Advertisement

ಜಿಎಸ್‌ಟಿ ನೋಂದಣಿಗೆ ಜ.15 ಡೆಡ್‌ಲೈನ್‌

11:38 AM Jan 03, 2017 | Team Udayavani |

ಬೆಂಗಳೂರು: ಒಂದು ದೇಶ, ಒಂದು ತೆರಿಗೆ ಹಾಗೂ ಒಂದೇ ಸೇವೆ ಕಲ್ಪನೆಯಡಿ ದೇಶದಲ್ಲಿ ಜಾರಿಯಾಗುತ್ತಿರುವ ಬಹುನಿರೀಕ್ಷಿತ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಪದ್ಧತಿಗೆ ನೋಂದಣಿ ಪ್ರಕ್ರಿಯೆ ಆರಂಭಗೊಂಡಿದ್ದು, ಜ.15ರೊಳಗೆ ವರ್ತಕರು ನೋಂದಾಯಿಸಿಕೊಳ್ಳಬೇಕು ಎಂದು ವಾಣಿಜ್ಯ ತೆರಿಗೆ ಇಲಾಖೆಯ ಆಯುಕ್ತ ರಿತ್ವಿಕ್‌ ಪಾಂಡೆ ತಿಳಿಸಿದ್ದಾರೆ. 

Advertisement

ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆ (ಎಫ್ಕೆಸಿಸಿಐ) ಸಹಯೋಗದಲ್ಲಿ ಸೋಮವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ 6.16 ಲಕ್ಷ ನೋಂದಾಯಿತ ವರ್ತಕರಿದ್ದು, ವ್ಯಾಪಾರ ವಹಿವಾಟು ಸುಗಮವಾಗಿ ನಡೆಸುವ ಉದ್ದೇಶದಿಂದ ಮೌಲ್ಯವರ್ಧಿತ ತೆರಿಗೆಯಿಂದ (ವ್ಯಾಟ್‌) ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ವರ್ಗಗೊಳ್ಳಬೇಕಿದೆ. ಜಿಎಸ್‌ಟಿಯಲ್ಲಿ ದಾಖಲಾಗಲು ವಾಣಿಜ್ಯ ತೆರಿಗೆ ಇಲಾಖೆಯು ಹಲವು ಕ್ರಮಗಳನ್ನು ಕೈಗೊಂಡಿದೆ ಎಂದು ಹೇಳಿದರು. 

ವರ್ತಕರಿಗೆ ನೆರವಾಗುವ ದೃಷ್ಟಿಯಿಂದ ಜ.1ರಿಂದ ಜ.15ರವರೆಗೆ ರಾಜ್ಯದಲ್ಲಿನ ವ್ಯಾಟ್‌ ಕಚೇರಿಗಳಲ್ಲಿ ಇಲಾಖೆಯ 4-5 ಅಧಿಕಾರಿಗಳು ವಿಶೇಷವಾಗಿ ಕಾರ್ಯನಿರ್ವಹಿಸಲಿದ್ದಾರೆ. ವರ್ತಕರಿಗೆ ಜಿಎಸ್‌ಟಿ ನೋಂದಣಿ ಪ್ರಕ್ರಿಯೆಯಲ್ಲಿ ಸಹಾಯ ಮಾಡಲಿದ್ದು, ಅನುಮಾನಗಳನ್ನು ಬಗೆಹರಿಸಲಿದ್ದಾರೆ. ಜಿಎಸ್‌ಟಿ ಜಾರಿಯಾದ ಬಳಿಕ ಬಹುತೇಕ ವಸ್ತುಗಳ ಬೆಲೆಯಲ್ಲಿ ಇಳಿಕೆಯಾಗುವ ಸಾಧ್ಯತೆ ಇದೆ ಎಂದು ನಿರೀಕ್ಷಿಸಲಾಗಿದೆ ಎಂದರು. 

2016-17ನೇ ಸಾಲಿನಲ್ಲಿ ರಾಜ್ಯ ಸರ್ಕಾರವು 51 ಸಾವಿರ ಕೋಟಿ ರೂ. ತೆರಿಗೆ ಸಂಗ್ರಹದ ಗುರಿ ನೀಡಿದ್ದು, ಡಿಸೆಂಬರ್‌ ಅಂತ್ಯಕ್ಕೆ 38,700 ಕೋಟಿ ರೂ. ಸಂಗ್ರಹಿಸಲಾಗಿದೆ. ತೆರಿಗೆ ಸಂಗ್ರಹದಲ್ಲಿ ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಶೇ.13ರಷ್ಟು ಹೆಚ್ಚಳವಾಗಿದೆ. ಇನ್ನು ಮೂರು ತಿಂಗಳುಗಳ ಕಾಲಾವಕಾಶ ಇದ್ದು, ಆ ವೇಳೆಗೆ ತೆರಿಗೆ ಸಂಗ್ರಹದ ಗುರಿ ತಲುಪಲಿದ್ದೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದ ಅವರು, ನೋಟು ಅಮಾನ್ಯದಿಂದ ತೆರಿಗೆ ಸಂಗ್ರಹದಲ್ಲಿ ಸಮಸ್ಯೆಯಾಗಿಲ್ಲ ಎಂದರು. 

ಸುದ್ದಿಗೋಷ್ಠಿಯಲ್ಲಿ ಎಫ್ಕೆಸಿಸಿಐ ಅಧ್ಯಕ್ಷ ಎಂ.ಸಿ.ದಿನೇಶ್‌, ಹಿರಿಯ ಉಪಾಧ್ಯಕ್ಷ ಕೆ.ರವಿ, ಉಪಾಧ್ಯಕ್ಷ ಸುಧಾಕರ ಶೆಟ್ಟಿ, ರಾಜ್ಯ ತೆರಿಗೆ ಸಮಿತಿ ಸಮಿತಿ ಅಧ್ಯಕ್ಷ ಬಿ.ಟಿ.ಮನೋಹರ್‌, ವಾಣಿಜ್ಯ ತೆರಿಗೆ ಇಲಾಖೆ ಹೆಚ್ಚುವರಿ ನಿರ್ದೇಶಕ ಬಿ.ವಿ.ರವಿ, ಜಂಟಿ ಆಯುಕ್ತ ಬಸವರಾಜ್‌ ಉಪಸ್ಥಿತರಿದ್ದರು.

Advertisement

20 ಲಕ್ಷ ರೂ. ವ್ಯವಹಾರ ನಿಗದಿ
ವ್ಯಾಟ್‌ ಪದ್ಧತಿಯಲ್ಲಿ ಆದಾಯ ಮಿತಿ 10 ಲಕ್ಷ ರೂ.ಗಿಂತ ಹೆಚ್ಚು ಹೊಂದಿ ರುವವರು ಕಡ್ಡಾಯವಾಗಿ ನೋಂದಣಿ ಮಾಡಿಕೊಳ್ಳಬೇಕಿತ್ತು. ಆದರೆ, ಜಿಎಸ್‌ಟಿ ಪದ್ಧತಿಯಲ್ಲಿ 20 ಲಕ್ಷ ರೂ. ನಿಗದಿ ಮಾಡಲಾಗಿದೆ. 20 ಲಕ್ಷರೂ.ಗಿಂತ ಕಡಿಮೆ ವ್ಯವಹಾರ ನಡೆಸುವ ವರ್ತಕರ ನೋಂದಣಿ ಕಡ್ಡಾಯವಲ್ಲ.

ಆದರೂ, ಪಾರದರ್ಶಕ ವ್ಯವಹಾರದ ದೃಷ್ಟಿಯಿಂದ ನೋಂದಣಿ ಮಾಡಿಕೊಳ್ಳುವುದು ಸೂಕ್ತ. ಹೀಗಾಗಿ ಎಲ್ಲಾ ವರ್ತಕರು ಜಿಎಸ್‌ಟಿ ನೋಂದಣಿ ಮಾಡಿಕೊಳ್ಳಬೇಕು. ವರ್ತಕರ ಅನುಕೂಲಕ್ಕಾಗಿ ಕನ್ನಡ ಭಾಷೆಯಲ್ಲಿ ವಿಡಿಯೋವೊಂದನ್ನು ಸಿದ್ದಪಡಿಸಲಾ ಗಿದ್ದು, www.ctax.kar.nic.in ನಲ್ಲಿ ವೀಕ್ಷಿಸಬಹುದು.

ನೋಂದಣಿ ಪ್ರಕ್ರಿಯೆ ಹೀಗೆ?
ಈಗಾಗಲೇ ಎಫ್ಕೆಸಿಸಿಐ, ಕಾಸಿಯಾ ಮತ್ತು ಜಿಲ್ಲಾ ವಾಣಿಜ್ಯ ಮತ್ತು ವ್ಯಾಪಾರ ಸಂಸ್ಥೆಗಳ ಸಹಯೋಗದೊಂದಿಗೆ 60ಕ್ಕೂ ಹೆಚ್ಚು ಕಾರ್ಯಾಗಾರಗಳನ್ನು ಹಮ್ಮಿಕೊಳ್ಳಲಾಗಿದೆ. ಅಲ್ಲದೇ, ವರ್ತಕರಿಗೆ ಎಸ್‌ಎಂಎಸ್‌ ಮೂಲಕ ಮಾಹಿತಿ ನೀಡಲಾಗಿದ್ದು, ಅದರಲ್ಲಿ ವರ್ತಕರ ಯೂಸರ್‌ ಐಡಿ ಮತ್ತು ಪಾಸ್‌ವರ್ಡ್‌ಗಳನ್ನು ರವಾನಿಸಲಾಗಿದೆ.

www.gst.gov.in ವೆಬ್‌ಸೈಟ್‌ ಲಾಗಿನ್‌ ಆಗಿ ಯೂಸರ್‌ ಐಡಿ ಮತ್ತು ಪಾಸ್‌ವರ್ಡ್‌ ಮೂಲಕ ವೈಯಕ್ತಿಕ ಮತ್ತು ಕಂಪನಿಯ ವಿವರಗಳನ್ನು ಭರ್ತಿ ಮಾಡಬೇಕು. ಅಗತ್ಯ ಮಾಹಿತಿಗಳನ್ನು ಭರ್ತಿ ಮಾಡಿ ವೆಬ್‌ಸೈಟ್‌ ಮೂಲಕವೇ ನೋಂದಣಿ ಮಾಡಿಕೊಳ್ಳಲು ಅವಕಾಶ ಇದೆ. ವ್ಯಾಟ್‌ ಪಡೆದುಕೊಳ್ಳುವ ವೇಳೆ ಲಗತ್ತಿಸಿದ ದಾಖಲೆಗಳನ್ನು ಒದಗಿಸಬಹುದಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next