತ್ತಿವೆ.ಪ್ರಧಾನ ಮಂತ್ರಿ ಮೋದಿಯವರೇ ನಮ್ಮ ಗ್ಯಾರಂಟಿ ಕಾರ್ಯಕ್ರಮಗಳ ಜಾರಿಯಿಂದ ಬಡವ ಮಧ್ಯಮ ವರ್ಗದವರ ಪರ ಕಾರ್ಯಕ್ರಮ ನೀಡಿದ್ದರಿಂದ ರಾಜ್ಯ ದಿವಾಳಿಯಾಗಲಿಲ್ಲ. ದಿವಾಳಿಯಾಗುತ್ತದೆ ಎನ್ನುವ ನಿಮ್ಮ ಮಾತು ಪರಮ ಸುಳ್ಳು ಎನ್ನುವುದು ಸಾಬೀತಾಗಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next