ಬೆಂಗಳೂರು: ಕೇಂದ್ರ ಸರ್ಕಾರದಿಂದ ರಾಜ್ಯದ ಪಾಲಿನ ಜಿಎಸ್‌ಟಿ ಪರಿಹಾರ ಪಡೆಯಲು ಕೇಂದ್ರಕ್ಕೆ ಸರ್ವಪಕ್ಷ ನಿಯೋಗ ಕರೆದುಕೊಂಡು ಹೋಗಲು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.
ಕೋವಿಡ್ ಸೋಂಕಿನಿಂದ ಗುಣಮುಖರಾಗಿ ಹೋಂ ಕ್ವಾರಂಟೈನ್ ಅವಧಿ ಮುಗಿಸಿದ ನಂತರ ಸುದ್ದಿಗಾರರ ಜತೆ ಮಾತನಾಡಿದ ಅವರು, ಜಿಎಸ್‌ಟಿ ಪರಿಹಾರ ನಿರಾಕರಿಸುವ ಮೂಲಕ ರಾಜ್ಯಕ್ಕೆ ಕೇಂದ್ರ ಸರ್ಕಾರ ದೊಡ್ಡ ದ್ರೋಹ ಎಸಗಿದೆ. ಕೋವಿಡ್ ರೋಗದಿಂದಾಗಿ ದೇಶದ ಎಲ್ಲಾ ರಾಜ್ಯಗಳು ಆರ್ಥಿಕ ದುಸ್ಥಿತಿಯನ್ನು ಎದುರಿಸುತ್ತಿವೆ ಎಂದು ಹೇಳಿದರು.
ಸರ್ಕಾರಿ ನೌಕರರಿಗೆ ಸಂಬಳ ನೀಡುವುದು ಕಷ್ಟ ಎನ್ನುವ ಪರಿಸ್ಥಿತಿ ಇದೆ. ಜಿಎಸ್‌ಟಿ ಜಾರಿಗೆ ತರುವ ಸಂದರ್ಭದಲ್ಲಿ ಜಿಎಸ್‌ಟಿ ಕೌನ್ಸಿಲ್‌ನಲ್ಲಿ ಒಂದು ಒಪ್ಪಂದವಾಗಿತ್ತು, ಅದರಂತೆ ಜಿಎಸ್‌ಟಿ ಸಂಗ್ರಹದಲ್ಲಿ ನಷ್ಟವಾದರೆ ಅದನ್ನು ಕೇಂದ್ರ ಸರ್ಕಾರ ಭರಿಸಿಕೊಡಬೇಕು ಹಾಗೂ ಮುಂದಿನ 5 ವರ್ಷಗಳವರೆಗೆ ಕೇಂದ್ರ ಸರ್ಕಾರ ಸಂಪೂರ್ಣ ಜವಾಬ್ದಾರಿಯಾಗಿರಬೇಕು. ಒಪ್ಪಂದದ ಪ್ರಕಾರ ನಡೆದಕೊಳ್ಳಬೇಕಾಗಿರುವುದು ನರೇಂದ್ರ ಮೋದಿಯವರ ಸರ್ಕಾರದ ಜವಾಬ್ದಾರಿ ಎಂದು ತಿಳಿಸಿದರು.
ನಿರ್ಮಲಾ ಸೀತಾರಾಮನ್ ಅವರು ಈಗ ಕೊರೊನಾ ಬಂದಿದೆ, ಇದನ್ನು ಯಾರೂ ಊಹಿಸಿರಲಿಲ್ಲ, ಇದು ದೇವರ ಆಟ, ಸುಮಾರು 3 ಲಕ್ಷ ಕೋಟಿ ರೂ. ನಷ್ಟ ಉಂಟಾಗಿದೆ. ಸೆಸ್‌ನಿಂದ 65 ಸಾವಿರ ಕೋಟಿ ರೂ.ಬರುತ್ತದೆ. ಉಳಿದ 2.65 ಲಕ್ಷ ಕೋಟಿ ರೂ. ನಷ್ಟ ಆಗುತ್ತಿರುವುದರಿಂದ ನಾವು ನಷ್ಟ ತುಂಬಿಕೊಡಲು ಸಾಧ್ಯವಿಲ್ಲ ಎಂದಿದ್ದಾರೆ.
ರಾಜ್ಯಗಳಿಗೆ ನೀವು ರಿಸರ್ವ್ ಬ್ಯಾಂಕ್ ಗಳಿಂದ ಸಾಲ ಪಡೆದು ತಿರಿಸಿಕೊಳ್ಳಿ ಎಂದು ಕೇಂದ್ರ ವಿತ್ತ ಸಚಿವರು ಹೇಳಿದ್ದಾರೆ. ಇದರ ಬದಲು ಕೇಂದ್ರವೇ ಏಕೆ ರಿಸರ್ವ್ ಬ್ಯಾಂಕಿನಿಂದ ಸಾಲ ಪಡೆದು ರಾಜ್ಯಗಳಿಗೆ ನೀಡಬಾರದು? ಕೇಂದ್ರ ಸರ್ಕಾರ ತನ್ನ ಜವಾಬ್ದಾರಿಯನ್ನು ರಾಜ್ಯಗಳ ಮೇಲೆ ಹಾಕುತ್ತಿರುವುದು ಏಕೆ? ಒಪ್ಪಂದದ ಪ್ರಕಾರ ನಷ್ಟ ತುಂಬಿಕೊಡಬೇಕಾಗಿರುವುದು ಕೇಂದ್ರ ಸರ್ಕಾರದ ಕರ್ತವ್ಯವಲ್ಲವೇ? ಎಂದು ಪ್ರಶ್ನಿಸಿದ್ದಾರೆ.
ಕೇಂದ್ರ ಮತ್ತು ರಾಜ್ಯದಲ್ಲಿ ಒಂದೇ ಸರ್ಕಾರವಿದ್ದರೆ ಸ್ವರ್ಗ ಸೃಷ್ಟಿ ಮಾಡುತ್ತೇವೆ ಎಂದು ಹೇಳಿದ್ದನ್ನು ನಂಬಿದ ರಾಜ್ಯದ ಜನರು 25 ಜನ ಸಂಸದರನ್ನು ಗೆಲ್ಲಿಸಿಕೊಟ್ಟಿದ್ದಾರೆ, ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಟ್ಟಿದ್ದಾರೆ, ಜನರು ನಿಮ್ಮ ಮೇಲಿಟ್ಟಿರುವ ನಂಬಿಕೆಗೆ ಈಗ ನೀವು ಮಾಡುತ್ತಿರುವುದು ದ್ರೋಹವಲ್ಲವೇ? ರಾಜ್ಯಗಳನ್ನು ಕೇಂದ್ರ ದಿವಾಳಿಯಾಗುವತ್ತ ಕೊಂಡೊಯ್ಯುತ್ತಿದೆ. ಹಾಗಾಗಿ ಕೇಂದ್ರದ ಈ ಸಲಹೆಯನ್ನು ರಾಜ್ಯ ಸರ್ಕಾರ ತಿರಸ್ಕರಿಸಬೇಕು ಎಂದು ಆಗ್ರಹಿಸಿದ್ದಾರೆ.