Advertisement

ಜಿಎಸ್‌ಟಿ ವ್ಯಾಪ್ತಿಗೆ ಬಂದೀತೆ? ಸದ್ದಿಲ್ಲದೆ ಹೆಚ್ಚುತ್ತಿದೆ ತೈಲ ಬೆಲೆ

12:58 PM Jan 18, 2018 | |

ಕಳೆದ ಸೋಮವಾರ ಪೆಟ್ರೋಲು ಮತ್ತು ಡೀಸೆಲ್‌ ಬೆಲೆ ಹೊಸ ದಾಖಲೆಯನ್ನು ಮಾಡಿದೆ. 2014ರ ಬಳಿಕ ಇದೇ ಮೊದಲ ಬಾರಿ ಪೆಟ್ರೋಲು ಲೀಟರಿಗೆ ರೂ. 70 ಮತ್ತು ಡೀಸೆಲ್‌ ರೂ. 60 ದಾಟಿತು. ಸದ್ಯ ಕರ್ನಾಟಕದಲ್ಲಿ ಪೆಟ್ರೋಲು ಬೆಲೆ 72 ಆಗಿದೆ. ಮುಂಬಯಿಯಲ್ಲಿ ದೇಶದಲ್ಲೇ ಗರಿಷ್ಠ 79 ರೂ. ಇದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲ ಬೆಲೆಯಲ್ಲಿ ತೀವ್ರ ಏರಿಕೆಯಾಗಿರುವುದು ಸ್ಥಳೀಯ ಮಾರುಕಟ್ಟೆಯಲ್ಲಿ ಪೆಟ್ರೋಲು ಮತ್ತು ಡೀಸೆಲ್‌ ಬೆಲೆ ಹೆಚ್ಚಾಗಲು ಕಾರಣ ಎನ್ನುವುದು ಎಲ್ಲರಿಗೂ ತಿಳಿದಿರುವ ವಿಚಾರ. ಇದಕ್ಕಾಗಿ ಸರಕಾರ ಪ್ರತ್ಯೇಕ ಸ್ಪಷ್ಟೀಕರಣ ನೀಡುವ ಅಗತ್ಯವೇನಿಲ್ಲ. ಕಳೆದ ಜೂನ್‌ನಲ್ಲಿ ಈ ತೈಲಗಳ ಬೆಲೆಯನ್ನು ನಿತ್ಯ ಪರಿಷ್ಕರಿಸುವ ವ್ಯವಸ್ಥೆ ಜಾರಿಗೆ ಬಂದ ಬಳಿಕ ಬಳಕೆದಾರರಿಗೆ ಲಾಭಕ್ಕಿಂತ ನಷ್ಟವೇ ಹೆಚ್ಚಾಗಿದೆ. ಒಂದೆರಡು ಸಲ ತುಸು ಬೆಲೆ ಕಡಿಮೆಯಾಗಿರುವುದು ಬಿಟ್ಟರೆ ಸತತವಾಗಿ ಏರುತ್ತಿದೆ. ನಿತ್ಯ ಪೈಸೆಯ ಲೆಕ್ಕದಲ್ಲಿ ಏರಿಕೆಯಾಗುವುದರಿಂದ ಜನರು ಹೆಚ್ಚು ತಲೆಕೆಡಿಸಿಕೊಳ್ಳದ ಕಾರಣ ಸರಕಾರ ನಿರಾಳವಾಗಿದೆ. ಈ ಪರಿಸ್ಥಿತಿಯನ್ನು ನೋಡುವಾಗ ರಾಜಕೀಯ ವಿರೋಧವನ್ನು ತಪ್ಪಿಸಿಕೊಳ್ಳುವ ಸಲುವಾಗಿಯೇ ನಿತ್ಯ ಬೆಲೆ ಪರಿಷ್ಕರಣೆ ಮಾಡುವ ತಂತ್ರವನ್ನು ಅನುಸರಿಸಲಾಗುತ್ತಿದೆಯೇ ಎಂಬ ಅನುಮಾನ ಕಾಡದಿರದು. 

Advertisement

ಕಚ್ಚಾತೈಲ ಬೆಲೆ ಹೆಚ್ಚಾಗಿದೆ ಎನ್ನುವುದು ನಿಜ. ಕಳೆದ ವಾರ ಕಚ್ಚಾತೈಲ ಬೆಲೆ ಬ್ಯಾರಲ್‌ಗೆ 70 ಡಾಲರ್‌ ಆಗಿದೆ. ನರೇಂದ್ರ ಮೋದಿ ಸರಕಾರ ಅಧಿಕಾರಕ್ಕೆ ಬಂದ ಸಮಯದಲ್ಲಿ ಈ ಬೆಲೆ 50 ಡಾಲರ್‌ ಇತ್ತು.ಇದಕ್ಕೂ ಹಿಂದೆ 2012ರ ಸಮಯಕ್ಕೆ ಹೋದಾಗ ಬ್ಯಾರಲ್‌ಗೆ 120 ಡಾಲರ್‌ ಆಗಿತ್ತು. ಆಗಲೂ ಪೆಟ್ರೋಲು ಬೆಲೆ ಲೀಟರಿಗೆ ರೂ.65 ಇತ್ತು. ಈಗ ಬ್ಯಾರಲ್‌ಗೆ 70 ಡಾಲರ್‌ ಇರುವಾಗ 70 ರೂ.ಇದೆ. ಅಂದರೆ ಕಚ್ಚಾತೈಲ ಬೆಲೆ ಹೆಚ್ಚಿದರೂ ಕಡಿಮೆಯಾದರೂ ಪೆಟ್ರೋಲು ಮತ್ತು ಡೀಸೆಲ್‌ ಬೆಲೆಯಲ್ಲಿ ಭಾರೀ ಎನ್ನುವಂತಹ ವ್ಯತ್ಯಾಸವಾಗುವುದಿಲ್ಲ ಎಂದಾಯಿತು. ಸದ್ಯ ಪೆಟ್ರೋಲು ಮತ್ತು ಡೀಸೆಲ್‌ ಬೆಲೆ ನಿರ್ಧರಿಸುವುದು ತೈಲ ಕಂಪೆನಿಗಳೇ ಹೊರತು ಸರಕಾರವಲ್ಲ. 

ಸರಕಾರ ಹೆಚ್ಚೆಂದರೆ ಕಸ್ಟಮ್ಸ್‌ ಸುಂಕವನ್ನು ಕಡಿತಗೊಳಿಸಿ ಒಂದೆರಡು ರೂಪಾಯಿ ಬೆಲೆ ಇಳಿಯುವಂತೆ ಮಾಡಬಹುದು. ರಾಜ್ಯ ಸರಕಾರಗಳು ಕೂಡ ತಮ್ಮ ಪಾಲಿನ ತೆರಿಗೆಯಲ್ಲಿ ತುಸು ಕಡಿತ ಮಾಡಿ ಜನರಿಗೆ ಒಂದಷ್ಟು ಅನುಕೂಲ ಮಾಡಿಕೊಡಬಹುದು. ಆದರೆ ಕೇಂದ್ರ ಮತ್ತು ರಾಜ್ಯ ಸರಕಾರಗಳಿಗೆ ಈ ಸುಂಕಗಳೇ ಮುಖ್ಯ ಆದಾಯ ಮೂಲವಾಗಿರುವುದರಿಂದ ಕಡಿತಕ್ಕೆ ಒಪ್ಪಿಕೊಳ್ಳುವುದಿಲ್ಲ. ಹಾಲಿ ಎನ್‌ಡಿಎ ಸರಕಾರ ಅಧಿಕಾರಕ್ಕೆ ಬಂದ ಬಳಿಕ ಒಂದು ಸಲ ಮಾತ್ರ ಕಸ್ಟಮ್ಸ್‌ ಸುಂಕವನ್ನು ಕಡಿತಗೊಳಿಸಿದೆ.ಅದು ಕಳೆದ ಅಕ್ಟೋಬರ್‌ನಲ್ಲಿ ಪೆಟ್ರೋಲು ಬೆಲೆ ರೂ.70 ದಾಟಿದಾಗ. ಇದರ ಪರಿಣಾಮವಾಗಿ ಲೀಟರಿಗೆ 2 ರೂ. ಇಳಿಕೆಯಾಗಿತ್ತು.ಅನಂತರ ಪೈಸೆಗಳ ಲೆಕ್ಕದಲ್ಲೇ ಏರುತ್ತಾ ಹೋಗಿ ಮತ್ತೆ ಮೊದಲಿನ ಸ್ಥಿತಿಗೆ ತಲುಪಿದೆ. ಆದರೆ ಇದೇ ವೇಳೆ 2014ರಿಂದ 2017ರ ನಡುವೆ ಒಂಬತ್ತು ಸಲ ಕಸ್ಟಮ್ಸ್‌ ಸುಂಕ ಏರಿಕೆಯಾಗಿತ್ತು ಎನ್ನುವುದು ಯಾರ ಗಮನಕ್ಕೂ ಬಂದಿಲ್ಲ. ಸುಂಕ ಕಡಿತ ಎನ್ನುವುದು ಕೇಂದ್ರ ಮತ್ತು ರಾಜ್ಯ ಸರಕಾರಗಳ ನಡುವಿನ ಹಗ್ಗ ಜಗ್ಗಾಟಕ್ಕೆ ಕಾರಣವಾಗುತ್ತದೆ. ರಾಜ್ಯಗಳು ಕೇಂದ್ರವೇ ಕಸ್ಟಮ್ಸ್‌ ಸುಂಕ ಕಡಿತ ಮಾಡಲಿ ಎಂದರೆ ಕೇಂದ್ರ ಸರಕಾರ ರಾಜ್ಯಗಳು ವ್ಯಾಟ್‌ ಕಡಿತಗೊಳಿಸಲಿ ಎಂದು ಹೇಳಿ ತನ್ನ ಹೊಣೆಯಿಂದ ಜಾರಿಕೊಳ್ಳುತ್ತದೆ. 

ಪೆಟ್ರೋಲು ಮತ್ತು ಡೀಸೆಲ್‌ ಬೆಲೆ ಜೇಬಿಗೆ ಕತ್ತರಿ ಹಾಕುತ್ತಿರುವುದು ಜನರ ಅರಿವಿಗೆ ಬರುತ್ತಿದೆ. ಮಾಮೂಲು ಸಂದರ್ಭಗಳಲ್ಲಾಗಿದ್ದರೆ 25 ಪೈಸೆ ಹೆಚ್ಚಾದರೂ ಆಕಾಶ ಭೂಮಿ ಒಂದು ಮಾಡುತ್ತಿದ್ದ ವಿಪಕ್ಷಗಳು ಈಗ ರೂಪಾಯಿಗಳ ಲೆಕ್ಕದಲ್ಲಿ ಹೆಚ್ಚಾಗಿದ್ದರೂ ಮೌನವಾಗಿರುವುದನ್ನು ನೋಡುವಾಗ ಆಶ್ಚರ್ಯವಾಗುತ್ತದೆ. ಸದ್ಯದ ಪರಿಸ್ಥಿತಿಯಲ್ಲಿ ಪೆಟ್ರೋಲು ಮತ್ತು ಡೀಸೆಲ್‌ ಬೆಲೆ ಇಳಿಯಬಹುದು ಎಂದು ನಿರೀಕ್ಷಿಸು ವಂತಿಲ್ಲ. ಆದರೆ ಎಲ್ಲಿಯಾದರೂ ಜಿಎಸ್‌ಟಿ ವ್ಯಾಪ್ತಿಗೆ ಈ ಎರಡು ತೈಲ ಉತ್ಪನ್ನಗಳನ್ನು ತಂದರೆ ಬೆಲೆಯಲ್ಲಿ ಭಾರೀ ಇಳಿಕೆಯಾಗಬಹುದು ಎನ್ನುವ ದೂರದ ಆಶೆ ಜನರಲ್ಲಿದೆ. ಕೆಲ ಸಮಯದ ಹಿಂದೆ ಸ್ವತಃ ಸರಕಾರವೇ ರಾಜ್ಯಗಳು ಒಪ್ಪಿದರೆ ಜಿಎಸ್‌ಟಿ ವ್ಯಾಪ್ತಿಗೆ ತರಲು ತಯಾರಿರುವುದಾಗಿ ಹೇಳಿತ್ತು. ಜಿಎಸ್‌ಟಿಯ ಗರಿಷ್ಠ ಮಿತಿಯಾಗಿರುವ ಶೇ. 28 ತೆರಿಗೆ ಹಾಕಿದರೂ ಬೆಲೆಯಲ್ಲಿ ಗಣನೀಯ ಇಳಿಕೆಯಾಗಲಿದೆ. ಈ ಶುಭಗಳಿಗೆಗಾಗಿ ಜನರು ಕಾತರದಿಂದ ಕಾಯುತ್ತಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next