Advertisement

ಜಿಎಸ್‌ಟಿ ಐತಿಹಾಸಿಕ ಸುಧಾರಣೆ 

11:09 AM Jul 02, 2018 | Team Udayavani |

ಹೊಸದಿಲ್ಲಿ: ಐತಿಹಾಸಿಕ ತೆರಿಗೆ ಸುಧಾರಣೆ ಎಂದೇ ಹೇಳಲಾಗಿರುವ ಸರಕು ಮತ್ತು ಸೇವಾ ತೆರಿಗೆ(ಜಿಎಸ್‌ಟಿ) ಜಾರಿಯಾಗಿ ಭಾನುವಾರಕ್ಕೆ ಒಂದು ವರ್ಷ. ಕೇಂದ್ರ ಸರಕಾರ ಇದನ್ನು ಜಿಎಸ್ಟಿ ದಿನವನ್ನಾಗಿ ಆಚರಿಸಿ, ಸಾಧನೆಗಳ ಬಗ್ಗೆ ಹೇಳಿಕೊಂಡರೆ, ಕಾಂಗ್ರೆಸ್‌ ಜಿಎಸ್ಟಿಯಿಂದ ಲಾಭಕ್ಕಿಂತ ನಷ್ಟವೇ ಹೆಚ್ಚಾಯ್ತು ಎಂದು ಆರೋಪಿಸಿದೆ.

Advertisement

ವಿತ್ತ ಸಚಿವರಾದ ಅರುಣ್‌ ಜೇಟ್ಲಿ ಮತ್ತು ಪಿಯೂಶ್‌ ಗೋಯಲ್‌ ಅವರು ಜಿಎಸ್‌ಟಿ ಸಾಧನೆಗಳನ್ನು ಬಿಚ್ಚಿಟ್ಟರೆ, ಮಾಜಿ ಹಣಕಾಸು ಸಚಿವ ಪಿ.ಚಿದಂಬರಂ ಅವರು, ಜಿಎಸ್ಟಿಯಿಂದಾಗಿ ಶ್ರೀಸಾಮಾನ್ಯ ಜೇಬು ಸುಟ್ಟುಕೊಳ್ಳುತ್ತಿದ್ದಾನೆ ಎಂದು ಆರೋಪಿಸಿದ್ದಾರೆ. ಇದರ ನಡುವೆಯೇ ಪ್ರಧಾನಿ ಮೋದಿ ಅವರೂ ನಿಯತಕಾಲಿಕೆಯೊಂದಕ್ಕೆ ಸಂದರ್ಶನ ನೀಡಿದ್ದು, ಜಿಎಸ್ಟಿಯಿಂದ ದೇಶದ ತೆರಿಗೆ ವ್ಯವಸ್ಥೆಯಲ್ಲಿ ಆಮೂಲಾಗ್ರ ಸುಧಾರಣೆಯಾಗಿದೆ ಎಂದಿದ್ದಾರೆ.

ಹೆಚ್ಚಾದ ಜಿಎಸ್‌ಟಿ ಸಂಗ್ರಹ: ಜೂನ್‌ ತಿಂಗಳಲ್ಲಿ 95,610 ಕೋಟಿ ರೂ. ಜಿಎಸ್ಟಿ ಸಂಗ್ರಹವಾಗಿದೆ ಎಂದು ಹಣಕಾಸು ಕಾರ್ಯದರ್ಶಿ ಹಸ್ಮುಖ್  ಅಧಿಯಾ ಹೇಳಿದ್ದಾರೆ. ಬೋಗಸ್‌ ಬಿಲ್‌ಗ‌ಳನ್ನು ತಡೆಗಟ್ಟಿದರೆ ಮುಂದಿನ ತಿಂಗಳುಗಳಲ್ಲಿ ಗಮನಾರ್ಹ ರೀತಿಯಲ್ಲಿ ತೆರಿಗೆ ಸಂಗ್ರಹ ಕಾಣಬಹುದು ಎಂದೂ ತಿಳಿಸಿದ್ದಾರೆ.

ಹೊಸ ತೆರಿಗೆ ವ್ಯವಸ್ಥೆಗೆ ಪ್ರಶಂಸೆ, ಟೀಕೆಯ ವಿಮರ್ಶೆ
ಅರುಣ್‌ ಜೇಟ್ಲಿ, ಸಚಿವ

ಜಿಎಸ್‌ಟಿ ವ್ಯವಸ್ಥೆ ಯಾವುದೇ ರೀತಿ ಅಡ್ಡ ಪರಿಣಾಮ ಬೀರಲಿಲ್ಲ. ಬದಲಾಗಿ ಆದಾಯ ಸಂಗ್ರಹದ ಕುರಿತಂತೆ ಭಾರಿ ಭರವಸೆ ಹುಟ್ಟಿತು. ಏಪ್ರಿಲ್‌-ಜೂನ್‌ ತ್ತೈಮಾಸಿಕದಲ್ಲಿ ದೇಶದ ಪ್ರತ್ಯಕ್ಷ ತೆರಿಗೆ ಸಂಗ್ರಹ ಭಾರಿ ಪ್ರಮಾಣದಲ್ಲಿ ಹೆಚ್ಚಾಗಿದೆ. ಇದರಿಂದಾಗಿ ಜಿಡಿಪಿ ಹೆಚ್ಚಳವಾಗಿದ್ದಲ್ಲದೇ, ಉದ್ದಿಮೆ ಆರಂಭಿಸುವುದು ಮತ್ತು ನಡೆಸುವುದೂ ಸರಳ ವಾಗಿದೆ. ಮೇಕ್‌ ಇನ್‌ ಇಂಡಿಯಾಗೂ ಸಾಕಷ್ಟು ಅನುಕೂಲವಾಗಿದ್ದು ಪ್ರಾಮಾಣಿಕ ತೆರಿಗೆದಾರರಿಗೆ ರಕ್ಷಣೆ ಒದಗಿಸಿದೆ. ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಅವರು ಹೇಳಿದ ಹಾಗೆ, ಇಡೀ ದೇಶಕ್ಕೆ ಏಕ ತೆರಿಗೆ ನೀತಿ ಜಾರಿಗೆ ತರಲು ಸಾಧ್ಯವಿಲ್ಲ. ದೇಶದ ಎಲ್ಲ ಜನ ಸಮಾನ ಮತ್ತು ಶ್ರೀಮಂತರೇ ಆಗಿದ್ದಲ್ಲಿ ಮಾತ್ರ ಏಕ ತೆರಿಗೆ ನೀತಿ ಜಾರಿಗೆ ತರಬಹುದು. ಬೇರೆ ದೇಶಗಳಲ್ಲಿ ಜಿಎಸ್‌ಟಿ ಜಾರಿ ಮಾಡಿದಾಗ ಭಾರಿ ಪ್ರಮಾಣದ ನೇತ್ಯಾತ್ಮಕ ಪರಿಣಾಮಗಳಾಗಿದ್ದನ್ನು ನೋಡಿದ್ದೇವೆ. ಆದರೆ, ನಮ್ಮಲ್ಲಿ ಆ ರೀತಿ ಆಗಲಿಲ್ಲ. ಇದಕ್ಕೆ ಬದಲಾಗಿ ದೇಶದ ಸುಧಾರಣೆಯಲ್ಲಿ ಗಮನಾರ್ಹ ಪಾತ್ರ ವಹಿಸಿತು.

ಪಿ.ಚಿದಂಬರಂ, ಮಾಜಿ ಸಚಿವ
ಜಿಎಸ್‌ಟಿ ಆರ್‌ಎಸ್‌ಎಸ್‌ ತೆರಿಗೆಯಾಗಿದ್ದು, ಜನರ ಪಾಲಿಗೆ ತೀರಾ ಕೆಟ್ಟ ಪದವಾಗಿ ಪರಿಣಮಿಸಿದೆ. ಜಿಎಸ್ಟಿಯಿಂದಾಗಿ ಜನ ಪಾವತಿಸುತ್ತಿರುವ ತೆರಿಗೆ ಹೆಚ್ಚಾಗಿದ್ದು ಅವರ ಜೇಬು ಸುಡುತ್ತಿದೆ. ಅಲ್ಲದೆ ಇದು ನೈಜ ಜಿಎಸ್ಟಿ ಅಲ್ಲವೇ ಅಲ್ಲ. ಜಿಎಸ್ಟಿ ಎಂದರೆ ಕೇವಲ ಒಂದು ತೆರಿಗೆ. ಆದರೆ ಇದರಲ್ಲಿ ನಾನಾ ತೆರಿಗೆಗಳಿವೆ. ಹೀಗಾಗಿ ಇದನ್ನು ಆರ್‌ಎಸ್‌ಎಸ್‌ ತೆರಿಗೆ ಎಂದು ಕರೆಯಬಹುದು. ಜಿಎಸ್‌ಟಿಯ ವಿನ್ಯಾಸ, ಮೂಲಸೌಕರ್ಯದ ಲಭ್ಯತೆ, ತೆರಿಗೆ ಮತ್ತು ಜಾರಿ ವಿಧಾನವನ್ನು ಸರಿಯಾದ ರೀತಿಯಲ್ಲಿ ಮಾಡಲಾಗಿಲ್ಲ. ಹೀಗಾಗಿ ವ್ಯಾಪಾರಸ್ಥರು, ಉದ್ದಿಮೆದಾರರು, ವರ್ತಕರು, ರಫ್ತುದಾರರು ಹಾಗೂ ಶ್ರೀಸಾಮಾನ್ಯನ ಪಾಲಿಗೆ ಜಿಎಸ್ಟಿ ಎಂದರೆ ಅದೊಂದು ಕೆಟ್ಟ ಪದ ಎಂದು ಅಂದು ಕೊಳ್ಳುವಂತಾಗಿದೆ.

Advertisement

ಗೋಯಲ್‌, ಹಣಕಾಸು ಸಚಿವ
ಇನ್ನು ಮುಂದೆ ಪ್ರತಿಯೊಬ್ಬ ವ್ಯಕ್ತಿಯು ತಾನು ಖರೀದಿಸಿದ ವಸ್ತುವಿಗೆ ಕಡ್ಡಾಯವಾಗಿ ರಶೀದಿ ಕೇಳಲೇಬೇಕು. ಇದು ಜನರ ಕರ್ತವ್ಯ ಕೂಡ. ಮುಂದಿನ 15 ದಿನಗಳಲ್ಲಿ ಸರಕಾರ ಈ ಕುರಿತಂತೆ ಅರಿವು ಮೂಡಿಸಲಿದೆ. ಒಂದೊಮ್ಮೆ ಜನ ರಶೀದಿ ಕೇಳಲು ಶುರು ಮಾಡಿದರೆ, ನಾವು ವಸ್ತುಗಳ ಮೇಲೆ ಹಾಕುತ್ತಿರುವ ತೆರಿಗೆಯ ಪ್ರಮಾಣ ಇಳಿಕೆ ಮಾಡಬಹುದು. ಅಂದರೆ ಶೇ.4 ರಿಂದ ಶೇ.5 ರಷ್ಟು ತೆರಿಗೆ ಕಡಿಮೆ ಮಾಡಬಹುದು. ಅಲ್ಲದೆ ಅಂಗಡಿ ಮಾಲೀಕನೊಬ್ಬ ಕಡಿಮೆ ಹಣಕ್ಕೆ ವಸ್ತು ನೀಡಿ ರಶೀದಿ ನೀಡಲಿಲ್ಲವೆಂದಾದರೆ ಗ್ರಾಹಕರು ಹೆಲ್ಪ್ಲೈನ್‌ಗೆ ದೂರು ನೀಡಬೇಕು. ಇದಕ್ಕಾಗಿಯೇ ನಾವು ಸದ್ಯದಲ್ಲೇ 3-4 ಅಂಕಿಯ ಸಹಾಯವಾಣಿ ಶುರು ಮಾಡುತ್ತೇವೆ.

Advertisement

Udayavani is now on Telegram. Click here to join our channel and stay updated with the latest news.

Next