ನವದೆಹಲಿ: ಅಂತೂ ಇಂತೂ ಜು.1ರಿಂದಲೇ ದೇಶಕ್ಕೊಂದೇ ತೆರಿಗೆ ಎಂದೇ ಪ್ರಚಾರ ಪಡೆದ ಐತಿಹಾಸಿಕ ಸರಕು ಮತ್ತು ಸೇವಾ ತೆರಿಗೆ(ಜಿಎಸ್‌ಟಿ) ಜಾರಿಯಾಗಲಿದೆ. ಕಡೆಯ ಸುತ್ತಿನಲ್ಲಿ ಬಂಗಾರ, ವಜ್ರ, ಬೀಡಿ, ಬಟ್ಟೆ, ಬಿಸ್ಕತ್, ಚಪ್ಪಲಿ, ಪ್ಯಾಕೇಜ್x ಫುಡ್‌ಗೆ ದರ ನಿಗದಿ ಮಾಡಲಾಗಿದೆ.
ದೆಹಲಿಯಲ್ಲಿ ಶನಿವಾರ ನಡೆದ ಜಿಎಸ್‌ಟಿ ಮಂಡಳಿಯ 15ನೇ ಸಭೆಯಲ್ಲಿ ಎಲ್ಲಾ ರಾಜ್ಯಗಳು ಜು.1 ರಿಂದಲೇ ಜಿಎಸ್‌ಟಿ ಜಾರಿಗೊಳಿಸಲು ಒಪ್ಪಿವೆ. ಅಲ್ಲದೆ, ಕಳೆದ ಎರಡು ಸಭೆಗಳಲ್ಲಿ ಬಂಗಾರ, ಬಟ್ಟೆ ಸೇರಿದಂತೆ ಕೆಲವು ವಸ್ತುಗಳಿಗೆ ತೆರಿಗೆ ನಿಗದಿ ಪಡಿಸುವಲ್ಲಿ ವಿಫಲವಾಗಿದ್ದ ಜಿಎಸ್‌ಟಿ ಮಂಡಳಿ, ಶನಿವಾರದ ಸಭೆಯಲ್ಲಿ ಇವುಗಳಿಗೂ ಅಂತಿಮ ರೂಪ ನೀಡಿದೆ. ಮುಂದಿನ ಸಭೆ ಜೂ.11 ರಂದು ನಡೆಯಲಿದ್ದು, ಜು.1 ರಿಂದ ಯಾವ ರೀತಿ ಜಾರಿಗೊಳಿಸಬೇಕು ಎಂಬ ಬಗ್ಗೆ ನಿರ್ಧರಿಸಲಾಗುತ್ತದೆ.
ಸಭೆಯ ನೇತೃತ್ವ ವಹಿಸಿದ್ದ ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರು ನಂತರ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು. ಬಂಗಾರಕ್ಕೆ ಶೇ.3 ಹಾಗೂ ವಜ್ರಕ್ಕೆ ಶೇ.0.25 ರಷ್ಟು ತೆರಿಗೆ ನಿಗದಿ ಮಾಡಲಾಗಿದೆ ಎಂದು ಹೇಳಿದರು. ಬಂಗಾರ ಸೇರಿದಂತೆ ಮೌಲ್ಯಯುಕ್ತ ವಸ್ತುಗಳಿಗೆ ಶೇ.3 ರಷ್ಟು ತೆರಿಗೆ ವಿಧಿಸಿದ್ದನ್ನು ಆಭರಣ ಅಂಗಡಿಗಳ ಮಾಲೀಕರು ಸ್ವಾಗತಿಸಿದ್ದಾರೆ. ಸದ್ಯ ಚಿನ್ನಕ್ಕೆ ಶೇ.2 ರಷ್ಟು ತೆರಿಗೆ ವಿಧಿಸಲಾಗುತ್ತಿದೆ. ಅಂದರೆ ಶೇ.1 ರಷ್ಟು ಅಬಕಾರಿ ಮತ್ತು ಶೇ.1 ರಷ್ಟು ಮೌಲ್ಯವರ್ಧಿತ ತೆರಿಗೆಯನ್ನು ವಿಧಿಸಲಾಗುತ್ತಿದೆ. ಕೆಲವೊಂದು ರಾಜ್ಯಗಳು ವ್ಯಾಟ್ ಹೆಚ್ಚು ಮಾಡಿದ್ದು, ಶೇ.3 ರಷ್ಟು ತೆರಿಗೆಯಿಂದಾಗಿ ಬಂಗಾರದ ಬೆಲೆಯಲ್ಲಿ ಅಂಥ ವ್ಯತ್ಯಾಸವೇನೂ ಆಗಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.
ಅದೇ ರೀತಿ ಸಿದ್ಧ ಉಡುಪುಗಳಿಗೆ ಶೇ.12 ರಷ್ಟು ತೆರಿಗೆ ನಿಗದಿ ಪಡಿಸಲಾಗಿದ್ದು, ಹತ್ತಿಯಿಂದ ತಯಾರಿಸಿದ ಉಡುಪುಗಳಿಗೆ ಶೇ.5 ರಷ್ಟು ತೆರಿಗೆ ಹಾಕಲು ನಿರ್ಧರಿಸಲಾಗಿದೆ. ಆದರೆ ರೇಷ್ಮೆ, ಉಣ್ಣೆ ಬಟ್ಟೆಗಳಿಗೆ ಯಾವುದೇ ತೆರಿಗೆ ಇರುವುದಿಲ್ಲ. ವಸತಿ ಕ್ಷೇತ್ರಕ್ಕೆ ಈ ರೀತಿಯ ತೆರಿಗೆ ವಿಧಿಸಿರುವುದನ್ನೂ ಟೆಕ್ಸ್‌ಟೈಲ್ ಮಾಲೀಕರು ಸ್ವಾಗತಿಸಿದ್ದಾರೆ. ಹತ್ತಿ ಬಟ್ಟೆಗಳಿಗೆ ಶೇ.5 ರಷ್ಟು ತೆರಿಗೆ ನಿಗದಿ ಮಾಡಿರುವುದು ಸ್ವಾಗತಾರ್ಹ ಎಂದಿದ್ದಾರೆ. ಇದರಿಂದ ದೇಶೀಯ ಮಾರುಕಟ್ಟೆ ಅಭಿವೃದ್ಧಿಯಾಗಲಿದೆ ಎಂದಿದ್ದಾರೆ. ಆದರೆ ಸಿದ್ಧ ಉಡುಪಿಗೆ ಶೇ.12 ರಷ್ಟು ತೆರಿಗೆ ವಿಧಿಸಲಾಗುವುದರಿಂದ ಇದರ ಬೆಲೆ ಹೆಚ್ಚಬಹುದು ಎಂಬ ಆತಂಕವೂ ಇದೆ.
ಸಿನ್ ಪ್ರೊಡಕ್ಟ್ ಎಂದೇ ಕರೆಯಲ್ಪಡುವ ಬೀಡಿ ಮತ್ತು ಹೊಗೆಸೊಪ್ಪಿಗೆ ಭಾರೀ ತೆರಿಗೆಯನ್ನೇ ವಿಧಿಸಲಾಗಿದೆ. ಬೀಡಿಗೆ ಯಾವುದೇ ಹೆಚ್ಚುವರಿ ತೆರಿಗೆ ಇಲ್ಲದೇ ಶೇ.28 ಮತ್ತು ಹೊಗೆಸೊಪ್ಪಿಗೆ ಶೇ.18ರಷ್ಟು ತೆರಿಗೆ ವಿಧಿಸಲಾಗಿದೆ. ಇನ್ನು ಕೃಷಿಗೆ ಸಂಬಂಧಿಸಿದ ಪರಿಕರಗಳಿಗೆ ಶೇ.5 ರಷ್ಟು ತೆರಿಗೆ ನಿಗದಿ ಮಾಡಲಾಗಿದೆ.
ಕಡೆಯ ಸುತ್ತಿನ ದರ
ಚಿನ್ನ – ಶೇ. 3
ಬಿಸ್ಕೇಟ್ – ಶೇ.18
ಪ್ಯಾಕೇಜ್‌ಯುಕ್ತ ಆಹಾರ – ಶೇ.5
ಬೀಡಿ – ಶೇ.28
ಹೊಗೆಸೊಪ್ಪು – ಶೇ.18
ಸಿದ್ಧ ಉಡುಪು – ಶೇ.12
ಹತ್ತಿ ಉಡುಪು – ಶೇ.5
ಸೋಲಾರ್ ಪ್ಯಾನಲ್ – ಶೇ.5
ಪಾದರಕ್ಷೆ -(500 ರೂ.ಗಿಂತ ಕಡಿಮೆ) – ಶೇ.5
(500 ರೂ.ಗಿಂತ ಹೆಚ್ಚು) – ಶೇ.18
ಮಮತಾ ಮಾತಿಗೆ ಸಿಗದ ಬೆಲೆ
ಈಗಿರುವ ಜಿಎಸ್‌ಟಿಯನ್ನು ಒಪ್ಪಿಕೊಳ್ಳಲು ಸಾಧ್ಯವೇ ಇಲ್ಲ ಎಂದು ಪಶ್ಚಿಮ ಬಂಗಾಳದ ಹಣಕಾಸು ಸಚಿವ ಅಮಿತ್ ಮಿತ್ರಾ ಹೇಳಿದ್ದರು. ಅಲ್ಲದೆ ರಾಜ್ಯಗಳು ಜು.1ರ ಜಾರಿಗೆ ಇನ್ನೂ ಸಿದ್ಧವಾಗಿಲ್ಲ. ಇಷ್ಟೊಂದು ಆತುರವಾಗಿ ಏಕೆ ಜಾರಿ ಮಾಡಬೇಕು ಎಂದು ಪ್ರಶ್ನಿಸಿದ್ದರು. ಇದರ ಹಿಂದೆಯೇ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರೂ ಮಾತನಾಡಿ, ರಾಜ್ಯಗಳು ವಿಟೋ ಅಧಿಕಾರ ಬಳಸಿ, ಜು. 1 ರಿಂದ ಜಿಎಸ್‌ಟಿ ಜಾರಿ ಮಾಡಲು ಒಪ್ಪಬಾರದು ಎಂದು ಕರೆ ನೀಡಿದ್ದರು. ಆದರೆ ಶನಿವಾರದ ಸಭೆಯಲ್ಲಿ ಈ ಬಗ್ಗೆ ಚರ್ಚೆಯೂ ಆಗಲಿಲ್ಲ. ಅಲ್ಲದೆ ಜು. 1 ರಿಂದ ಜಾರಿ ಮಾಡಲು ಅಸಾಧ್ಯವೆಂದಿದ್ದ ಅಮಿತ್ ಮಿತ್ರಾ ಅವರೇ ಈ ಸಭೆಯಲ್ಲಿ ಪಾಲ್ಗೊಂಡು ಸಮ್ಮತಿ ಸೂಚಿಸಿದರು.