ಅಹ್ಮದಾಬಾದ್: ಗುಜರಾತ್ ಟೈಟಾನ್ಸ್ ತಂಡದ ವೇಗಿ ಮೊಹಮ್ಮದ್ ದಾಳಿಗೆ ಸಿಲುಕಿ ನಾಟಕೀಯ ಕುಸಿತ ಅನುಭವಿಸಿದ ಡೆಲ್ಲಿ ಕ್ಯಾಪಿಟಲ್ಸ್, ಕೊನೆಗೂ ಚೇತರಿಕೆ ಕಂಡು 8 ವಿಕೆಟಿಗೆ 130 ರನ್ ಗಳಿಸಿದೆ . ಕೆಳ ಕ್ರಮಾಂಕದ ಆಟಗಾರ ಅಮಾನ್ ಹಕೀಂ ಖಾನ್ ಅವರ ಚೊಚ್ಚಲ ಅರ್ಧ ಶತಕ ಡೆಲ್ಲಿಗೆ ಆಸರೆಯಾಯಿತು. ಆಲ್‌ರೌಂಡರ್ ಅಕ್ಷರ್ ಪಟೇಲ್ ಕೂಡ ಉಪಯುಕ್ತ ಕೊಡುಗೆ ಸಲ್ಲಿಸಿದರು.
ಮೊಹಮ್ಮದ್ ಶಮಿ ಎಸೆದ ಪಂದ್ಯದ ಮೊದಲ ಎಸೆತ ದಲ್ಲೇ ವಿಕೆಟ್ ಕಳೆದುಕೊಂಡ ಸಂಕಟ ಡೆಲ್ಲಿ ಯದ್ದು. ಪವರ್ ಪ್ಲೇ ಮುಕ್ತಾಯಕ್ಕೆ 28ಕ್ಕೆ 5 ವಿಕೆಟ್ ಉರುಳಿಸಿಕೊಂಡ ವಾರ್ನರ್ ಪಡೆ ತೀವ್ರ ಹತಾಶ ಸ್ಥಿತಿ ಯಲ್ಲಿತ್ತು. ಈ ಅವಧಿಯಲ್ಲಿ ಉರುಳಿದ 5 ವಿಕೆಟ್‌ಗಳಲ್ಲಿ 4 ವಿಕೆಟ್ ಶಮಿ ಪಾಲಾಗಿತ್ತು. 3 ಕ್ಯಾಚ್‌ಗಳನ್ನು ಕೀಪರ್ ಸಾಹಾ ಪಡೆದಿದ್ದರು.
ಒಂದೇ ಸ್ಪೆಲ್‌ನಲ್ಲಿ 4 ಓವರ್ ಮುಗಿಸಿದ ಶಮಿ ಸಾಧನೆ 11ಕ್ಕೆ 4 ವಿಕೆಟ್. ಐಪಿಎಲ್ ಇತಿಹಾಸದ ಅತ್ಯು ತ್ತಮ “ಸ್ವಿಂಗ್ ಸ್ಪೆಲ್’ ಇದಾಗಿತ್ತು. ಪವರ್ ಪ್ಲೇಯಲ್ಲಿ 7 ರನ್ನಿತ್ತು 4 ವಿಕೆಟ್ ಕೆಡವಿದ್ದು ಶಮಿ ಸಾಧನೆ. ಇದು ಪವರ್ ಪ್ಲೇ ಅವಧಿಯಲ್ಲಿ ದಾಖಲಾದ 2ನೇ ಅತ್ಯುತ್ತಮ ಬೌಲಿಂಗ್ ಪ್ರದರ್ಶನ. ಡೆಕ್ಕನ್ ಚಾರ್ಜರ್ ತಂಡದ ಇಶಾಂತ್ ಶರ್ಮ 2012ರ ಕೊಚ್ಚಿ ಟಸ್ಕರ್ ಕೇರಳ ವಿರುದ್ಧ 12 ರನ್ನಿಗೆ 5 ವಿಕೆಟ್ ಉರುಳಿಸಿದ್ದು ದಾಖಲೆ.
ಫಿಲಿಪ್ ಸಾಲ್ಟ್ ನಿರ್ಗಮನದೊಂದಿಗೆ ಡೆಲ್ಲಿ ಕುಸಿತ ಮೊದ ಲ್ಗೊಂಡಿತು. ದ್ವಿತೀಯ ಓವರ್‌ನಲ್ಲಿ ನಾಯಕ ಡೇವಿಡ್ ವಾರ್ನರ್ ರನೌಟ್ ಸಂಕಟಕ್ಕೆ ಸಿಲುಕಿದರು. ಒಂದೆಡೆ ವಿಕೆಟ್ ಬೀಳುತ್ತಿದ್ದರೂ ನಿಂತು ಆಡುತ್ತಿದ್ದ ವಾರ್ನರ್ ಆಟ ಇಲ್ಲಿ ಎರಡೇ ರನ್ನಿಗೆ ಮುಗಿದಿತ್ತು. ಶಮಿ ಅವರ ದ್ವಿತೀಯ ಓವರ್‌ನಲ್ಲಿ ರಿಲೀ ರೋಸ್ಯೂ (8) ಪೆವಿಲಿಯನ್ ಸೇರಿಕೊಂಡರು. 3ನೇ ಓವರ್‌ನಲ್ಲಿ ಶಮಿ ಅವರ ಅವಳಿ ಆಘಾತಕ್ಕೆ ಡೆಲ್ಲಿ ತತ್ತರಿಸಿತು. ಮೊದಲ ಎಸೆತದಲ್ಲಿ ಮನೀಷ್ ಪಾಂಡೆ (1), ಅಂತಿಮ ಎಸೆತದಲ್ಲಿ ಪ್ರಿಯಂ ಗರ್ಗ್ (10) ಆಟಕ್ಕೆ ತೆರೆ ಎಳೆದರು.
ಎಂದಿನಂತೆ ಅಕ್ಷರ್ ಪಟೇಲ್ ತಂಡದ ರಕ್ಷಣೆಗೆ ನಿಂತರು. ಅಮಾನ್ ಹಕೀಂ ಖಾನ್ ಅವರಿಂದ ಉತ್ತಮ ಬೆಂಬಲ ಕೂಡ ಲಭಿಸಿತು. ಇವರಿಬ್ಬರು ಸೇರಿಕೊಂಡು 9 ಓವರ್‌ಗಳ ಜತೆಯಾಟ ನಡೆಸಿ 6ನೇ ವಿಕೆಟಿಗೆ ಭರ್ತಿ 50 ರನ್ ಒಟ್ಟುಗೂಡಿಸಿದರು. ಅಕ್ಷರ್ 30 ಎಸೆತ ನಿಭಾಯಿಸಿ 27 ರನ್ ಹೊಡೆದರು (2 ಬೌಂಣಡರಿ, 1 ಸಿಕ್ಸರ್).
ಅಮಾನ್ ಸಾಹಸದಿಂದ ಡೆಲ್ಲಿ ಮೊತ್ತ ನೂರರ ಗಡಿ ದಾಟಿತು. 44 ಎಸೆತ ಎದುರಿಸಿ ನಿಂತ ಅಮಾನ್ 3 ಬೌಂಡರಿ, 3 ಸಿಕ್ಸರ್ ನೆರವಿನಿಂದ 51 ರನ್ ಹೊಡೆದರು.