ಉಡುಪಿ: ಗೆದ್ದ ಮೇಲೆ ಕಾಂಗ್ರೆಸ್ ಬಿಜೆಪಿಯನ್ನು ವ್ಯಂಗ್ಯ ಮಾಡುತ್ತಿದೆ. ಬೂತ್ ಮಟ್ಟದ ಕಾರ್ಯಕರ್ತರ ಅಂಕಿ-ಅಂಶವನ್ನು ಇಟ್ಟುಕೊಂಡು ನಾವು ಹೇಳಿದ್ದೆವು. ನಮ್ಮ ನಿರೀಕ್ಷೆಗಳನ್ನು ಮೀರಿ ಗ್ಯಾರಂಟಿ ಕಾರ್ಡ್ ಕೆಲಸ ಮಾಡಿದೆ ಎಂದು ವಿಧಾನಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
ಉಡುಪಿಯಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ನಾವು ಗೆದ್ದರೆ ಕರೆಂಟ್ ಬಿಲ್ಲನ್ನೇ ಕಟ್ಟಬೇಡಿ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಬಡವರು, ದುರ್ಬಲ ವರ್ಗದವರು ಕಾಂಗ್ರೆಸ್ಸಿಗೆ ಮತ ಹಾಕಿರಬಹುದು. ಎಲ್ಲಿಂದ ಎಲ್ಲಿಗೆ ಯಾವ ಬಸ್ಸಲ್ಲಿ ಬೇಕಾದರೂ ಹೋಗಿ ಎಂದು ಖರ್ಗೆ ಹೇಳಿದ್ದರು. ಕಾಂಗ್ರೆಸ್ ಈ ಎಲ್ಲ ಗ್ಯಾರಂಟಿಗಳನ್ನು ಉಳಿಸಿಕೊಳ್ಳಬೇಕು. ವೃದ್ಧಾಪ್ಯ ವೇತನ, ವಿಧವಾ ವೇತನ ಎಂದು ಕಾರಣ ಹುಡುಕಲು ಸಾಧ್ಯವಿಲ್ಲ. ಕಾಂಗ್ರೆಸ್ ಆಡಿದ ಮಾತನ್ನು ತಪ್ಪಿದರೆ ಬಿಜೆಪಿ ಜನರ ಪರವಾಗಿ ನಿಲ್ಲುತ್ತದೆ. ಪರಮೇಶ್ವರ್ ತಮ್ಮ ಮಾತಿನ ವರಸೆಗಳನ್ನು ಬದಲಿಸಿದ್ದು, ಸರಕಾರ ಜನಕ್ಕೆ ಕೊಟ್ಟ ಆಶ್ವಾಸನೆ ಗ್ಯಾರಂಟಿ ಉಳಿಸಿಕೊಳ್ಳಲಿ ಎಂದರು.
ಕರ್ನಾಟಕವನ್ನು ಪಶ್ಚಿಮ ಬಂಗಾಲ, ಕೇರಳ ಮಾಡಿದರೆ ಸಹಿಸಲಾಗದು
ಕಾಂಗ್ರೆಸ್ ಸರಕಾರ ಬಂದ ಕೂಡಲೇ ರಾಜ್ಯದಲ್ಲಿ ನಡೆದಿರುವ ವಿದ್ಯಾಮಾನಗಳು ಆತಂಕ ಹುಟ್ಟಿಸುತ್ತಿವೆ. ಭಟ್ಕಳ ಶಿರಸಿಯಲ್ಲಿ ಪಾಕಿಸ್ಥಾನ ಮಾದರಿಯ ಧ್ವಜಗಳನ್ನು ಹಾರಿಸಿ ಕೇಕೆ ಹಾಕಿದ್ದಾರೆ. ಬೆಳಗಾವಿಯ ಸಂಭ್ರಮೋತ್ಸವದಲ್ಲಿ ಪಾಕ್ ಪರ ಘೋಷಣೆಗಳು ಮೊಳಗಿವೆ. ಶಿವಮೊಗ್ಗದಲ್ಲಿ ಬಿಜೆಪಿ ಮತದಾರರು, ಕಾರ್ಯಕರ್ತರ ಮೇಲೆ ಹಲ್ಲೆ ನಡೆದಿದೆ. ಇಡೀ ರಾಜ್ಯದಲ್ಲಿ ಇಂತಹ ವಿದ್ಯಮಾನಗಳು ಖಂಡನೀಯ. ರಾಷ್ಟ್ರ ವಿರೋಧಿ ಕೃತ್ಯ ಮಾಡುವವರಿಗೆ ಸಿಗುತ್ತಿರುವ ಪ್ರೋತ್ಸಾಹ ಆತಂಕಕಾರಿ ಬೆಳವಣಿಯಾಗಿದೆ. ವಿಪಕ್ಷ ಸ್ಥಾನದಲ್ಲಿ ನಿಂತು ಬಿಜೆಪಿ ಇದನ್ನು ಗಂಭೀರವಾಗಿ ನೋಡುತ್ತಿದೆ. ಕರ್ನಾಟಕವನ್ನು ಪಶ್ಚಿಮ ಬಂಗಾಳ, ಕೇರಳ ಮಾಡಿದರೆ ನಾವು ಸಹಿಸೆವು. ರಾಜ್ಯದಲ್ಲಿ ಶಾಂತಿ ಸುವ್ಯವಸ್ಥೆ ಜಾರಿಗೆ ತರಬೇಕು. ರಾಷ್ಟ್ರ ವಿರೋಧಿಗಳ ವಿರುದ್ಧ ಕ್ರಮ ಆಗಬೇಕು. ಕಾಂಗ್ರೆಸ್ ಸರಕಾರದ ನೂತನ ಮುಖ್ಯಮಂತ್ರಿಗಳು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.