Advertisement

ಆನ್‌ಲೈನ್‌ ಗೇಮಿಂಗ್‌ಗೆ GST

11:16 PM Aug 01, 2023 | Team Udayavani |

ಬೆಂಗಳೂರು: ಆನ್‌ಲೈನ್‌ ಬೆಟ್ಟಿಂಗ್‌ ಗೇಮ್‌ಗಳಿಗೆ ರಾಜ್ಯ ಜಿಎಸ್‌ಟಿ ತೆರಿಗೆ ವಿಧಿಸುವಂತೆ ಜಿಎಸ್‌ಟಿ ಕೌನ್ಸಿಲ್‌ ಸಭೆಯಲ್ಲಿ ರಾಜ್ಯ ಸರಕಾರ ಒತ್ತಾಯಿಸಲು ನಿರ್ಧರಿಸಿದೆ.
ಕಂದಾಯ ಸಚಿವ ಹಾಗೂ ಜಿಎಸ್‌ಟಿ ಕೌನ್ಸಿಲ್‌ ಸದಸ್ಯ ಕೃಷ್ಣ ಬೈರೇಗೌಡ ಸುದ್ದಿಗಾರರಿಗೆ ಮಂಗಳವಾರ ಈ ವಿಷಯ ತಿಳಿಸಿದ್ದು, ಶೇ. 28ರಷ್ಟು ತೆರಿಗೆ ವಿಧಿಸುವ ಸಾಧ್ಯತೆ ಇದೆ. ಎರಡು-ಮೂರು ವಿಧಾನದ ಮೂಲಕ ತೆರಿಗೆ ವಿಧಿಸುವ ಬಗ್ಗೆ ಚರ್ಚೆಗಳು ನಡೆಯುತ್ತಿವೆ ಎಂದು ಹೇಳಿದರು.

Advertisement

ಆನ್‌ಲೈನ್‌ ಬೆಟ್ಟಿಂಗ್‌ ಗೇಮ್‌ಗಳಿಂದ ಯುವಕರು ಬಲಿಯಾಗುತ್ತಿದ್ದಾರೆ. ಎಷ್ಟೋ ಕುಟುಂಬಗಳು ಬೀದಿಗೆ ಬಂದಿವೆ. ಕೆಲವರು ಆತ್ಮಹತ್ಯೆ ಮಾಡಿಕೊಂಡ ಪ್ರಕರಣಗಳು ನಮ್ಮ ಗಮನಕ್ಕೆ ಇವೆ. ಹೀಗಾಗಿ ಇಂತಹ ಗೇಮ್‌ ಗಳಿಗೆ ಟ್ಯಾಕ್ಸ್‌ ವಿಧಿಸುವ ಬಗ್ಗೆ ಚರ್ಚಿಸುತ್ತಿದ್ದೇವೆ. ನಾಳೆ ನಡೆಯುವ ಜಿಎಸ್‌ಟಿ ಸಭೆಯಲ್ಲಿ ವಿವರಣೆ ಕೊಡುತ್ತೇವೆ. ಕಡಿಮೆ ಟ್ಯಾಕ್ಸ್‌ ಹಾಕುವುದರಿಂದ ಉತ್ತೇಜನ ಕೊಟ್ಟಂತೆ ಆಗುತ್ತದೆ. ನಮ್ಮ ರಾಜ್ಯದ ನಿಲುವು ರಾಷ್ಟಕ್ಕೂ ಕೂಡ ಒಳ್ಳೆಯದಾಗುತ್ತದೆ ಎಂದರು.
ಅಧಿಕಾರದ ಗುಂಗಿನಲ್ಲೆ ಸಂಘಟನೆ ಮರೆಯಬಾರದು

ದಿಲ್ಲಿಯಲ್ಲಿ ಕಾಂಗ್ರೆಸ್‌ ಹೈಕಮಾಂಡ್‌ ಸಭೆ ಕರೆದಿದೆ. ಲೋಕಸಭಾ ಚುನಾವಣೆ ಸಂಬಂಧ ಸಭೆ ಇದೆ. ಒಂಬತ್ತು ವರ್ಷಗಳಲ್ಲಿ ಬಿಜೆಪಿ ಸರಕಾರದಿಂದ ಅಭಿವೃದ್ಧಿ ಆಗಿಲ್ಲ. ಕೇಂದ್ರದಲ್ಲಿ ಅಭಿವೃದ್ಧಿ ಮಾಡುವ ಸರಕಾರ ಬರಬೇಕು. ಐಎನ್‌ಡಿಐಎ ಮೈತ್ರಿಕೂಟಕ್ಕೆ ಒಳ್ಳೆಯ ಫ‌ಲಿತಾಂಶ ಬರಬೇಕು. ಹೀಗಾಗಿ ನಾವು ಈಗಿನಿಂದಲೇ ತಂತ್ರಗಾರಿಕೆ ಮಾಡಬೇಕು. ನಾವು ಎಚ್ಚರ ತಪ್ಪುವಂತಿಲ್ಲ. ಮುಂದಿನ ಚುನಾವಣೆ ಗೆಲ್ಲುವ ಬಗ್ಗೆ ಗಂಭೀರ ಚರ್ಚೆ ನಡೆಸಿ ಗೆಲ್ಲುವ ಅಭ್ಯರ್ಥಿ ಹುಡುಕಬೇಕಿದೆ ಎಂದು ಅಭಿಪ್ರಾಯಪಟ್ಟರು.

ಎಐಸಿಸಿ ರಿಪೋರ್ಟ್‌ ಕಾರ್ಡ್‌ ಕೇಳುವುದಿಲ್ಲ

ಅಧಿಕಾರದ ಗುಂಗಿನಲ್ಲಿ ಸಂಘಟನೆ ಮರೆಯಬಾರದು. ಗೆಲುವು ಪಡೆಯಲು ಏನೆಲ್ಲಾ ತಂತ್ರಗಾರಿಕೆ ಮಾಡಬೇಕು ಅನ್ನೋ ಬಗ್ಗೆ ಚರ್ಚೆ ನಡೆಸುತ್ತೇವೆ. ಬಿ.ಕೆ. ಹರಿಪ್ರಸಾದ್‌ ಅವರ ಹೇಳಿಕೆ ಹಿನ್ನೆಲೆಯಲ್ಲಿ ಈ ಸಭೆ ನಡೆಸುತ್ತಿಲ್ಲ. ಇದು ಕೇವಲ ಚುನಾವಣ ತಯಾರಿ ಸಭೆ. ಪಕ್ಷ ಅಂದ ಮೇಲೆ ಅಭಿಪ್ರಾಯ ಭೇದ ಇರುತ್ತದೆ. ಕುಟುಂಬದಲ್ಲಿಯೇ ಭಿನ್ನ ಅಭಿಪ್ರಾಯಗಳು ಇರುತ್ತವೆ. ಇದನ್ನು ಬಗೆಹರಿಸಲು ಹೈಕಮಾಂಡ್‌ ಮಾತುಕತೆ ನಡೆಸಿದೆ.

Advertisement

ಹಲವು ರಾಜ್ಯಗಳಲ್ಲಿ ಇಂತಹ ಸಮಸ್ಯೆ ಇದ್ದಾಗ ಹೈಕಮಾಂಡ್‌ ಯಶಸ್ವಿಯಾಗಿ ನಿಭಾಯಿಸಿದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಪಕ್ಷವೇ ವಿಭಾಗವಾಯಿತು ಎಂಬಂತೆ ಚರ್ಚೆ ನಡೆಯಿತು. ಆದರೆ ಒಟ್ಟಾಗಿ ಹೋಗಿ ಗೆದ್ದು ಬಂದಿದ್ದೇವೆ. ಲೋಕಸಭೆಯನ್ನೂ ಒಟ್ಟಾಗಿ ಎದುರಿಸುತ್ತೇವೆ. ಸಚಿವರ ರಿಪೋರ್ಟ್‌ ಕಾರ್ಡ್‌ ಕೇಳಿರುವ ಬಗ್ಗೆ ಮಾಹಿತಿ ಇಲ್ಲ. ಅದು ಮುಖ್ಯಮಂತ್ರಿಗಳ ಜವಾಬ್ದಾರಿ. ಎಐಸಿಸಿ ಸದ್ಯಕ್ಕೆ ರಿಪೋರ್ಟ್‌ ಕಾರ್ಡ್‌ ಕೇಳುವುದಿಲ್ಲ ಎಂದು ಕೃಷ್ಣ ಬೈರೇಗೌಡ ಸ್ಪಷ್ಟಪಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next