Advertisement

ಬಿಜೆಪಿಗೆ “ಗ್ಯಾರಂಟಿ’ ಆತಂಕ : ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಮಹಮ್ಮದ್‌

12:43 AM Aug 27, 2023 | Team Udayavani |

ಮಂಗಳೂರು: ಕಾಂಗ್ರೆಸ್‌ ವಾಗ್ಧಾನ ಮಾಡಿದ್ದ 5 ಗ್ಯಾರಂಟಿಗಳ ಪೈಕಿ ಮೂರನ್ನು ಅಧಿಕಾರಕ್ಕೆ ಬಂದ 90 ದಿನಗಳಲ್ಲಿ ಅನುಷ್ಠಾನಗೊಳಿಸಿದ್ದು ಗ್ಯಾರಂಟಿಗಳ ಹೆದರಿಕೆಯಿಂದ ಬಿಜೆಪಿ ಯವರು ವಿರೋಧ ಮಾಡುತ್ತಿದ್ದಾರೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹಮ್ಮದ್‌ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.

Advertisement

ಆ. 30ರಂದು ಗೃಹಲಕ್ಷ್ಮೀ, ಡಿಸೆಂಬರ್‌ನಲ್ಲಿ ಯುವನಿಧಿಗೆ ಚಾಲನೆ ನೀಡಲಾಗುವುದು. ಪಕ್ಷ ನುಡಿದಂತೆ ನಡೆಯುತ್ತಿದೆ. ಕಾಂಗ್ರೆಸ್‌ನ ಗ್ಯಾರಂಟಿಗಳಿಂದಾಗಿ ಬಿಜೆಪಿಯವರಿಗೆ ಲೋಕಸಭೆ ಚುನಾವಣೆಯಲ್ಲಿಯೂ ಸೋಲುವ ಭೀತಿ ಉಂಟಾಗಿದೆ. ಹಾಗಾಗಿ ಗ್ಯಾರಂಟಿಗಳಿಗೆ ಟೀಕೆ ಮಾಡುತ್ತಿದ್ದಾರೆ ಎಂದರು.

ಶೀಘ್ರ ವೀಕ್ಷಕರ ನೇಮಕ
ಮುಂಬರುವ ಲೋಕಸಭಾ ಚುನಾವಣೆಗೆ ಕಾಂಗ್ರೆಸ್‌ ಅಭ್ಯರ್ಥಿಗಳ ಆಯ್ಕೆಗಾಗಿ ಪ್ರತೀ ಕ್ಷೇತ್ರಕ್ಕೂ ಶೀಘ್ರದಲ್ಲಿಯೇ ಓರ್ವ ಸಚಿವರು, ರಾಜ್ಯ ಕಾಂಗ್ರೆಸ್‌ನ ಓರ್ವ ಹಿರಿಯ ಮುಖಂಡರನ್ನು ವೀಕ್ಷಕರನ್ನಾಗಿ ಎಐಸಿಸಿ ನೇಮಿಸಲಿದೆ. ಚುನಾವಣೆಯ 6 ತಿಂಗಳ ಮೊದಲು ಅಭ್ಯರ್ಥಿಗಳ ಆಯ್ಕೆಯಾಗಲಿದೆ. ರಾಜ್ಯದಲ್ಲಿ 20ಕ್ಕೂ ಅಧಿಕ ಸ್ಥಾನಗಳಲ್ಲಿ ಕಾಂಗ್ರೆಸ್‌ ಗೆಲುವು ಸಾಧಿಸಲಿದೆ. ಉಡುಪಿ-ಚಿಕ್ಕಮಗಳೂರು ಮತ್ತು ಮಂಗಳೂರು ಲೋಕಸಭಾ ಕ್ಷೇತ್ರಗಳಲ್ಲಿಯೂ ಗೆಲುವು ಸಾಧಿಸುವುದಕ್ಕಾಗಿ ಈ ಭಾಗಕ್ಕೆ ಪ್ರತ್ಯೇಕ ರಾಜಕೀಯ ತಂತ್ರಗಾರಿಕೆ ಮಾಡಲಾಗುವುದು. ಕಾಂಗ್ರೆಸ್‌ನ ಕಾರ್ಯಕ್ರಮಗಳನ್ನು ನೋಡಿ ಜನ ಮತ ಹಾಕಲಿದ್ದಾರೆ. ಜಿಲ್ಲಾ ಪಂಚಾಯತ್‌, ತಾಲೂಕು ಪಂಚಾಯತ್‌ ಚುನಾವಣೆಗೆಕಾಂಗ್ರೆಸ್‌ ಪಕ್ಷ ಸಿದ್ಧವಾಗಿದೆ ಎಂದು ಹೇಳಿದರು.

ಮೋದಿ ಸುಳ್ಳು ಭರವಸೆ
ಪ್ರಧಾನಿ ಮೋದಿ ಒಂಬತ್ತೂವರೆ ವರ್ಷಗಳಿಂದ ಸುಳ್ಳು ಹೇಳಿಕೊಂಡೇ ಬಂದಿದ್ದಾರೆ. ಸುಳ್ಳು ಹೇಳುವ ವಿಚಾರ ದಲ್ಲಿ ಆಸ್ಕರ್‌ ಪ್ರಶಸ್ತಿ ನೀಡುವುದಾದರೆ ಅವರಿಗೆ ನೀಡಬಹುದು. ವಿದೇಶದಿಂದ ಕಪ್ಪು ಹಣ ತಂದು ಪ್ರತಿಯೋರ್ವರ ಖಾತೆಗೆ ತಲಾ 15 ಲ.ರೂ. ಜಮೆ ಮಾಡುವುದು, ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಟಿಸುವುದು, ರೈತರ ಆದಾಯ ದ್ವಿಗುಣಗೊಳಿಸುವುದು ಮೊದಲಾದ ಯಾವುದೇ ಭರವಸೆ ಈಡೇರಿಸಿಲ್ಲ. ಪೆಟ್ರೋಲ್‌ 55 ರೂ.ಗಳಿಂದ 105 ರೂ.ಗಳಿಗೆ, ಗ್ಯಾಸ್‌ ಬೆಲೆ 400 ರೂ.ಗಳಿಂದ 1,200 ರೂ.ಗಳಿಗೆ ಏರಿಕೆಯಾಗಿದೆ. ಇದಕ್ಕೆ ಬಿಜೆಪಿಯವರು ಉತ್ತರಿಸಬೇಕು. ಮನ್‌ಕಿ ಬಾತ್‌ ಭಾಷಣ ನಡೆಯುವುದಿಲ್ಲ. ಕಾಮ್‌ ಕಿ ಬಾತ್‌ ಮಾತ್ರ ನಡೆಯುತ್ತದೆ ಎಂದು ಟೀಕಿಸಿದರು.

“ಆಪರೇಷನ್‌’ ಅಗತ್ಯವಿಲ್ಲ
ರಾಜ್ಯದಲ್ಲಿ ಕಾಂಗ್ರೆಸ್‌ 136 ಸ್ಥಾನಗಳ ಸ್ಪಷ್ಟ ಬಹುಮತದೊಂದಿಗೆ ಆಡಳಿತ ನಡೆಸುತ್ತಿದೆ. “ಆಪರೇಷನ್‌’ನ ಅಗತ್ಯವಿಲ್ಲ. ಪಕ್ಷದ ತಣ್ತೀ ಸಿದ್ಧಾಂತ, ನಾಯಕತ್ವ ಒಪ್ಪಿಕೊಂಡು ಬರುವವರನ್ನು ಸ್ವಾಗತಿಸುತ್ತೇವೆ. ಬಿಜೆಪಿ, ಜೆಡಿಎಸ್‌ನ ಶಾಸಕರ ಕಾಂಗ್ರೆಸ್‌ ಸೇರ್ಪಡೆ ಬಗ್ಗೆ ವರಿಷ್ಠರು ತೀರ್ಮಾನ ತೆಗೆದುಕೊಳ್ಳುತ್ತಾರೆ ಎಂದು ಸಲೀಂ ಹೇಳಿದರು.

Advertisement

ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ಹರೀಶ್‌ ಕುಮಾರ್‌, ಮಾಜಿ ಸಚಿವ ರಮಾನಾಥ ರೈ, ನಾಯಕರಾದ ಜೆ.ಆರ್‌. ಲೋಬೋ, ಐವನ್‌ ಡಿ’ಸೋಜಾ, ಶಾಹುಲ್‌ ಹಮೀದ್‌, ಟಿ.ಎಂ. ಶಹೀದ್‌ ಮೊದಲಾದವರಿದ್ದರು.

 

Advertisement

Udayavani is now on Telegram. Click here to join our channel and stay updated with the latest news.

Next