Advertisement
ಜೆಡಿಎಸ್‌ನಲ್ಲಿ ಉಳಿಸಿಕೊಳ್ಳಲು ಆ ಪಕ್ಷದ ನಾಯಕರು ಪ್ರಯತ್ನಿಸುತ್ತಿದ್ದರೂ ದೇವೇಗೌಡರಿಗೆ ಅಲ್ಲಿರಲು ಸುತಾರಾಂ ಇಷ್ಟವಿಲ್ಲ. ಕಾಂಗ್ರೆಸ್ ಸೇರಲು ತಮಗೆ ಹಾಗೂ ತಮ್ಮ ಪುತ್ರ ಎಂಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಜಿ.ಡಿ.ಹರೀಶ್ ಗೌಡ ಇಬ್ಬರಿಗೂ ಅಸೆಂಬ್ಲಿ ಚುನಾವಣೆಯಲ್ಲಿ ಟಿಕೆಟ್ ನೀಡಬೇಕೆಂಬ ಕೋರಿಕೆ ಮಂಡಿಸಿದ್ದಾರೆ.
Related Articles
Advertisement
ಜೆಡಿಎಸ್ ಜತೆ ಒಳ ಒಪ್ಪಂದ: ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಬಿಜೆಪಿ ಮೊದಲಿನಿಂದಲೂ ದುರ್ಬಲವಾಗಿದೆ. ಈ ಕ್ಷೇತ್ರದಲ್ಲಿ ಕಮಲ ಯಾವತ್ತೂ ಅರಳಿಲ್ಲ. ಕಳೆದ ಅಸೆಂಬ್ಲಿ ಚುನಾವಣೆಯಲ್ಲಂತೂ ಬಿಜೆಪಿಯು ಅಂದಿನ ಸಿಎಂ ಸಿದ್ದರಾಮಯ್ಯ ಅವರನ್ನು ಮಣಿಸಲು ಜೆಡಿಎಸ್ ಜೊತೆ ಒಳ ಒಪ್ಪಂದ ಮಾಡಿಕೊಂಡು ದುರ್ಬಲ ಅಭ್ಯರ್ಥಿಯನ್ನು ಹೂಡಿ ಪರೋಕ್ಷವಾಗಿ ಜೆಡಿಎಸ್‌ಗೆ ಸಾಥ್ ನೀಡಿತ್ತು. ಹೀಗಾಗಿ, ಜಿ.ಟಿ.ದೇವೇಗೌಡರು ಭಾರೀ ಮತಗಳ ಅಂತರದಿಂದ ಗೆಲುವಿನ ನಗೆ ಬೀರಿದ್ದರು. ಜಿ.ಟಿ.ದೇವೇಗೌಡರು ಈ ಹಿಂದೆ 2008ರಲ್ಲಿ ಬಿಜೆಪಿ ಸೇರಿದ್ದರು. ಆ ಪಕ್ಷದಿಂದ ಹುಣಸೂರು ಕ್ಷೇತ್ರದಲ್ಲಿ ಕಣಕ್ಕಿಳಿದು ಪರಾಭವಗೊಂಡಿದ್ದು ಉಂಟು. ಆಗ ದೇವೇಗೌಡರು ಮೂರನೇ ಸ್ಥಾನಕ್ಕೆ ಇಳಿದಿದ್ದರು. ಹೀಗಾಗಿ, ಮೈಸೂರು ಜಿಲ್ಲೆಯ ಗ್ರಾಮೀಣ ಅಸೆಂಬ್ಲಿ ಕ್ಷೇತ್ರಗಳಲ್ಲಿ ಬಿಜೆಪಿ ಪರಿಸ್ಥಿತಿ ಹೇಗಿದೆ ಎಂಬುದರ ಅರಿವು ದೇವೇಗೌಡರಿಗೆ ಚೆನ್ನಾಗಿದೆ.
ಎಲ್ಲಾ ಅವಕಾಶ ಮುಕ್ತವಾಗಿರಿಸಿರುವೆ: ಜೆಡಿಎಸ್‌ನಲ್ಲಿ ತಮ್ಮನ್ನು ಉಳಿಸಿಕೊಳ್ಳಲು ಆ ಪಕ್ಷದ ಮುಖಂಡರು ಪ್ರಯತ್ನಿಸುತ್ತಿದ್ದಾರೆ. ಆದರೆ, ಆ ಪಕ್ಷದಿಂದ ತಾವು ಈಗಾಗಲೇ ಬಹಳ ದೂರ ಬಂದಿದ್ದೇನೆ. ಮುಂದಿನ ದಿನಗಳಲ್ಲಿ ಏನು ರಾಜಕೀಯ ಬದಲಾವಣೆಯಾಗುತ್ತದೆಯೋ ಕಾದು ನೋಡೋಣ. ಆದರೆ, ಎಲ್ಲ ಅವಕಾಶಗಳನ್ನು ಮುಕ್ತವಾಗಿರಿ ಸಿಕೊಂಡಿದ್ದೇನೆ ಎಂದು ದೇವೇಗೌಡ ಸೋಮವಾರ “ಉದಯವಾಣಿ’ಗೆ ಪ್ರತಿಕ್ರಿಯಿಸಿದರು.
ಪರ್ಯಾಯ ಸ್ಪರ್ಧಿಗೆ ಜೆಡಿಎಸ್ ಪೋಷಣೆ : ದೇವೇಗೌಡರು ಜೆಡಿಎಸ್‌ನಿಂದ ದೂರವಾಗುತ್ತಿದ್ದಂತೆ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಜೆಡಿಎಸ್ ಪರ್ಯಾಯ ಅಭ್ಯರ್ಥಿಗಳನ್ನು ತಯಾರು ಮಾಡುತ್ತಿದೆ. ಇಲ್ಲಿ ದೇವೇಗೌಡರಿಗೆ ಟಾಂಗ್ ನೀಡಲು ಮಾಜಿ ಸಿಎಂ ಕುಮಾರಸ್ವಾಮಿ ತಂತ್ರಗಳನ್ನು ಹೆಣೆಯುತ್ತಿದ್ದಾರೆ. ಜಿಪಂ ಮಾಜಿ ಸದಸ್ಯ, ಒಂದು ಕಾಲದ ಜಿ.ಟಿ.ದೇವೇಗೌಡರ ಆಪ್ತ, ಕುರುಬ ಸಮಾಜದ ಬೀರಿಹುಂಡಿ ಬಸವಣ್ಣ ಅವರಿಗೆ ಇಲ್ಲಿ ಪಕ್ಷದ ಜವಾಬ್ದಾರಿ ವಹಿಸಲಾಗಿದೆ. ಬಸವಣ್ಣ ಈಗಾಗಲೇ ಕ್ಷೇತ್ರದಲ್ಲಿ ಪ್ರವಾಸ ಮಾಡುತ್ತಾ ಮುಂದಿನ ಅಸೆಂಬ್ಲಿ ಚುನಾವಣೆಯಲ್ಲಿ ತಾವು ಜೆಡಿಎಸ್ ಟಿಕೆಟ್ ಆಕಾಂಕ್ಷಿ ಎಂದು ಹೇಳಿಕೊಂಡಿದ್ದಾರೆ.
ಪಕ್ಷದ ವರಿಷ್ಠರಾದ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಹಾಗೂ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಅವರು ತಮಗೆ ಪಕ್ಷದ ಸಂಘಟನೆ ಕೈಗೊಳ್ಳುವಂತೆ ಸೂಚನೆ ನೀಡಿದ್ದಾರೆ. ಅದರಂತೆ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಪ್ರವಾಸ ಮಾಡುತ್ತಿದ್ದೇನೆ. ತಾವು ಜೆಡಿಎಸ್ ಟಿಕೆಟ್ ಆಕಾಂಕ್ಷಿ. ಅಂತಿಮವಾಗಿ ಪಕ್ಷದ ತೀರ್ಮಾನಕ್ಕೆ ಬದ್ಧ ಎಂದು ಬಸವಣ್ಣ ತಿಳಿಸಿದ್ದಾರೆ.
ಕುತೂಹಲ ಮೂಡಿಸಿದ ಕ್ಷೇತ್ರ: ಅಸೆಂಬ್ಲಿ ಚುನಾವಣೆಗೆ ಮುನ್ನವೇ ಚಾಮುಂಡೇಶ್ವರಿ ಕ್ಷೇತ್ರ ರಾಜಕೀಯವಾಗಿ ಕುತೂಹಲ ಮೂಡಿಸಿದೆ. ಜಿ.ಟಿ.ದೇವೇಗೌಡರ ಮುಂದಿನ ರಾಜಕೀಯ ನಿಲುವು ಮೈಸೂರು ಜಿಲ್ಲಾ ರಾಜಕಾರಣದ ಮೇಲೆಯೂ ಪ್ರಭಾವ ಬೀರುವುದು ಖಚಿತ. ಒಕ್ಕಲಿಗ ಸಮಾಜದ ಪ್ರಬಲ ಮುಖಂಡರಾದ ದೇವೇಗೌಡರು ಯಾವ ಪಕ್ಷಕ್ಕೆ ಸೇರ್ಪಡೆಯಾಗುತ್ತಾರೆಯೋ ಆ ಪಕ್ಷ ಜಿಲ್ಲೆಯಲ್ಲಿ ಮತ್ತಷ್ಟು ಬಲ ಪಡೆಯುವುದು ಖಚಿತ.
ರಾಜಕೀಯದ ಇಂದಿನ ಪರಿಸ್ಥಿತಿಯಲ್ಲಿ ದೇವೇಗೌಡರ ಮೊದಲ ಆದ್ಯತೆ ಕಾಂಗ್ರೆಸ್ ಸೇರ್ಪಡೆ. ಆದರೆ, ತಮ್ಮ ಹಾಗೂ ತಮ್ಮ ಪುತ್ರನಿಗೆ ಟಿಕೆಟ್ ಸಿಗುವುದು ಕಾಂಗ್ರೆಸ್‌ನಲ್ಲಿ ಕಷ್ಟವಿದೆ ಎಂಬ ಅರಿವು ದೇವೇಗೌಡರಿಗಿದೆ. ರಾಜಕೀಯ ಹವಾಮಾನ ತಜ್ಞರಾಗಿರುವ ಜಿ.ಟಿ.ದೇವೇಗೌಡರ ಬಳಿ ಅಂತಿಮವಾಗಿ ಒಂದು ಅಸ್ತ್ರವಿದೆ. ಅದುವೇ ಪಕ್ಷೇತರವಾಗಿ ಕಣಕ್ಕಿಳಿಯುವುದು. ಆದರೆ, ಇದು ಕೊನೆಯ ಅಸ್ತ್ರ. ದೇವೇಗೌಡರು ಈಗಾಗಲೇ ಪಕ್ಷೇತರವಾಗಿ ಕಣಕ್ಕಿಳಿಯುವ ಮಾತನ್ನೂ ಒಮ್ಮೆ ಆಡಿರುವುದು ಉಂಟು.
– ಕೂಡ್ಲಿ ಗುರುರಾಜ